ಕುಮಾರಸ್ವಾಮಿ ಆಡಿಯೋ 'ಬಾಂಬ್' ಗೆ ಪ್ರತಿಯಾಗಿ ಬಿಜೆಪಿ ವಿಡಿಯೋ 'ಬಾಂಬ್'

ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಸಿಡಿಸಿದ್ದ ಯಡಿಯೂರಪ್ಪ ಅವರ ಧ್ವನಿಮುದ್ರಿಕೆಯ ಆಪರೇಷನ್​ ಆಡಿಯೋ ಬಾಂಬ್​ಗೆ ಪ್ರತಿಯಾಗಿ...
ಎಚ್ ಡಿ ಕುಮಾರಸ್ವಾಮಿ - ಬಿಎಸ್ ಯಡಿಯೂರಪ್ಪ
ಎಚ್ ಡಿ ಕುಮಾರಸ್ವಾಮಿ - ಬಿಎಸ್ ಯಡಿಯೂರಪ್ಪ
ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಸಿಡಿಸಿದ್ದ ಯಡಿಯೂರಪ್ಪ ಅವರ ಧ್ವನಿಮುದ್ರಿಕೆಯ ಆಪರೇಷನ್​ ಆಡಿಯೋ ಬಾಂಬ್​ಗೆ ಪ್ರತಿಯಾಗಿ ಪ್ರತಿಪಕ್ಷ ಬಿಜೆಪಿ ವಿಡಿಯೋ ಬಾಂಬ್​ ಸಿಡಿಸಲು ಮುಂದಾಗಿದೆ.
ವಿಧಾನ ಪರಿಷತ್​ ಸದಸ್ಯರನ್ನಾಗಿ ಮಾಡಲು ಪರಿಷತ್ ​ಆಕಾಂಕ್ಷಿ ವಿಜುಗೌಡರಿಂದ 25 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಅವರು ಹಣಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ತಮ್ಮ ಬಳಿ ಇದೆ. ಅದನ್ನು ಸೋಮವಾರ ಸ್ಪೀಕರ್​ ರಮೇಶ್​ ಕುಮಾರ್​ ಅವರಿಗೆ ಸಲ್ಲಿಸುತ್ತೇವೆ. ಆಗ ಯಾರು ಯಾರಿಗೆ ಆಮಿಷ ಒಡ್ಡಿದ್ದರು ಎಂಬುದು  ಗೊತ್ತಾಗುತ್ತದೆ ಎಂದು ಬಿಜೆಪಿ ಶಾಸಕ, ಮಾಜಿ ಸಚಿವ ಅರವಿಂದ್​ ಲಿಂಬಾವಳಿ ಹೇಳಿದ್ದಾರೆ.
ಇಂದು ಡಾಲರ್ಸ್ ಕಾಲೋನಿಯಲ್ಲಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಿಂಬಾವಳಿ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಕರಣದಲ್ಲಿ ಅನಗತ್ಯವಾಗಿ ಸ್ಪೀಕರ್​ ಅವರನ್ನು ಎಳೆದು ತಂದಿದ್ದಾರೆ. ಮುಖ್ಯಮಂತ್ರಿ ಈ ಆಡಿಯೋ ತಯಾರಿಸಲು ಕಂಠೀರವ ಸ್ಟುಡಿಯೋಗೆ ಹೋಗಿದ್ದರಾ ಎಂದು ಲೇವಡಿ ಮಾಡಿದ್ದಾರೆ.
ಸ್ಪೀಕರ್ ರಮೇಶ್​ ಕುಮಾರ್​ ಅವರೆ ಯಡಿಯೂರಪ್ಪ ಅವರು ಹೀಗೆ ಮಾತನಾಡುವುದಿಲ್ಲ ಹಾಗೂ ಇದು ಯಡಿಯೂರಪ್ಪ ಅವರ ಧ್ವನಿ ಎಂಬುದು ಖಚಿತವಾಗಿಲ್ಲ ಎಂದಿದ್ದಾರೆ. ಕುಮಾರಸ್ವಾಮಿ ಎಂತಹ ಕೀಳುಮಟ್ಟದ ರಾಜಕೀಯ ಮಾಡತ್ತಿದ್ದಾರೆ ಎಂದು ಲಿಂಬಾವಳಿ ಕಿಡಿ ಕಾರಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕೆಲಸ ಮಾಡುತ್ತಿದ್ದೇನೆ. ತಮಗೆ ತೆಲಂಗಾಣ ಉಸ್ತುವಾರಿ ನೀಡಿರುವುದರಿಂದ ಅಧಿವೇಶನಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಯಾರ ಪ್ರಶ್ನೆಗಳಿಗೂ ಉತ್ತರ ಕೊಡುವ ಅಗತ್ಯ ಇಲ್ಲ ಎಂದು ಲಿಂಬಾವಳಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com