ಸದನದಲ್ಲಿ ಶಿವಕುಮಾರ ಸ್ವಾಮೀಜಿ, ಜಾರ್ಜ್ ಫರ್ನಾಂಡೀಸ್ ಸೇರಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ!

ತ್ರಿವಿಧ ದಾಸೋಹಿ, ಸಿದ್ಧಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿ, ಹಿರಿಯ ರಾಜಕೀಯ ಮುತ್ಸದ್ಧಿ ಜಾರ್ಜ್ ಫರ್ನಾಂಡೀಸ್ ಹಾಗೂ ಹಿರಿಯ ನಟ ಲೋಕನಾಥ್ ಮತ್ತಿತರ...

Published: 06th February 2019 12:00 PM  |   Last Updated: 06th February 2019 03:25 AM   |  A+A-


Shivakumara Swamiji, George Fernandes

ಶಿವಕುಮಾರ ಸ್ವಾಮೀಜಿ, ಜಾರ್ಜ್ ಫರ್ನಾಂಡಿಸ್

Posted By : VS VS
Source : Online Desk
ಬೆಂಗಳೂರು: ತ್ರಿವಿಧ ದಾಸೋಹಿ, ಸಿದ್ಧಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿ, ಹಿರಿಯ ರಾಜಕೀಯ ಮುತ್ಸದ್ಧಿ ಜಾರ್ಜ್ ಫರ್ನಾಂಡೀಸ್ ಹಾಗೂ ಹಿರಿಯ ನಟ ಲೋಕನಾಥ್ ಮತ್ತಿತರ ಗಣ್ಯರಿಗೆ ವಿಧಾನಮಂಡಲದಲ್ಲಿಂದು ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ರಾಜ್ಯಪಾಲರ ಭಾಷಣದ ನಂತರ ಉಭಯ ಸದನಗಳಲ್ಲೂ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. 

ವಿಧಾನಸಭೆಯಲ್ಲಿ ಸಭಾಧ್ಯಕ್ಷ ರಮೇಶ್ ಕುಮಾರ್ ಸಂತಾಪ ಸೂಚಕ ನಿರ್ಣಯ ಮಂಡಿಸಿ ಅಗಲಿದ ಗಣ್ಯರ ಗುಣಗಾನ ಮಾಡಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮಾತನಾಡಿ,  ಸಿದ್ದಗಂಗಾ ಸ್ವಾಮೀಜಿ ಸಮಾಜದ ಎಲ್ಲಾ ವರ್ಗದ ಮಕ್ಕಳಿಗೆ ಶಿಕ್ಷಣ ನೀಡಿದ ಮಹಾನ್ ಚೇತನ. ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಗೈದ ಅವರು ಯಾವುದೇ ರಾಜಕೀಯದ ಸೋಂಕಿಗೆ ಸಿಲುಕಿರಲಿಲ್ಲ. ಎಲ್ಲಾ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿ ಉತ್ತಮ ಮಾರ್ಗದಲ್ಲಿ ನಡೆಯುವಂತೆ ಆಶೀರ್ವದಿಸಿದ್ದರು. ಅವರಿಂದ ನಾನು ಪುನೀತನಾಗಿದ್ದೇನೆ ಎಂದರು. 

ಜಾರ್ಜ್ ಫರ್ನಾಂಡೀಸ್ 8 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರು  ಈ ನಾಡಿಗೆ ಕೊಂಕಣ ರೈಲು ಕೊಟ್ಟ ದೊಡ್ಡ ಕೊಡುಗೆಯಾಗಿದೆ. ರೈಲ್ವೇ, ರಕ್ಷಣೆ, ಕಾರ್ಮಿಕ ಸಚಿವರಾಗಿ ಜಾರ್ಜ್ ಫರ್ನಾಂಡೀಸ್ ದೇಶಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದರು. 

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾತನಾಡಿ, ಡಾ. ಶಿವಕುಮಾರ ಸ್ವಾಮೀಜಿ ನಿಧಕ್ಕೂ ಒಂದು ವಾರದ ಮುಂಚೆ ಅವರನ್ನು ಭೇಟಿ ಮಾಡಿದ್ದೆ. ಆಗ ನನಗೆ ಸಾಕಾಯ್ತು, ಸಾಕಾಯ್ತು ಎಂದು ಹೇಳುತ್ತಿದ್ದರು. ಅವರ ಮಾತು ಕೇಳಿ ತುಂಬಾ ನೋವಾಯಿತು. ಬಸವಣ್ಣನವರನ್ನು ಬಿಟ್ಟರೆ ಸಿದ್ದಗಂಗಾ ಶ್ರೀಗಳೇ ನಿಜವಾದ ದೇವರು ಎಂದು ಬಣ್ಣಿಸಿದರು. 

ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಡಾ. ಶಿವಕುಮಾರ ಸ್ವಾಮೀಜಿ ಅವರು  ಕಾಯಕಯೋಗಿಯಾಗಿ ಬಸವಣ್ಣನ ಆದರ್ಶದ ಪ್ರತೀಕವಾಗಿದ್ದರು. ಅವರ ನಿಧನ ಸಮಸ್ತ ಜನರಿಗೆ ನೋವು ತಂದಿದೆ. ವೈಯಕ್ತಿಕವಾಗಿ ತಮಗೂ ಅಪಾರ ನೋವುಂಟಾಗಿದೆ ಎಂದರು. 

ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಮಾತನಾಡಿ, ಶಿಕ್ಷಣ, ದಾಸೋಹ, ಆಶ್ರಯ ಒದಗಿಸುವುದು ಸಾಮಾನ್ಯ ಕೆಲಸವಲ್ಲ. ಅವರು ಜಾತಿಮತ ನೋಡಿದವರಲ್ಲ. ಎಲ್ಲ ಜಾತಿಧರ್ಮದವರಿಗೆ ಅವಕಾಶ ಕಲ್ಪಿಸಿದ್ದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡಿದ್ದ ಮಹಾನ್ ಚೇತನ. ಇದೇ ರೀತಿ  ಜಾರ್ಜ್ ಫರ್ನಾಂಡೀಸ್ ನಿಧನ ಸಹ ತಮಗೆ ನೋವು ತಂದಿದೆ ಎಂದರು. 

ಮೇಲ್ಮನೆಯಲ್ಲಿ ಸಿದ್ದಗಂಗಾ ಶ್ರೀಗಳು, ಹಿರಿಯ ರಾಜಕಾರಣಿ ಜಾರ್ಜ್ ಫರ್ನಾಂಡಿಸ್ ಹಾಗೂ ನಟ ಲೋಕನಾಥ ಅವರ ನಿಧನಕ್ಕೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸಂತಾಪ ಸೂಚಕ ನಿರ್ಣಯ ಮಂಡಿಸಿ ಅವರ ಸೇವೆಗಳನ್ನು ಸ್ಮರಿಸಿದರು.

ಸಭಾನಾಯಕಿ ಜಯಮಾಲಾ ಮಾತನಾಡಿ, ಶ್ರೀಗಳು ಮತ್ತು ರಾಜಕುಮಾರ್ ಭೇಟಿ ಬಗ್ಗೆ ವಿವರಿಸಿದರು. ಶ್ರೀಗಳು ಪರಿಸರವನ್ನು ಮಕ್ಕಳಂತೆ ಕಂಡವರು .ಅವರ ಆದರ್ಶ ಪಾಲಿಸುವುದೇ ನಿಜವಾಗಿಯೂ ಶ್ರೀಗಳಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.

ಜಾರ್ಜ್ ಫರ್ನಾಂಡೀಸ್ ಅಪ್ರತಿಮ ರಾಜಕಾರಣಿಯಾಗಿದ್ದು,ಯಾವುದೇ ಒಂದು ರಾಜ್ಯಕ್ಕೆ ಅಂಟಿಕೊಳ್ಳದ ರಾಜಕಾರಣ ಮಾಡಿದ ಅವರು. ಕರ್ನಾಟಕದ ಮಂಗಳೂರಿನವರು ಎನ್ನುವುದು ಹೆಮ್ಮೆಯ ವಿಷಯ. ಕೈಗಾರಿಕಾ, ರೈಲ್ವೆ ಸಚಿವರಾಗಿ ಕಾರ್ಮಿಕರ ಬಾಳಿಗೆ ಆಶಾಕಿರಣವಾಗಿದ್ದರು. ಅವರ ನಿಧನದಿಂದ ಹಳೆಯ ಮತ್ತು ಹೊಸ ರಾಜಕಾರಣಿಗಳ ನಡುವಿನ ಕೊಂಡಿ ಕಳಚಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಲೋಕನಾಥ್ ಸಂಸ್ಕಾರ ಚಿತ್ರದಲ್ಲಿ ಮೊದಲಿಗೆ ನಾಯಕರಾಗಿ ಪಾದಾರ್ಪಣೆ ಮಾಡಿ ಬಳಿಕ ಫೋಷಕ ನಟರಾದವರು.

ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರನ್ನು ಲೋಕನಾಥ್ ಅಂಕಲ್ ಎಂದೇ ಖ್ಯಾತಿಪಡೆದವರು. ಅವರ ಶಿಸ್ತನ್ನು ಚಿತ್ರರಂಗ ಸದಾ ನೆನಪಿಸಿಕೊಳ್ಳುತ್ತದೆ ಎಂದು‌ಸ್ಮರಿಸಿ,  ಗಣ್ಯರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸಿದರು. ಸದನದಲ್ಲಿ ಅಗಲಿದ ಗಣ್ಯರಿಗೆ ಒಂದು ನಿಮಿಷ ಮೌನ ಆಚರಿಸಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
Stay up to date on all the latest ರಾಜಕೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp