ಶಾಸಕರ ಪುತ್ರನನ್ನು ನಾನು ಬಿಎಸ್ ವೈ ಜತೆ ಮಾತುಕತೆಗೆ ಕಳಿಸಿಲ್ಲ: ಸಿಎಂ ಸ್ಪಷ್ಟನೆ

ವಿಧಾನಸಭೆಯಲ್ಲಿ ಎರಡನೇ ದಿನವಾದ ಮಂಗಳವಾರವೂ ಆಪರೇಷನ್ ಕಮಲ ಆಡಿಯೋ ಸಿಡಿ ಪ್ರಕರಣ ಪ್ರತಿದ್ವನಿಸಿತು. ಎಸ್ ಐಟಿ ತನಿಖೆ ಬೇಡ.
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ವಿಧಾನಸಭೆಯಲ್ಲಿ ಎರಡನೇ ದಿನವಾದ ಮಂಗಳವಾರವೂ ಆಪರೇಷನ್ ಕಮಲ ಆಡಿಯೋ ಸಿಡಿ ಪ್ರಕರಣ ಪ್ರತಿದ್ವನಿಸಿತು. ಎಸ್ ಐಟಿ ತನಿಖೆ ಬೇಡ. ಆದೇಶ ಮರು ಪರಿಶೀಲನೆ ಮಾಡಿ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಮನವಿಮಾಡಿದರು. ಈ ನಡುವೆ ಶಾಸಕರ ಪುತ್ರನನ್ನು ನಾನು ಮಾತುಕತೆಗೆ ಕಳಿಸಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ,ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.
ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಮಾಧುಸ್ವಾಮಿ ಅವರು, ಈ ಪ್ರಕರಣದಲ್ಲಿ ಕ್ರಿಮಿನಲ್ ಪ್ರೊಸೀಜರ್ ಅನುಸರಿಸಬೇಕು. ಎಸ್ ಐಟಿಯಿಂದ ಅದು ಸಾಧ್ಯವಿಲ್ಲ. ಕ್ರಿಮಿನಲ್ ಪ್ರೊಸೀಜರ್ ನಲ್ಲಿ ಎಫ್ ಐಆರ್ ಸಲ್ಲಿಸುವಾಗ ನ್ಯಾಯಾಲಯಕ್ಕೆ ಮಾತ್ರ ಸಲ್ಲಿಸಬೇಕು. ನೀವು ಸಹ ಹಲವು ಪೊಲೀಸ್ ಕೇಸ್ ಗಳಲ್ಲಿ ಬಲಿಪಶು ಆಗಿದ್ದೀರಿ. ದಯಮಾಡಿ ಶಾಸಕರನ್ನು ಅಂತಹ ಪೊಲೀಸರ ವಶಕ್ಕೆ ಕೊಡಬೇಡಿ ಎಂದು ಪರಿಪರಿಯಾಗಿ ಮನವಿ ಮಾಡಿದರು. 
ವೈಯಕ್ತಿಕ ಸ್ನೇಹಿತನಾಗಿ ಹೇಳುತ್ತಿದ್ದೇನೆ. ದೊಡ್ಡ ಮನಸ್ಸು ಮಾಡಿ ಈ ಪ್ರಕರಣ ಇಲ್ಲಿಗೆ ಕೈ ಬಿಡಿ. ತಪ್ಪಾಗಿದೆ. ನಾವು ತಪ್ಪು ಒಪ್ಪಿಕೊಳ್ಳುತ್ತೇವೆ. ದಯಮಾಡಿ ಈ ದಿಕ್ಕಿನಲ್ಲಿ ಯೋಚನೆ ಮಾಡಿ. ನಮಗೆ ಈ ವಿಷಯದಲ್ಲಿ ಹಠವಿಲ್ಲ. ಇನ್ನೊಂದು ವಿಷಯದಲ್ಲಿ ಮಾತ್ರ ದೊಡ್ಡ ಹಠವಿದೆ. ಅದಕ್ಕೆ ಮಾತ್ರ ನಾವು ನ್ಯಾಯಾಲಯದ ಮೊರೆಹೋಗುತ್ತೇವೆ. ಕಾನೂನು ಬದ್ದ ಹೋರಾಟ ನಡೆಸುತ್ತೇವೆ ಎಂದರು.
ತಮ್ಮ ಕಾಲದಲ್ಲಿ ಎಂಎಲ್ ಎ ಗಳನ್ನು ಕ್ರಿಮಿನಲ್ ಪ್ರೊಸೀಜರ್ ವ್ಯಾಪ್ತಿಗೆ ತರುವ ಕೆಲಸ ತಮ್ಮಿಂದ ಆಗುವುದು ಬೇಡ. ಇದನ್ನು ರಾಜಕೀಯವಾಗಿ ತೆಗೆದುಕೊಳ್ಳಬೇಡಿ. ಯಾರಿಗೋ ವೆಪನ್ ಕೊಟ್ಟು ಶಾಸಕರನ್ನು ಬಲಿಪಶು ಮಾಡುವ ಪ್ರಕ್ರಿಯೆಗೆ ನಿಮ್ಮಿಂದ ಚಾಲನೆ ಆಗುವುದು ಬೇಡ ಎಂದರು. 
ಈ ವೇಳೆ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಸ್ಪೀಕರ್ ಮೇಲೆ ಬಂದಿರುವ ಆರೋಪ ಸುಳ್ಳು ಎಂದು ಈಗ ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಇದು ಎರಡು ವ್ಯಕ್ತಿಗಳ ನಡುವೆ ನಡೆದ ಸಂಭಾಷಣೆ ಆಗಬಾರದಿತ್ತು. ಆಗಿದೆ. ಬಜೆಟ್ ಮಂಡನೆ ಬಿಟ್ಟು ಮುಖ್ಯಮಂತ್ರಿಯಾದವರು ಸುದ್ದಿಗೋಷ್ಟಿ ಕರೆದು ಸಭಾಧ್ಯಕ್ಷರ ಹೆಸರು ಪ್ರಕಟಿಸುವ ಅಗತ್ಯವೇನಿತ್ತು. ಮೊದಲಿಗೆ ಸಭಾಧ್ಯಕ್ಷರ ಕೊಠಡಿಯಲ್ಲೇ ಸಭೆ ಕರೆದು ಮೂರು ಪಕ್ಷಗಳ ಪ್ರಮುಖರ ಜತೆ ಚರ್ಚಿಸಿ ಬಗೆ ಹರಿಸಿಕೊಳ್ಳಬಹುದಿತ್ತು ಎಂದರು.
ಮತ್ತೆ ಮಾತು ಮುಂದುವರಿಸಿದ ಮಾಧುಸ್ವಾಮಿ, ಶಾರದಾ ಚಿಟ್ ಫಂಡ್ ಪ್ರಕರಣದಲ್ಲಿ ಕೊಲ್ಕೊತ್ತಾ ಮುಖ್ಯಮಂತ್ರಿ ಸಿಬಿಐನ್ನೇ ಪ್ರಶ್ನಿಸಿದ್ದಾರೆ. ಅಂತಹುದರಲ್ಲಿ ನಾವು ಎಸ್ ಐಟಿಯನ್ನು ಸುಮ್ಮನೆ ಬಿಡುತ್ತೇವೆಯೇ. ಕೋರ್ಟಿನಲ್ಲಿ ಖಂಡಿತ ಪ್ರಶ್ನಿಸುತ್ತೇವೆ. ಪೊಲೀಸರ ಜತೆ ದೋಸ್ತಿ, ದುಷ್ಮನಿ ಎರಡೂ ಬೇಡ. ಅವರಿಂದ ಅಂತರ ಕಾಯ್ದುಕೊಳ್ಳಬೇಕು. ನಾಲ್ಕು ಗೋಡೆಗಳ ಒಳಗೆ ಕೂತು ತಾವು ಇದನ್ನು ಸರಿಪಡಿಸಬಹುದಿತ್ತು. ನಮ್ಮ ಭಾವನೆಗಳಿಗೆ ಸಭಾದ್ಯಕ್ಷರು ಬೆಲೆ ಕೊಡಲಿಲ್ಲ ಎಂಬ ಆರೋಪ ಬರುವುದು ಬೇಡ ಎಂದು ಮಾಧುಸ್ವಾಮಿ. ನ್ಯಾಯಾಲಯ ಪ್ರಕ್ರಿಯೆ ಪ್ರತಿಯನ್ನು ಸಭಾಧ್ಯಕ್ಷರಿಗೆ ಸಲ್ಲಿಸಿದರು. 
ಬೋಪಯ್ಯ ಅವರು ಸಿಎಂ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಸಚಿವ ಕೆ ಜೆ ಜಾರ್ಜ್ ಹಾಗೂ ಆಡಳಿತ ಪಕ್ಷದ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತ ಮತ್ತು ಪ್ರತಿಪಕ್ಷ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ಆಡಳಿತ ಪಕ್ಷದ ಶಾಸಕರು ಮತ್ತು ಸಚಿವರನ್ಬು ಸಮಾಧಾನ ಪಡಿಸಿದ ಸ್ಪೀಕರ್ ರಮೇಶ್ ಕುಮಾರ್, ನೀವೆಲ್ಲಾ ಸಿದ್ದರಾಮಯ್ಯ ಅವರ ಅಭಿಮಾನಿಗಳಿದ್ದೀರಿ. ಸಿದ್ದರಾಮಯ್ಯ ಕೂಡ ಸದನದಲ್ಲೇ ಇದ್ದಾರೆ. ಅವರ ಮೇಲೆ ಏನಾದರೂ ಹೇಳಿದರೆ ಸಮರ್ಥಿಸಿಕೊಳ್ಳುವ ಸಾಮರ್ಥ್ಯ ಎಲ್ಲರಿಗೂ ಇದೆ. ಹಾಗಾಗಿ ಸಮಾಧಾನದಿಂದ ಕೇಳಿ ಎಂದರು.
ಸುರೇಶ್ ಕುಮಾರ್ ಮಾತನಾಡಿ, ಬೋಪಯ್ಯ‌ ಮೇಲೆ ದೈಹಿಕ ಹಲ್ಲೆ ಆಗಿತ್ತು. ಯಾರು ಯಾರು ಅವರ ಮೈಕ್ ಕಿತ್ತೆಸೆದರು, ಯಾರು ಪೇಪರ್ ಕಿತ್ತೆಸೆದು ಬಂದರು. ಯಾರು ವಿಧಾನಸೌಧದ ಬಾಗಿಲು ಒದ್ದು ಒಳಬಂದರು ಎಲ್ಲವನ್ನೂ ನಾವು  ನೋಡಿದ್ದೇವೆ ಎಂದರು. 
ಮಂಗಳೂರು ಶಾಸಕ ರಾಜೇಶ್ ನಾಯಕ್ ಭಾನುವಾರ ಬೆಂಗಳೂರಿಗೆ ಬರುತ್ತಿದ್ದಾಗ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಿಧಾನ ಪರಿಷತ್ ಸದಸ್ಯರೊಬ್ಬರು, ನಾಳೆ ಈ ಪ್ರಕರಣವನ್ನು ಎಸ್ ಐಟಿ ತನಿಖೆಗೆ ಒಪ್ಪಿಸಲಾಗುತ್ತದೆ ಎಂದಿದ್ದಾರೆ. ವಿಧಾನ ಪರಿಷತ್ ಸದಸ್ಯರು ಜ್ಯೋತಿಷಿಯೇನಲ್ಲ. ಅಂದರೆ ಈ ಪ್ರಕರಣ ವಿಚ್ ಹಂಟಿಂಗ್ ಆಗುತ್ತದೆ. ಎಲ್ಲಿಗೆ ಹೋಗುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು ಎಂದರು.
ಶಿವಲಿಂಗೇಗೌಡ ಮಾತನಾಡಿ, ಈ ಪ್ರಕರಣ ಎಲ್ಲಿ ನಡೆದಿದೆ ಎನ್ನುವುದು ಮುಖ್ಯವಲ್ಲ‌. ಶಾಸಕರ ವೈಯಕ್ತಿಕ ಬದುಕಿನ ದೊಂಬರಾಟ ನೋಡಿದರೆ ಯಾಕೆ ನಾವು ಶಾಸಕರಾಗಬೇಕು ಎನಿಸುತ್ತದೆ ಎಂದರು. ಆದರೆ ದೊಂಬರಾಟ ಪದ ಬಳಕೆಗೆ ಗೂಳಿಹಟ್ಟಿ ಶೇಖರ್ ವಿರೋಧ ವ್ಯಕ್ತಪಡಿಸಿದರು. ಇದು ಜಾತಿಯೊಂದರ ಅವಹೇಳನ ಆಗುತ್ತದೆ ಎಂದು ಗೂಳಿಹಟ್ಟಿ ಶೇಖರ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಅದು ಅಸಂಸದೀಯ ಪದ ಅಲ್ಲ. ಆಡು ಭಾಷೆಯಲ್ಲಿ ಬಳಸಿದ್ದಾರಷ್ಟೆ ಎಂದು ಸ್ಪಷ್ಟನೆನೀಡಿದರು. 
ಮುಖ್ಯಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ ಶಾಸಕರ ಪುತ್ರನನ್ನು ನಾನು ಅವರ ಬಳಿ ಕಳಿಸಿಲ್ಲ . ಅವರೇ 25 ಬಾರಿ ಅವನಿಗೆ ಫೋನ್ ಮಾಡಿ ಒತ್ತಡ ಹಾಕಿ ಕರೆದಿದ್ದಾರೆ. ಆತ ನನಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ. ಹೋಗಿ ಬಾ ಎಂದೆ ಎಂದರು.
ಸಂಕ್ರಾಂತಿ ಡೆಡ್ ಲೈನ್, ಯುಗಾದಿ ಡೆಡ್ ಲೈನ್ ಎಲ್ಲಾ ಕೊಟ್ಟವರು ಯಾರು‌? ಆಪರೇಷನ್ ಕಮಲ ಆರಂಭಿಸಿದವರು ಯಾರು? ಇವತ್ತಿಗೂ ನಾನು ಚರ್ಚೆಗೆ ರೆಡಿ‌. ನನ್ನ ಪಕ್ಷದ ವ್ಯಕ್ತಿಯೊಬ್ಬನಿಗೆ ಎಂಎಲ್ ಸಿ ಮಾಡಲು 25 ಕೋಟಿ ರೂ ಕೇಳಿದೆ ಎಂಬ ಆರೋಪ ಇದೆಯಲ್ಲಾ, ನಿನ್ನೆ  ಸಿಡಿ ಕೊಟ್ಟರಲ್ಲಾ. ಆ ಘಟನೆ ನಡೆದಿದ್ದು ನನ್ನ ಮನೆಯಲ್ಲೇ. 2014ರಲ್ಲಿ ನಡೆದ ಘಟನೆ. ಅದನ್ನು ಬೇಕಾದರೂ ತನಿಖೆ ಮಾಡಿಸಿ ಎಂದರು.
ಕೇಂದ್ರ ಸರ್ಕಾರ ನಿಮ್ಮದೆ ಇದೆಯಲ್ಲಾ. ಅದರ ಬಗ್ಗೆಯೂ ಚರ್ಚೆಗೆ ಸಿದ್ದ. ನಾನು ಓಡಿ ಹೋಗುವುದಿಲ್ಲ. ನಮ್ಮದು ಪ್ರಾದೇಶಿಕ ಪಕ್ಷ‌. ಕಾನೂನು ಬದ್ದವಾಗಿ ತೆರಿಗೆ ಕಟ್ಟುತ್ತೇವೆ. ನೀವು ಯಾವ ರೀತಿಯಲ್ಲಿ ತೆರಿಗೆ ಕಟ್ಟುತ್ತೀರಿ ಎಂಬುದೂ ನನಗೆ ಗೊತ್ತಿದೆ. ಈ ಪ್ರಕರಣವನ್ನು ಆಗಲೇ ನೀವು ಯಾಕೆ ತನಿಖೆ ಮಾಡಿಸಲಿಲ್ಲ‌. ಆಗಿನಿಂದ ಏಕೆ ಸುಮ್ಮನಿದ್ರಿ. ನಿಮ್ಮದೇ ಪಕ್ಷ ಅಧಿಕಾರದಲ್ಲಿ ಇತ್ತಲ್ಲ ಎಂದು ತಿರುಗೇಟು ನೀಡಿದರು.
ಸ್ಪೀಕರ್ ಮಾತನಾಡಿ, ಸಭಾನಾಯಕರು ಅಸಂಸದೀಯ ಪದ ಬಳಕೆ ಮಾಡಿದ್ರೆ ಅವರನ್ನೂ ನಿಯಂತ್ರಿಸುವ ಅಧಿಕಾರ ನನಗಿದೆ. ನೈತಿಕತೆ ಉಳಿಸಿಕೊಂಡಿದ್ದೇನೆ.ಎದೆ ನಡುಗಿಸಿಕೊಂಡು ಕೂರುವುದಿಲ್ಲ ಎಂದರು. ಆಡಳಿತ –ವಿರೋಧಿ ಸದಸ್ಯರ  ಮಾತಿನ ಚಕಮಕಿಯ ಕಾರಣ ಕೋಲಾಹಲ ಉಂಟಾಗಿ ಕಲಾಪವನ್ನು ಕೆಲ ಕಾಲ ಮುಂದಕ್ಕೆ ಹಾಕಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com