ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ಮುಂದುವರಿಕೆ: ವೈಎಸ್ ವಿ ದತ್ತ ಪ್ರಚಾರ ಸಮಿತಿ ಮುಖ್ಯಸ್ಥ

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರ ಚುಕ್ಕಾಣಿ ಪಡೆದಿದ್ದ ಎಚ್ ವಿಶ್ವನಾಥ್ ....
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್
ಬೆಂಗಳೂರು:  ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರ ಚುಕ್ಕಾಣಿ ಪಡೆದಿದ್ದ ಎಚ್ ವಿಶ್ವನಾಥ್ ತಮ್ಮ ರಾಜೀನಾಮೆ ತೀರ್ಮಾನದಿಂದ ಹಿಂದೆ ಸರಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಕೇಂದ್ರ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರು ನನ್ನನ್ನ ನಂಬಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದರು. ಆದರೆ ನನ್ನ ಆರೋಗ್ಯ ಕ್ಷೀಣಿಸುತ್ತಿರುವ ಕಾರಣ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದೆ. ದೇವೇಗೌಡರು ನನ್ನ ಮನವಿ ತಿರಸ್ಕಾರ ಮಾಡಿದರು. ದೇವೇಗೌಡರ ವಿಶ್ವಾಸದ ಬೇಡಿಯ ಬಂಧನಕ್ಕೆ ಒಳಗಾದ ನಾನು, ನನ್ನ ನಿರ್ಧಾರ ವಾಪಸ್ ಪಡೆದಿದ್ದೇನೆ. ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ತಿಳಿಸಿದರು.
ಇತ್ತೀಚೆಗೆ ಅನಾರೋಗ್ಯ ಕಾಡುತ್ತಲೇ ಇದೆ. ಹಾಗಾಗಿ ನನ್ನ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಲು ಆಗುತ್ತಿಲ್ಲ. ರಾಜ್ಯಾಧ್ಯಕ್ಷನಾಗಿ ಪಕ್ಷದಲ್ಲೂ ಸರಿಯಾಗಿ ತೊಡಗಿಸಿಕೊಳ್ಳಲಾಗುತ್ತಿಲ್ಲ. ಆದ್ದರಿಂದ ನನ್ನ ಸ್ಥಾನದಿಂದ ಬಿಡುಗಡೆ ಕೋರಲು ನಿರ್ಧರಿಸಿದ್ದೆ ಎಂದು ಸ್ಪಷ್ಟಪಡಿಸಿದರು.
ವಿಶ್ವನಾಥ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ ಮೇಲೆ ನಾವು ಪಕ್ಷದ ಕಚೇರಿಗೆ ಭೇಟಿ ನೀಡಬೇಕಿತ್ತು, ಪದಾದಿಕಾರಿಗಳನ್ನು ನೇಮಿಸಬೇಕಿತ್ತು ಜೊತೆಗೆ ಮಹಿಳಾ ವಿಭಾಗ ರಚಿಸಬೇಕಿತ್ತು, ಪಕ್ಷ ಬಲಗೊಳ್ಳಲು ನಾವು ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಪಕ್ಷ ಸಂಘಟನೆ ಮರೆತದ್ದಕ್ಕೆ ಕ್ಷಮೆ ಕೋರಿದ ದೇವೇಗೌಡರು, ಮಾಜಿ ಶಾಸಕ ವೈಎಸ್ ವಿ ದತ್ತ ಅವರನ್ನು ಚುನಾವಣಾ ಪ್ರಚಾರಸಮಿತಿ ಮುಖ್ಯಸ್ಥರನ್ನಾಗಿ ನೇಮಿಸಿರುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com