ನನ್ನ ಪರಿಸ್ಥಿತಿ ರೇಪ್ ಸಂತ್ರಸ್ಥೆಯಂತಾಗಿದೆ: ಸ್ಪೀಕರ್ ರಮೇಶ್ ಕುಮಾರ್

ಆಪರೇಷನ್ ಕಮಲ ಆಡಿಯೋ ಟೇಪ್ ಗೆ ಸಂಬಂಧಿಸಿದಂತೆ ಎರಡು ದಿನಗಳಿಂದ ವಿಧಾಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ಸ್ಪೀಕರ್ ರಮೇಶ್ ಕುಮಾರ್...
ರಮೇಶ್ ಕುಮಾರ್
ರಮೇಶ್ ಕುಮಾರ್
ಬೆಂಗಳೂರು: ಆಪರೇಷನ್ ಕಮಲ ಆಡಿಯೋ ಟೇಪ್ ಗೆ ಸಂಬಂಧಿಸಿದಂತೆ ಎರಡು ದಿನಗಳಿಂದ ವಿಧಾಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ಸ್ಪೀಕರ್ ರಮೇಶ್ ಕುಮಾರ್ ಅವರು, ತಮ್ಮ ಪರಿಸ್ಥಿತಿ ರೇಪ್ ಗೆ ಒಳಗಾದ ಮಹಿಳೆಯಂತಾಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇಂದು ವಿಧಾನಸಭೆಯಲ್ಲಿ ಆಪರೇಷನ್ ಕಮಲ ಆಡಿಯೋ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರು ಪದೇ ಪದೆ ತಮ್ಮ ಹೆಸರು ಪ್ರಸ್ತಾಪ ಮಾಡುತ್ತಿರುವುದನ್ನು ನೋಡಿ ಸ್ಪೀಕರ್ ಈ ಚಟಾಕಿ ಹಾರಿಸಿದರು.
ರೇಪ್ ಒಂದೇ ಸಲ ಆಗಿ ಹೋಗಿರುತ್ತದೆ. ಆದರೆ ವಿಚಾರಣೆ ವೇಳೆ ಯಾರು ಮಾಡಿದರು, ಎಲ್ಲಿ ಮಾಡಿದರು, ಹೇಗೆ ಮಾಡಿದರು, ಎಷ್ಟೊತ್ತು ಮಾಡಿದರು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಪದೇ ಪದೇ ಕೇಳಿ ಕಿರಿ ಕಿರಿ ಉಂಟು ಮಾಡಲಾಗುತ್ತದೆ. ಈ ಪ್ರಕರಣದಲ್ಲಿ ನನ್ನ ಸ್ಥಿತಿಯೂ ಹಾಗೆಯೇ ಆಗಿದೆ ಎಂದು ರಮೇಶ್ ಕುಮಾರ್ ಹೇಳಿದಾಗ ಸಭೆಯಲ್ಲಿ ನಗೆಯ ಅಲೆ ಎದ್ದಿತು.
ಸದನದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಸೇರಿದಂತೆ ನಾಲ್ವರು ಮಹಿಳಾ ಶಾಸಕರಿದ್ದರೂ ಯಾರೂ ಸ್ಪೀಕರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಬದಲಾಗಿ ಇತರರೊಂದಿಗೆ ಅವರೂ ನಕ್ಕರು.
ಆಪರೇಷನ್ ಕಮಲ ಆಡಿಯೋ ಬಗ್ಗೆ ಸ್ಪೀಕರ್ ಗಮನಕ್ಕೆ ಮೊದಲು ತರಬೇಕಿತ್ತು. ಆದರೆ ಮಾಧ್ಯಮಗಳ ಮುಂದೇ ಸ್ಪೀಕರ್ ಬಗ್ಗೆ ಮಾತನಾಡಿ ಅವರನ್ನು ಬೀದಿಗೆ ತಂದಿದ್ದಾರೆ ಎಂದು ಬಿಜೆಪಿ ಶಾಸಕರು ಸದನದಲ್ಲಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಆರೋಪಿಸಿದರು. ಆದರೆ ಬಿಜೆಪಿ ನಾಯಕರ ಈ ಮಾತಿಗೆ ತಿರುಗೇಟು ಕೊಟ್ಟ ಸಿಎಂ ಎಚ್‍ಡಿಕೆ, ಏನೂ ತಪ್ಪು ಮಾಡಿಲ್ಲ ಅಂದರೆ ಬಿಜೆಪಿಯವರಿಗೆ ಭಯ ಏಕೆ ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com