ವಿಧಾನಸಭೆಯಲ್ಲಿ 'ಆಪರೇಷನ್ ಆಡಿಯೋ' ಸದ್ದು: ಚಾರಿತ್ರ್ಯವಧೆ ಸಾವಿಗಿಂತ ಕ್ರೂರ ಎಂದ ಸ್ಪೀಕರ್

ರಾಜ್ಯ ವಿಧಾನಸಭೆಯ ಕಲಾಪ ಸೋಮವಾರ ಒಂದು ರೀತಿ ನ್ಯಾಯಾಲಯದ ಕಲಾಪವಾಗಿ ಮಾರ್ಪಟ್ಟಿತ್ತು. ಅಲ್ಲಿನ ವಾದ, ವಿವಾದಗಳು, ಅಧಿವೇಶನದ ಚರ್ಚೆಯೋ...
ಸ್ಪೀಕರ್ ರಮೇಶ್ ಕುಮಾರ್
ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು: ರಾಜ್ಯ ವಿಧಾನಸಭೆಯ ಕಲಾಪ ಸೋಮವಾರ ಒಂದು ರೀತಿ ನ್ಯಾಯಾಲಯದ ಕಲಾಪವಾಗಿ ಮಾರ್ಪಟ್ಟಿತ್ತು. ಅಲ್ಲಿನ ವಾದ, ವಿವಾದಗಳು, ಅಧಿವೇಶನದ ಚರ್ಚೆಯೋ, ಇಲ್ಲ ಕೋರ್ಟ್ ವಾದವೋ ಎಂಬ ಅನುಮಾನ ಹುಟ್ಟಿಸಿದ್ದವು. ಬೆಳಗಿನ ಕಲಾಪದಲ್ಲಿ ಎಲ್ಲಾ ಸದಸ್ಯರಿಂದ ಕಾನೂನಿನ ಪದಗಳೇ ಕೇಳಿ ಬರುತ್ತಿದ್ದವು.
ಗುರುಮಿಠ್ಕಲ್ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಜೊತೆ ನಡೆದಿದೆ ಎನ್ನಲಾದ ಸಂಭಾಷಣೆ ವಿಚಾರ ವಿಧಾನಸಭೆಯಲ್ಲಿ ಅರ್ಥಪೂರ್ಣ ಚರ್ಚೆಗೆ ಗ್ರಾಸ ಒದಗಿಸಿತ್ತು. 
ಸಭೆಯಲ್ಲಿ ಯಾವುದೇ ಆರ್ಭಟ, ಕೋಲಾಹಲ ಇಲ್ಲದೇ ಶಾಂತವಾಗಿ ಹರಿಯುವ ನದಿಯಂತೆ ಸಾಗಿತ್ತು. ಪ್ರತಿಯೊಬ್ಬರ ಮಾತುಗಳನ್ನು ಇನ್ನೊಬ್ಬರು ಮನಸ್ಸು, ಕಿವಿ ತೆರೆದು ಕೇಳುವ ರೀತಿಯಲ್ಲಿ ಬೆಳಗಿನ ಕಲಾಪದ ಚರ್ಚೆಗಳು ಮಹತ್ವ, ಗಂಭೀರತೆ ಪಡೆದುಕೊಂಡಿತ್ತು.
ವಿಧಾನಸಭೆಯ ನಿಯಮಾವಳಿಯ ಪುಸ್ತಕಗಳನ್ನು ಪದೇ ಪದೇ ಸದಸ್ಯರು, ಸಭಾಧ್ಯಕ್ಷ ರಮೇಶ್ ಕುಮಾರ್ ಮತ್ತೆ ಮತ್ತೆ ಪುಟ ತಿರುಗಿಸಿ ನೋಡಿ, ಓದಿ, ಹೇಳಿ ವ್ಯಾಖ್ಯಾನ ಮಾಡಿದ ಪ್ರಸಂಗಗಳು ನಿರಂತರವಾಗಿ ಕಂಡುಬಂತು.  
ಆಡಿಯೋದಲ್ಲಿ ಸ್ಪೀಕರ್ ಮತ್ತು ಪ್ರಧಾನಮಂತ್ರಿ, ಸುಪ್ರೀಂಕೋರ್ಟ್ ನ್ಯಾಯಾಧೀಶರ ಬಗ್ಗೆ ಉಲ್ಲೇಖ ಇರುವುದರಿಂದ ಇದು ಸದನದ ಹಕ್ಕುಚ್ಯುತಿ, ಸ್ಪೀಕರ್ ಅವರ ಹಕ್ಕುಚ್ಯುತಿ ಜೊತೆಗೆ ನಿಂದನೆ ಕೂಡ ಎಂಬುದು ಕಾನೂನು ಸಚಿವ ಕೃಷ್ಣಭೈರೇಗೌಡ ಅವರ ಸಮರ್ಥ ವಾದವಾಗಿತ್ತು. ವಿಷಯವನ್ನು ಅವರು ಮನಮುಟ್ಟುವಂತೆ ಎಳೆಎಳೆಯಾಗಿ ಬಿಡಿಸಿಟ್ಟರು.
“ನಾನು ಈ ವಿಚಾರದಲ್ಲಿ ಯಾರ ಬಗ್ಗೆ ದೋಷಾರೋಪಣೆ ಮಾಡಲು ಹೋಗುವುದಿಲ್ಲ. ಆಡಿಯೋ ಬಗ್ಗೆ ಸಮಗ್ರ ತನಿಖೆಯಾಗಬೇಕು. ಇದರ ಹಿಂದಿನ ಉದ್ದೇಶಗಳು ಏನೆಂಬುದು ಜನರಿಗೆ ಸ್ಪಷ್ಟವಾಗಿ ಮನವರಿಕೆಯಾಗಬೇಕಿದೆ” ಎಂದು ಕಾನೂನು ಹಾಗೂ ಹಳೆಯ ಪ್ರಕರಣಗಳನ್ನು ಉದಾಹರಣೆಯಾಗಿ ಕೊಟ್ಟು ಇದು ಹಕ್ಕುಚ್ಯುತಿ, ಜೊತೆಗೆ ಸದನ, ಸ್ಪೀಕರ್ ಅವರ ನಿಂದನೆ. ಹೀಗಾಗಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ಜೆ.ಸಿ. ಮಾಧುಸ್ವಾಮಿ, “ಸದನದ ಹೊರಗೆ ನಡೆದಿರುವ ಘಟನಾವಳಿಗಳನ್ನು ಸದನದ ಹಕ್ಕುಚ್ಯುತಿ ಮತ್ತು ನ್ಯಾಯಾಂಗ ನಿಂದನೆ ಎಂದು ಬಿಂಬಿಸುವುದು ಎಷ್ಟರ ಮಟ್ಟಿಗೆ ಸರಿ? ಇದನ್ನು ಸಭಾಧ್ಯಕ್ಷರು ಭಾವನಾತ್ಮಕ ಮತ್ತು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲಾ ಶಾಸಕರು ಸಭಾಧ್ಯಕ್ಷರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆಯ್ಕೆ ಮಾಡಿದ ಶಾಸಕರೇ ವಿಶ್ವಾಸ ಇಟ್ಟಿರುವಾಗ, ಅಪನಂಬಿಕೆ ವ್ಯಕ್ತಪಡಿಸದೇ ಇರುವಾಗ, ಸಭಾಧ್ಯಕ್ಷರು ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದು ಸಮಂಜಸವಲ್ಲ. ಇದನ್ನು ಇಲ್ಲಿಗೆ ಬಿಟ್ಟುಬಿಡುವುದು ಒಳ್ಳೆಯದು. ಆದರೆ ಒಟ್ಟಾರೆ ಈ ಪ್ರಕರಣದಲ್ಲಿ ಯಾರು ಪಾತ್ರಧಾರಿಗಳು, ಯಾರು ಸೂತ್ರಧಾರಿಗಳು ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಇದಕ್ಕೆ ನಮ್ಮ ಬೆಂಬಲವಿದೆ, ಸಹಕಾರವಿದೆ” ಎಂದರು. 
ಮಾಧುಸ್ವಾಮಿ ಮಾತಿಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲೇ ಪರ - ವಿರೋಧ ಅಭಿಪ್ರಾಯ ಕೂಡ ವ್ಯಕ್ತವಾಯಿತು. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಹೆಚ್ಚು ಕಡಿಮೆ ಮಾಧುಸ್ವಾಮಿ ಅವರ ವಾದವನ್ನೇ ಮಂಡಿಸಿದರು. ಸಭಾಧ್ಯಕ್ಷರು ಇದನ್ನು ವೈಯಕ್ತಿಕವಾಗಿ ಮತ್ತು ಭಾವನಾತ್ಮಕವಾಗಿ ತೆಗೆದುಕೊಂಡು ಕೊರಗಬೇಕಾಗಿಲ್ಲ, ನೋವು ಪಡಬೇಕಾಗಿಲ್ಲ. ಎಲ್ಲಾ ಶಾಸಕರು ನಿಮ್ಮ ಮೇಲೆ ಸಂಪೂರ್ಣ ನಂಬಿಕೆ, ವಿಶ್ವಾಸ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ತಾವು ಘಟನೆ ಬಗ್ಗೆ ಹೆಚ್ಚು ಮನೋ ವ್ಯಾಕುಲಕ್ಕೆ ಒಳಗಾಗಬೇಕಾಗಿಲ್ಲ. ಆದರೆ ತಪ್ಪು ಮಾಡಿದವರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆ.ಸಿ.ಮಾಧುಸ್ವಾಮಿ ವಾದವನ್ನು ತಳ್ಳಿಹಾಕಿ ಮೇಲು ನೋಟಕ್ಕೆ ಘಟನಾವಳಿಗಳು ನಡೆದಿರುವುದು ಸತ್ಯ. ಕಳೆದ ಐದಾರು ತಿಂಗಳಿಂದ ರಾಜ್ಯದ ರಾಜಕೀಯ ವಿದ್ಯಮಾನದಲ್ಲಿ ನಡೆಯುತ್ತಿರುವ ಘಟನಾವಳಿಗಳು ಇದಕ್ಕೆ ಪೂರಕವಾಗಿದೆ. ಜನಸಾಮಾನ್ಯರಲ್ಲೂ ಸಹ ಇಂತಹ ಒಂದು ಘಟನೆ ನಡೆದಿದೆ ಎಂಬ ಭಾವನೆ ಬಂದಿದೆ. ಹೀಗಾಗಿ ಇದು ಎಲ್ಲೋ ಹೊರಗೆ ನಡೆದ ಘಟನೆ. ಆದ್ದರಿಂದ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂಬ ವಾದ ಸರಿಯಲ್ಲ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯ ಮತ್ತೊಬ್ಬ ಮುಖಂಡ, ಕೆ.ಎಸ್.ಈಶ್ವರಪ್ಪ ಮಾತನಾಡಿ, ಆಡಿಯೋ ನಕಲಿಯೋ ಅಥವಾ ಸಾಚಾವೋ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಹೀಗಾಗಿ ಮೊದಲು ಈ ಆಡಿಯೋದ ಸತ್ಯಾಸತ್ಯತೆ ಹೊರಗೆ ಬರಬೇಕು. ಕೆಲವರು ಸ್ಪೀಕರ್ ಮತ್ತು ನ್ಯಾಯಾಧೀಶರ ಹೆಸರನ್ನು ಬಳಸಿಕೊಂಡು ಮತ್ತಷ್ಟು ಶಾಸಕರನ್ನು ಪಕ್ಷ ಬಿಡಿಸಲು ನಡೆದಿರುವ ಪ್ರಯತ್ನವೂ ಆಗಿರಬಹುದು. ಹೀಗಾಗಿ ಇದರ ಬಗ್ಗೆಯೂ ಕೂಡ ಸಭಾಧ್ಯಕ್ಷರು ಗಮನ ಹರಿಸಬೇಕು ಎಂದರು.
ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಪ್ರಜಾಪ್ರಭುತ್ವ ಅಧೋಗತಿಗೆ ಇಳಿದಿದೆ. ಜನಪ್ರತಿನಿಧಿಗಳು ಎಂದು ಹೇಳಿಕೊಂಡು ಹೆಮ್ಮೆಯಿಂದ ಈ ಸದನಕ್ಕೆ ಬರಲು ಮುಜುಗರವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಈ ಘಟನೆಯನ್ನು ದೇಶ ವಿದೇಶದ ಜನರು ಅಚ್ಚರಿಯಿಂದ ನೋಡುವಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ರಾಜಕೀಯ ಮತ್ತು ಸಂಸದೀಯ ಇತಿಹಾಸಕ್ಕೆ ಇದು ಒಂದು ಕಳಂಕ, ಕಪ್ಪುಚುಕ್ಕೆಯಾಗಿದೆ. ಇದನ್ನು ಯಾರೇ ಮಾಡಿರಲಿ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಮುಂದೆ ಇಂತಹ ಅಸಹ್ಯಕರ ಘಟನೆಗಳು ಜರುಗದಂತೆ ಎಲ್ಲರೂ ಸೇರಿ ನಿರ್ಮಲ ವ್ಯವಸ್ಥೆ ರೂಪಿಸುವ ಹೊಣೆಗಾರಿಕೆ ಇದೆ ಎಂದರು.
ಒಂದು ಹಂತದಲ್ಲಿ ಡಿ.ಕೆ.ಶಿವಕುಮಾರ್ ಸಹ ಶಾಸಕರು ಮತ್ತು ಸಂಸದರನ್ನು ಜನ ಬಹಳ ಅಪನಂಬಿಕೆಯಿಂದ ನೋಡುವಂತಹ ಪರಿಸ್ಥಿತಿ ಬಂದಿದೆ ಎಂದರು. “ಸಾಚಾತನವನ್ನು ಎದೆಬಗೆದು ತೋರಿಸಲು ಸಾಧ್ಯವಿಲ್ಲ. ದಿನ ಬೆಳಗಾದರೆ ಮಾಧ್ಯಮಗಳಲ್ಲಿ ‘ಅವರು ಜೈಲು, ಇವರು ಬೇಲು’ ಎಂಬ ವರದಿಗಳು ನಿರಂತರವಾಗಿ ಬರುತ್ತಿವೆ. ಪರಿಣಾಮವಾಗಿ ಜನರು ನನ್ನನ್ನೂ ಸೇರಿದಂತೆ ಕೆಲವು ಜನಪ್ರತಿನಿಧಿಗಳನ್ನು ಕಳ್ಳ-ಕಳ್ಳ ಎಂದು ಕರೆಯುವಂತಹ ಕೆಟ್ಟ ಪರಿಪಾಠ ಬಂದಿದೆ. ಅಂತಹ ಅಧೋಗತಿ ಸ್ಥಿತಿ ಬಂದಿದೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ” ಎಂದು ಹೇಳಿದರಲ್ಲದೇ ಇದರ ಬಗ್ಗೆ ತನಿಖೆಯಾಗಬೇಕು, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದರು.
ಬಿಜೆಪಿಯ ರಮೇಶ್ ಕುಮಾರ್ ಮಾತನಾಡಿ, “ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸನ್ನಿವೇಶಕ್ಕಿಂತಲೂ ಇಂದು ನಿಮ್ಮ ಮೇಲಿನ ಘನತೆ ಗೌರವ, ಅಭಿಮಾನ ಎರಡು ಪಟ್ಟು ಹೆಚ್ಚಾಗಿದೆ. ಘಟನೆಯ ಬಗ್ಗೆ ಯಾವ ರೀತಿ ತನಿಖೆ ಮಾಡಿಸಬೇಕು ಎಂಬುದು ನಿಮ್ಮ ವಿವೇಚನೆಗೆ ಬಿಟ್ಟದ್ದು” ಎಂದು ಹೇಳಿದರು.
ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಮಾತನಾಡಿ, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಕಳಂಕ ಎಂಬುದರಲ್ಲಿ ಎರಡನೇ ಮಾತಿಲ್ಲ. ಮುಂದೆ ಈ ರೀತಿ ಘಟನಾವಳಿಗಳು ಜರುಗದಂತೆ ಏನು ಮಾಡಬೇಕು ಎಂಬುದೇ ಈಗ ಇರುವ ಸವಾಲು. ಅದನ್ನು ಸಮರ್ಥ ರೀತಿಯಲ್ಲಿ ನಿರ್ವಹಣೆ ಮಾಡಿ ಮುಂದೆ ಈ ರೀತಿ ಆಗದಂತೆ ಕ್ರಮ ತೆಗೆದುಕೊಳ್ಳಬೇಕೆಂದರು. 
ಇದಕ್ಕು ಮುಂಚೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, “ಆಡಿಯೋದಲ್ಲಿ ತಮ್ಮ ಹೆಸರು ಕೇಳಿಬಂದಿರುವುದರಿಂದ ಕಳೆದ 48 ಗಂಟೆಗಳ ಅವಧಿಯಿಂದಲೂ ಮನಸ್ಸು ಚಡಪಡಿಸುತ್ತಿದೆ. ನನ್ನ ಹೆಂಡತಿ ಮಕ್ಕಳಿಗೆ ಹೇಗಪ್ಪಾ ಮುಖ ತೋರಿಸುವುದು ಎಂಬ ಪಾಪಪ್ರಜ್ಞೆ ಕಾಡುತ್ತಿದೆ. ಎಲ್ಲರ ಹಿತವನ್ನೂ ಕಾಪಾಡಬೇಕಾದ ನನ್ನ ಮೇಲೆಯೇ ಒಂದು ಅಪನಂಬಿಕೆಯ ವಾತಾವರಣ ಬಂದಿದೆ. ಇದರಿಂದ ಮುಕ್ತನಾಗಿ ಹೊರಬರಬೇಕಾಗಿದೆ.
ನಾನು ದೊಮ್ಮಲೂರಿನ ಅಮರಜ್ಯೋತಿ ಬಡಾವಣೆಯ ಪುಟ್ಟ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ಸಭಾಧ್ಯಕ್ಷನಾಗಿದ್ದರೂ ಸರ್ಕಾರಿ ಮನೆಯನ್ನು ತೆಗೆದುಕೊಂಡಿಲ್ಲ. ಮಾಧ್ಯಮದವರು ಈಗಲೇ ಹೋಗಿ ನನ್ನ ಮನೆಯನ್ನು ತಪಾಸಣೆ ಮಾಡಬಹುದು. ಅಲ್ಲಿ ನನಗೆ ಕೊಟ್ಟಿದ್ದಾರೆಂಬ ಕೋಟ್ಯಂತರ ರೂಪಾಯಿ ಹಣವನ್ನು ಪತ್ತೆ ಹಚ್ಚಿಕೊಡಲಿ ಎಂದು ತಮ್ಮ ನೋವನ್ನು ತೋಡಿಕೊಂಡರು. 
'ನನ್ನ ಚಾರಿತ್ರ್ಯವಧೆ ಮಾಡಿದ್ರೆ ಸಾವಿಗಿಂಥಾ ಹೆಚ್ಚು ಕ್ರೌರ್ಯ ಆಗುತ್ತೆ'. ಈ ರೀತಿ ಆಪಾದನೆ ಬರುವಂತೆ ನಾನು ಎಂದು ನಡೆದುಕೊಂಡಿಲ್ಲ ಎಂದು ಸದನದಲ್ಲಿ ಸ್ಪೀಕರ್ ಭಾವುಕರಾದರು.
ಇಷ್ಟು ವರ್ಷ ಪ್ರಾಮಾಣಿಕನಾಗಿ ಬದುಕಿದ್ದೇನೆ. ನನ್ನ ಸಹೋದರ ನನ್ನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದಾನೆ. ನಾಳೆ ಇಷ್ಟು ದೊಡ್ಡ ಕಸದ ಬುಟ್ಟಿಯನ್ನು ತಲೆ ಮೇಲೆ ಹೊತ್ತುಕೊಂಡಿರುವ ಸಂಗತಿ ಗೊತ್ತಾದರೆ ಅವರ ಗತಿ ಏನಾಗುತ್ತದೆ ಎಂಬ ಚಿಂತೆ ಕಾಡುತ್ತಿದೆ ಎಂದು ಪ್ರತಿಕ್ಷಣ ತಮಗಾಗುತ್ತಿರುವ ನೋವನ್ನು ಹೊರಹಾಕಿದರು. ಅದೇ ನೋವಿನಿಂದಲೇ ನಾನು ಸರ್ಕಾರಕ್ಕೆ ಈ ಘಟನೆ ಬಗ್ಗೆ ಆದೇಶ ಮಾಡುವ ಶಕ್ತಿ, ಅಧಿಕಾರ ಇದ್ದರೂ ಏಕೋ ಏನೋ ಭಾರವಾದ ಮನಸ್ಸು ಸಹಕರಿಸುತ್ತಿಲ್ಲ. ಇದರ ಬಗ್ಗೆ ವಿಶೇಷ ತನಿಖೆ ಮಾಡಿಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂಬ ಸಲಹೆ ಕೊಡುತ್ತಿದ್ದೇನೆ. ಈ ಸಲಹೆಯನ್ನೇ ಸರ್ಕಾರ ಸೂಕ್ತ ನಿರ್ದೇಶನ ಎಂದು ಮಾರ್ಪಾಡು ಮಾಡಿಕೊಳ್ಳಬೇಕು” ಎಂದರು. 
ಒಟ್ಟಾರೆ ವಿಧಾನಸಭೆಯ ಇಂದಿನ ಕಾರ್ಯಕಲಾಪ ನ್ಯಾಯಾಲಯದ ಕಲಾಪವಾಗಿ ಮಾರ್ಪಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com