ಐಪಿಎಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಕಾಂಗ್ರೆಸ್ 'ಕೈ'? ಅಣ್ಣಾಮಲೈ ವರ್ಗಾವಣೆ ಆದೇಶ ಹಿಂಪಡೆದ ಸರ್ಕಾರ

ಮೈತ್ರಿ ಸರ್ಕಾರ 31 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ವರ್ಗಾವಣೆ...
ಸಿದ್ದರಾಮಯ್ಯ-ಎಂ ಬಿ ಪಾಟೀಲ್
ಸಿದ್ದರಾಮಯ್ಯ-ಎಂ ಬಿ ಪಾಟೀಲ್
ಬೆಂಗಳೂರು; ಮೈತ್ರಿ ಸರ್ಕಾರ 31 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ವರ್ಗಾವಣೆಯಲ್ಲಿ ಮುಖ್ಯ ಪಾತ್ರ ವಹಿಸಿದವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಎಂ ಬಿ ಪಾಟೀಲ್. ಅಧಿಕಾರಿಗಳ ವರ್ಗಾವಣೆ ಪಟ್ಟಿಯಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರಮುಖ ಪಾತ್ರ ವಹಿಸಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ಮುಂಬರುವ ಲೋಕಸಭೆ ಚುನಾವಣೆ ವೇಳೆ ತಮಗೆ ಬೇಕಾದ ಅಧಿಕಾರಿಗಳನ್ನು ಬೇಕಾದ ಇಲಾಖೆಗಳಿಗೆ ಕಾಂಗ್ರೆಸ್ ವರ್ಗಾವಣೆ ಮಾಡಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಗೃಹ ಸಚಿವ ಎಂ ಬಿ ಪಾಟೀಲ್ ಇದನ್ನು ಒಪ್ಪುತ್ತಿಲ್ಲ.
ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಅಚ್ಚರಿಯ ಹೆಸರು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೆ ಅಣ್ಣಾಮಲೈ. ಕಳೆದ ವರ್ಷ ಅಕ್ಟೋಬರ್ ನಲ್ಲಷ್ಟೇ ಅವರು ಈ ಹುದ್ದೆಗೆ ಬಂದಿದ್ದರು. ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಎಸ್ಪಿ ಮತ್ತು ನಿರ್ದೇಶಕರಾಗಿದ್ದ ಇಶಾ ಪಂತ್ ಅವರು ಅಣ್ಮಾಮಲೈ ಸ್ಥಾನಕ್ಕೆ ಬಂದಿದ್ದರು.
ಸರ್ಕಾರದ ವರ್ಗಾವಣೆ ಆದೇಶ ಬರುವ ಹೊತ್ತಿಗೆ ಅಣ್ಣಾಮಲೈಯವರು ಏರೋ ಇಂಡಿಯಾ ಶೋದ ಭದ್ರತೆ ಕೆಲಸದಲ್ಲಿದ್ದರು. ತಮ್ಮ ವರ್ಗಾವಣೆ ಆದೇಶ ಕೇಳಿದಾಗ ಅವರಿಗೆ ಆಶ್ಚರ್ಯವಾಯಿತು ಜೊತೆಗೆ ಅವರಿಗೆ ಬೇರೆ ಹುದ್ದೆ ತೋರಿಸಿರಲಿಲ್ಲ. ನಂತರ ಅಣ್ಣಾಮಲೈಯವರಿಗೆ ಫೋನ್ ನಲ್ಲಿ ಅಧಿಕೃತವಾಗಿ ಮಾಹಿತಿ ಬಂದಿತು. ಅದೇನೆಂದರೆ ತಾವು ವರ್ಗಾವಣೆಯಾಗಿಲ್ಲ. ಟೈಪಿಂಗ್ ನಲ್ಲಿ ತಪ್ಪಾಗಿ ತಮ್ಮ ಹೆಸರು ಬಂದಿದೆ ಎಂದು.
ಸರ್ಕಾರದಿಂದ ವರ್ಗಾವಣೆ ಆದೇಶ ಹೊರಬಂದ ನಂತರ ಹಲವರು ಅಣ್ಣಾಮಲೈ ವರ್ಗಾವಣೆಯನ್ನು ವಿರೋಧಿಸಿದ್ದರು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಮಾರ್ಗಸೂಚಿಗಳು ಅಣ್ಮಾಮಲೈ ಅವರಿಗೆ ದೊಡ್ಡ ವಿಷಯವಾಗುವುದಿಲ್ಲ. ಕೇಂದ್ರ ಆಡಳಿತಾತ್ಮಕ ನ್ಯಾಯಾಧೀಕರಣಕ್ಕೆ ಹೋದರೆ ಮತ್ತೆ ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಮತ್ತೆ ಬರುವ ಸಾಧ್ಯತೆಯಿತ್ತು. ಹೀಗಾಗಿ ಅಣ್ಣಾಮಲೈಯವರನ್ನು ಸರ್ಕಾರ ಅದೇ ಹುದ್ದೆಯಲ್ಲಿ ಉಳಿಸಿಕೊಂಡಿದೆ
ಜೆಡಿಎಸ್ ಮತ್ತು ಕಾಂಗ್ರೆಸ್ ನ ಪ್ರಮುಖ ನಾಯಕರಿಗೆ ಅಣ್ಮಾಮಲೈಯವರು ಚಿಕ್ಕಮಗಳೂರು ಮತ್ತು ಉಡುಪಿಯಲ್ಲಿ ಅಧಿಕಾರದಲ್ಲಿದ್ದಾಗ ಅವರ ಶಿಸ್ತಿನ ನಡಿಗೆ ನುಂಗಲಾರದ ಬಿಸಿತುಪ್ಪವಾಗಿತ್ತು.
ಅಣ್ಣಾಮಲೈಯವರ ವರ್ಗಾವಣೆ ಆದೇಶವನ್ನು ತಡೆಹಿಡಿದ ನಂತರ ಇಶಾ ಪಂತ್ ಅವರನ್ನು ಡಿಸಿಪಿ ಪೂರ್ವ ವಲಯಕ್ಕೆ ವರ್ಗಾಯಿಸಿದ ನಂತರ ಮುಂದಿನ ಆದೇಶಗಳವರೆಗೆ ಇಶಾ ಪಂತ್ ಅವರನ್ನು ನೃಪತುಂಗ ರಸ್ತೆಯಲ್ಲಿರುವ ಡಿಜಿ ಮತ್ತು ಐಜಿ ಕಚೇರಿಯ ಮುಖ್ಯ ಅಧಿಕಾರಿ ಹುದ್ದೆಗೆ ನೇಮಿಸಲಾಯಿತು. ಅಣ್ಣಾಮಲೈ ಕೇಸಿನಲ್ಲಿ ಟೈಪಿಂಗ್ ದೋಷ ಎಂದು ಸರ್ಕಾರ ಹೇಳಿದರೂ ಕೂಡ ಇಶಾ ಪಂತ್ ಅವರನ್ನು ಮೂರು ಬಾರಿ ವರ್ಗಾವಣೆ ಮಾಡಲಾಯಿತು.
ಬೆಂಗಳೂರಿನ ನೈರುತ್ಯ ಭಾಗದ ಕಾಂಗ್ರೆಸ್ ನಾಯಕರೊಬ್ಬರು ಲೋಕಸಭೆ ಚುನಾವಣೆ ಸಮೀಪದಲ್ಲಿರುವಾಗ ಇಶಾ ಪಂತ್ ಅವರು ತಮ್ಮ ಕ್ಷೇತ್ರಕ್ಕೆ ಬರುವುದು ಇಷ್ಟವಿರಲಿಲ್ಲ.
ವರ್ಗಾವಣೆಯಲ್ಲಿ ನನ್ನ ಪಾತ್ರವಿಲ್ಲ: ವರ್ಗಾವಣೆಯಲ್ಲಿ ತಮ್ಮ ಪಾತ್ರವಿದೆ ಎಂದು ಹೇಳುವುದು ತಪ್ಪು. ನಾನಾಗಲಿ, ಸಿದ್ದರಾಮಯ್ಯನವರಾಗಲಿ ಇದರಲ್ಲಿ ಪಾತ್ರ ಹೊಂದಿಲ್ಲ. ಇದನ್ನು ಸಿಬ್ಬಂದಿ ಮತ್ತು ಆಡಳಿತ ವಿಭಾಗ ಮಾಡಿದ್ದು ಅದಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ. ಸಿದ್ದರಾಮಯ್ಯ ಬಿಡಿ, ಗೃಹ ಸಚಿವನಾಗಿ ನಾನು ಕೂಡ ಇದರಲ್ಲಿ ಭಾಗಿಯಾಗಿಲ್ಲ. ಈ ಬಗ್ಗೆ ಸಿಎಂ ಅವರನ್ನೇ ಕೇಳಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com