ಆಪರೇಷನ್ ಆಡಿಯೋ: ಎಸ್ಐಟಿ ತನಿಖೆಗೆ ಬಿಜೆಪಿ ವಿರೋದ, ನ್ಯಾಯಾಂಗ ತನಿಖೆಗೆ ಆಗ್ರಹ

ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಸೂಚನೆಯಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಆಪರೇಷನ್ ಕಮಲ ಆಡಿಯೋ ಪ್ರಕರಣದ....

Published: 11th February 2019 12:00 PM  |   Last Updated: 11th February 2019 06:48 AM   |  A+A-


BSY Audio clip row: BJP opposes SIT, Demands for Judicial probe

ಬಿಎಸ್ ಯಡಿಯೂರಪ್ಪ

Posted By : LSB LSB
Source : UNI
ಬೆಂಗಳೂರು: ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಸೂಚನೆಯಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಆಪರೇಷನ್ ಕಮಲ ಆಡಿಯೋ ಪ್ರಕರಣದ ತನಿಖೆಯನ್ನು ಎಸ್ಐಟಿ ತನಿಖೆಗೆ ಒಪ್ಪಿಸಿದ್ದಾರೆ. ಆದರೆ ಎಸ್ ಐಟಿ ತನಿಖೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ರತಪಕ್ಷ ಬಿಜೆಪಿ ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಸೋಮವಾರ ಒತ್ತಾಯಿಸಿದೆ.

ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಸಮಾವೇಶಗೊಂಡಾಗ  ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ ಸ್ಪೀಕರ್ ರೂಲಿಂಗ್ ಮರು ಪರಿಶೀಲಿಸುವಂತೆ ‌ಒತ್ತಾಯಿಸಿದರು. ಆದರೆ ಸಚಿವರು  ಮತ್ತು ಸಭಾಧ್ಯಕ್ಷ ರಮೇಶ್ ಕುಮಾರ್ ಸರ್ಕಾರದ ಮಟ್ಟದಲ್ಲೇ ತನಿಖೆ ನಡೆಯಲಿ ಎಂದು ಪಟ್ಟು ಹಿಡಿದರು. 

ಈ ವಿಚಾರದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ  ಸಚಿವರು, ಶಾಸಕರು ಮತ್ತು ಬಿಜೆಪಿ ಶಾಸಕರ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು. ವಾದ  ಪ್ರತಿವಾದದ ನಂತರ ಸಭಾಧ್ಯಕ್ಷ ರಮೇಶ್ ಕುಮಾರ್ ಈ ವಿಚಾರದಲ್ಲಿ ತಮ್ಮ ನಿಲುವು ಬದಲಿಸಲು  ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಅಂತಿಮವಾಗಿ ಇದೀಗ ಸರ್ಕಾರದ ಮಟ್ಟದಲ್ಲೇ  ತನಿಖೆ ನಡೆಯಬೇಕು ಎನ್ನುವ ನಿಲುವಿಗೆ ಸ್ಪೀಕರ್ ಅಂಟಿಕೊಂಡರು.  

ಮಾಧುಸ್ವಾಮಿಗೆ ಬಿಜೆಪಿಯ ಇತರೆ ಶಾಸಕರು ಧ್ವನಿಗೂಡಿಸಿದರು. ಎಸ್ಐಟಿ ತನಿಖೆ ಬೇಡ. ಸದನ ಸಮಿತಿ ರಚಿಸಿ ತನಿಖೆ ನಡೆಸಿ ಎಂದು ಒಕ್ಕೊರಲಿನಿಂದ ಬಿಜೆಪಿ ಸದಸ್ಯರು ಸ್ಪೀಕರ್ ರಮೇಶ್ ಕುಮಾರ್‍ ಅವರನ್ನು ಆಗ್ರಹಿಸಿದರು.

ಒಂದು ಖಾಸಗಿ ಸಂವಾದವನ್ನು ಬಹಿರಂಗ ಮಾಡಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ. ಆಡಿಯೋ ಸಿಡಿ ಮೀಡಿಯಾಗೆ ಬಿಡುಗಡೆ ಮಾಡಿದ್ದು ಕುಮಾರಸ್ವಾಮಿ ಅವರು,ಆ ಮೂಲಕ ಸ್ಪೀಕರ್ ಗೆ ನಿಜವಾದ ಅಗೌರವ ತೋರಿಸಿರೋದು ಸರ್ಕಾರ. ಅವರೇ ಅಡಿಯೋ ಬಗ್ಗೆ ತನಿಖೆ ನಡೆಸುವುದು ಒಪ್ಪಲು ಸಾಧ್ಯವಿಲ್ಲ ಎಂದು ಜೆ.ಸಿ.ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.

ರೂಲಿಂಗ್ ಮರು ಪರಿಶೀಲಿಸಲು ನಿರಾಕರಿಸಿದ ಸ್ಪೀಕರ್ ರಮೇಶ್ ಕುಮಾರ್, ನನ್ನನ್ನು ಬೊಂಬೆಯಂತೆ ಆಡಿಸಲು ನಿಮ್ಮಂದಾಗಲಿ, ಅವರಿಂದಲಾಗಲಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಆಡಿಯೋ ಸಿಡಿ ನಿರ್ಮಾಣದ ಹಿಂದೆ ಮುಖ್ಯಮಂತ್ರಿಯವರ ಪಾತ್ರವಿದೆ. ಇವರೇ ಶಾಸಕರ ಮಗನನ್ನು ಕಳುಹಿಸಿ ಧ್ವನಿಗ್ರಹಣ ಮಾಡಿಸಿದ್ದಾರೆ. ಹಾಗಿರುವಾಗ ಅವರ ನೇತೃತ್ವದಲ್ಲೇ ತನಿಖೆ ಮಾಡಿಸಿದರೆ ಒಪ್ಪೋದು ಹೇಗೆ ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದರು.

ಈ ಹಂತದಲ್ಲಿ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಸರ್ಕಾರದ ಮೇಲೆ ಆರೋಪವಿದ್ದರೆ, ನೋಟಿಸ್  ಕೊಟ್ಟು ಮಾತನಾಡಬೇಕು ಎಂದಾಗ ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ವಾಗ್ವಾದ ಉಂಟಾಯಿತು.

ಬಿಜೆಪಿಯ  ಬಸವರಾಜ ಬೊಮ್ಮಾಯಿ ಮಾತನಾಡಿ, ಮುಖ್ಯಮಂತ್ರಿಗಳು ಸುದ್ದಿಗೋಷ್ಠಿ ನಡೆಸಿ ವಿಷಯ  ಪ್ರಸ್ತಾಪಿಸಿರುವ ಉದ್ದೇಶ ಇದೀಗ ಸ್ಪಷ್ಟವಾಗಿದೆ ಎಂದು ಕಿಚಾಯಿಸಿದಾಗ, ಆಡಳಿತ ಪಕ್ಷದ  ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಭಾಧ್ಯಕ್ಷರು  ಮಧ್ಯೆ ಪ್ರವೇಶಿಸಿ  ನನ್ನನ್ನು ಆಟದ ವಸ್ತುವಾಗಿ ಬಳಸಿಕೊಳ್ಳಲು ಆಡಳಿತ ಹಾಗೂ ಪ್ರತಿ ಪಕ್ಷ ಸೇರಿದಂತೆ ಯಾರಿಗೂ  ಸಾಧ್ಯವಿಲ್ಲ. ಸರ್ಕಾರದ ಸೇವೆಯಲ್ಲಿ ಇರುವವರೆಲ್ಲ ಅವರ ಅಧೀನದಲ್ಲಿರುತ್ತಾರೆ ಎಂಬ  ಭಾವನೆ ಬೇಡ. ಈ ಪರಿಸ್ಥಿತಿಯಲ್ಲಿ ನ್ಯಾಯಾಂಗ ತನಿಖೆ ಸಾಧ್ಯವಿಲ್ಲ ಎಂದರು. ಆಗಲೂ ಆಡಳಿತ  ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಏರಿ ದನಿಯಲ್ಲಿ ವಾಗ್ವಾದ ಮುಂದುವರೆದಾಗ  ಸಭಾಧ್ಯಕ್ಷರು ಕಲಾಪವನ್ನು ಅರ್ಧಗಂಟೆ ಕಾಲ ಮುಂದೂಡಿದರು.

ಮತ್ತೆ ಸದನ ಸೇರಿದಾಗ  ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಸದನದಲ್ಲಿ ನಾಡಿನ ಜನರ ಸಮಸ್ಯೆಗಳ ಬಗ್ಗೆ  ಚರ್ಚೆಯಾಗಬೇಕು. ನಮ್ಮ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಯ  ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಭಾಧ್ಯಕ್ಷರ ಘನತೆ, ಗೌರವ ಎತ್ತಿಹಿಡಿಯಬೇಕು  ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯವಿಲ್ಲ. ನಾವು ಎಸ್‌ಐಟಿ ತನಿಖೆಗೆ ಒಪ್ಪುತ್ತಿಲ್ಲ.  ಸದನ ಸಮಿತಿ ಇಲ್ಲವೆ ನ್ಯಾಯಾಂಗ ತನಿಖೆಯಾಗಬೇಕು. ಮುಖ್ಯಮಂತ್ರಿಯವರು ಮುಕ್ತ ಮನಸ್ಸು  ಹೊಂದಿದ್ದಾರೆ ಎಂದು ಸಭಾಧ್ಯಕ್ಷರ ಗಮನ ಸೆಳೆದರು.

ಜಲ ಸಂಪನ್ಮೂಲ ಸಚಿವ  ಡಿ.ಕೆ.ಶಿವಕುಮಾರ್ ಮಾತನಾಡಿ, ಇಂದು ದೊಡ್ಡ ಪಾಠವಾಗುವ ರೀತಿಯಲ್ಲಿ ಸದನ ನಡೆಸಲಾಗಿದೆ.  ಸಭಾಧ್ಯಕ್ಷರು ತೀರ್ಮಾನ ಕೊಟ್ಟ ನಂತರವೂ ಚರ್ಚೆ ಮಾಡುವುದು ಸರಿಯೇ ಎನ್ನುತ್ತಿದ್ದಂತೆ  ಮತ್ತೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಯಾಗಿ ಆಡಳಿತ ಪಕ್ಷದ  ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು.

ಆಗ  ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಿಡಿಯೊಂದನ್ನು ಪ್ರದರ್ಶಿಸಿ 25 ಕೋಟಿ ಡೀಲ್ ಪ್ರಕರಣ ಇದರಲ್ಲಿದೆ ಈ ಬಗ್ಗೆಯೂ ತನಿಖೆ ನಡೆಸಿ ಎಂದು ಸಭಾಧ್ಯಕ್ಷರಿಗೆ ಸಿಡಿಯನ್ನು ತಲುಪಿಸಿದರು. ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷರು ಸರ್ಕಾರದ ಅಸ್ಥಿರತೆ ವಿಚಾರ  ಮುಖ್ಯವಲ್ಲ. ನನ್ನ ಹೆಸರು ಪ್ರಸ್ತಾಪವಾಗಿರುವುದರಿಂದ ಸದನದ ಗಮನ ಸಳೆದಿದ್ದೇನೆ. 15 ದಿನದಲ್ಲಿ ಫಲಿತಾಂಶ ಹೊರಬಂದು ಆರೋಪ ಮುಕ್ತನಾಗಬೇಕು. ಆ ಕಾರಣಕ್ಕಾಗಿ ಸದನ ಸಮಿತಿ ಅಥವಾ  ನ್ಯಾಯಾಂಗ ತನಿಖೆಗೆಯಾಗಲಿ ಎಂದು ಹೇಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. 

ಅಷ್ಟರಲ್ಲಿ  ಬಿಜೆಪಿ ಸದಸ್ಯ ಕೆ.ಎಸ್. ಈಶ್ವರಪ್ಪ್ಪ ಅವರು ಆಡಿದ ಮಾತು ಆಡಳಿತ ಪಕ್ಷದ ಸದಸ್ಯರನ್ನು  ಕೆರಳಿಸಿತು. ಆಗ ಸದನದಲ್ಲಿ ಆಡಳಿತ ಮತ್ತು ಪ್ರತಿ ಪಕ್ಷಗಳ ಸದಸ್ಯರು ನಡುವೆ ಮಾತಿನ ಚಕಮಕಿಯಲ್ಲಿ  ತೊಡಗಿದ್ದರಿಂದ ಸದನದಲ್ಲಿ ಗದ್ದಲದ ವಾತಾವರಣ ಉಂಟಾಗಿ ಸಭಾಧ್ಯಕ್ಷರು ಕಲಾಪವನ್ನು  ನಾಳೆಗೆ ಮುಂದೂಡಿದರು.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp