ರಾಹುಲ್ ಗಾಂಧಿಯಿಂದಾಗಿ ಯುಪಿಎ ಸಂಪುಟದಿಂದ ಹೊರಬಂದೆ; ಎಸ್ ಎಂ ಕೃಷ್ಣ

ದೇಶವನ್ನು ಅಭಿವೃದ್ಧಿ ಪಥದತ್ತ ಒಯ್ಯಲು ಮತ್ತು ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತ ನೀಡಲು ದೇಶಕ್ಕೆ...
ಎಸ್ ಎಂ ಕೃಷ್ಣ
ಎಸ್ ಎಂ ಕೃಷ್ಣ

ಮೈಸೂರು: ದೇಶವನ್ನು ಅಭಿವೃದ್ಧಿ ಪಥದತ್ತ ಒಯ್ಯಲು ಮತ್ತು ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತ ನೀಡಲು ದೇಶಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಂಥ ನಾಯಕರ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಹೇಳಿದ್ದಾರೆ.

ಮೋದಿಯವರು ಪಾಕಿಸ್ತಾನದ ಜೊತೆ ಮಾತುಕತೆ ನಡೆಸಿ ಗಡಿಭಾಗದಲ್ಲಿ ಶಾಂತಿ ಕಾಪಾಡುವ ಸಾಮರ್ಥ್ಯ ಹೊಂದಿದ್ದಾರೆ. ಬಲವಾದ ನಾಯಕತ್ವ ಗುಣ ಮತ್ತು ರಾಜಕೀಯ ಇಚ್ಛಾಶಕ್ತಿ ಅವರ ಶಕ್ತಿಯಾಗಿದೆ ಎಂದು ಹೊಗಳಿದರು.

ಮಂಡ್ಯದಲ್ಲಿ ನಿನ್ನೆ ಅವರು ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಕಳೆದ 5 ವರ್ಷಗಳಲ್ಲಿ ಮೋದಿಯವರು ಜನತೆಗೆ ನೀಡಿದ ಆಡಳಿತವನ್ನು ಸರಿಯಾಗಿ ಮನದಟ್ಟು ಮಾಡಲು ಪಕ್ಷದ ಕಾರ್ಯಕರ್ತರಿಗೆ ಇದು ಸರಿಯಾದ ಸಮಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, 2004ರಿಂದ 2014ರವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ರಾಹುಲ್ ಗಾಂಧಿ ಹೆಚ್ಚಿನ ಸಂವಿಧಾನ ಅಧಿಕಾರ ಚಲಾಯಿಸುತ್ತಿದ್ದರು. ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರಿಗೆ ಯಾವುದೇ ಅಧಿಕಾರವಿರಲಿಲ್ಲ. ಅದರಿಂದಾಗಿ 2ಜಿ, ಕಾಮನ್ ವೆಲ್ತ್, ಕಲ್ಲಿದ್ದಲು ಹಗರಣಗಳು ನಡೆದವು.

ಯುಪಿಎ ಸರ್ಕಾರದ ಅವಧಿಯಲ್ಲಿ ರಾಹುಲ್ ಗಾಂಧಿ ಮನಮೋಹನ್ ಸಿಂಗ್ ಅವರಿಗಿಂತ ಹೆಚ್ಚಿನ ಅಧಿಕಾರ ಹೊಂದಿದ್ದರು. ಇದರಿಂದಾಗಿ ಭ್ರಷ್ಟಾಚಾರ ನಡೆಯಿತು. ಸಂಪುಟದಲ್ಲಿ 80 ವರ್ಷಕ್ಕಿಂತ ಮೇಲಿನವರ ಅಗತ್ಯವಿಲ್ಲ ಎಂದು ರಾಹುಲ್ ಗಾಂಧಿ ನಿರ್ಧರಿಸಿದ್ದರಿಂದ ನಾನು ಸಂಪುಟದಿಂದ ಹೊರಬಂದೆ. ಪ್ರಧಾನಿಯಾಗಿ ಮನಮೋಹನ್ ಸಿಂಗ್ ಗಮನಕ್ಕೆ ಬಾರದೆಯೇ ಸರ್ಕಾರದಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದರು.

ಮೋದಿಯವರನ್ನು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೆ ಹೋಲಿಸಿದ ಎಸ್ ಎಂ ಕೃಷ್ಣ, ದೇಶವನ್ನು ಒಗ್ಗಟ್ಟಾಗಿ ಇಡಲು ಅವರ ನಾಯಕತ್ವದ ಅಗತ್ಯವಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com