ಸಿಎಂ ವಿರುದ್ಧ ಹೇಳಿಕೆ: ಶಾಸಕರ ನಾಲಗೆಗೆ ಲಗಾಮು ಹಾಕಿ; ಕೈ ಮುಖಂಡರಿಗೆ ಜೆಡಿಎಸ್ ಆಗ್ರಹ!

ನಿಗಮ ಮಂಡಳಿ ನೇಮಕಾತಿ ಸಂಬಂಧ ಇತ್ತೀಚೆಗೆ ಕಾಂಗ್ರೆಸ್ ಶಾಸಕ ಕೆ. ಸುಧಾಕರ ರೆಡ್ಡಿ ಸಿಎಂ ವಿರುದ್ಧ ನೀಡಿದ ಬಹಿರಂಗ ಹೇಳಿಕೆ ಬಗ್ಗೆ ನಿನ್ನೆ ನಡೆದ ಜೆಡಿಎಸ್ ...
ಎಚ್.ಡಿ ದೇವೇಗೌಡ ಮತ್ತು ಎಚ್.ಡಿ ಕುಮಾರ ಸ್ವಾಮಿ
ಎಚ್.ಡಿ ದೇವೇಗೌಡ ಮತ್ತು ಎಚ್.ಡಿ ಕುಮಾರ ಸ್ವಾಮಿ
ಬೆಂಗಳೂರು: ನಿಗಮ ಮಂಡಳಿ ನೇಮಕಾತಿ ಸಂಬಂಧ ಇತ್ತೀಚೆಗೆ ಕಾಂಗ್ರೆಸ್ ಶಾಸಕ ಕೆ. ಸುಧಾಕರ ರೆಡ್ಡಿ  ಸಿಎಂ ವಿರುದ್ಧ ನೀಡಿದ ಬಹಿರಂಗ ಹೇಳಿಕೆ ಬಗ್ಗೆ ನಿನ್ನೆ ನಡೆದ ಜೆಡಿಎಸ್ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. 
ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಹಾಗೂ ಸಿಎಂ ಕುಮಾರ ಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಜೆಡಿಎಸ್ ಶಾಸಕರು, ಸಂಸದರು ಹಾಗೂ ಎಂಎಲ್ ಸಿಗಳ ಸಭೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ, ಸಿಎಂ ಹಾಗೂ ದೇವೇಗೌಡರ ಕುಟುಂಬದ ಬಗ್ಗೆ ಕೈ ಶಾಸಕರ ಹೇಳಿಕೆ ಸಂಬಂಧ ಜೆಡಿಎಸ್ ಶಾಸಕರು ಹಾಗೂ ಸಚಿವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಮುಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಈ ಸಂಬಂಧ ಚರ್ಚಿಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ, ನಿಗಮ ಮಂಡಳಿ, ಸಮ್ಮಿಶ್ರ ಸರ್ಕಾರದಲ್ಲಿ ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಉದ್ಭವಿಸಿರುವ ಗೊಂದಲ ನಿವಾರಣೆ ಮಾಡಲು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಜವಾಬ್ದಾರಿ ನೀಡಿದೆ. ಹೀಗಾಗಿ ತಮ್ಮ ಪಕ್ಷದ ಶಾಸಕರು ಹೇಳಿಕೆ ನೀಡುವುದನ್ನು ಹತೋಟಿಯಲ್ಲಿಡಬೇಕು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಹೇಳಿದ್ದಾರೆ. 
ಕಾಂಗ್ರೆಸ್‌ ಶಾಸಕರನ್ನು ಆ ಪಕ್ಷದ ನಾಯಕರೇ ನಿಯಂತ್ರಿಸಬೇಕು. ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿಯವರ ವಿರುದ್ಧ ಬಹಿರಂಗವಾಗಿ ಕಾಂಗ್ರೆಸ್‌ ಶಾಸಕರು ಮಾತನಾಡಿದರೆ ನಾವು ಮಾತನಾಡಬೇಕಾಗುತ್ತದೆ ಎಂದು ಸಚಿವರು-ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಮೈತ್ರಿ ಸರ್ಕಾರವನ್ನು ಜೆಡಿಎಸ್ ನಡೆಸುತ್ತಿದೆ, ಕಾಂಗ್ರೆಸ್ ಜೊತೆ ಹೊಂದಾಣಿಕೆ ಅನಿವಾರ್ಯ, ಹೀಗಾಗಿ ಶಾಸಕರು ಕೆಲವೊಂದು ತ್ಯಾಗಕ್ಕೆ ಸಿದ್ದರಾಗಬೇಕು,. ಕಡಿಮೆ ಮತಗಳ ಅಂತರದಿಂದ ಸೋತ ಶಾಸಕರಿಗಾಗಿ ಹಾಲಿ ಶಾಸಕರು ತ್ಯಾಗ ಮಾಡಬೇಕು ಎಂದು ದೇವೇಗೌಡ ಸಲಹೆ ನೀಡಿದ್ದಾರೆ. 
ಈ ಹಿಂದೆ ನೀಡಿದ ಭರವಸೆಯಂತೆ ಸಂಕ್ರಾಂತಿ ಬಳಿುಕ ಬಾಕಿ ಉಳಿದ, ಎರಡು ಮಂತ್ರಿ ಸ್ಥಾನ ಹಾಗೂ ನಿಗಮ ಮಂಡಳಿಗಳಿಗೆ ಒಂದೇ ಹಂತದಲ್ಲಿ ನೇಮಕ ಮಾಡಲಾಗುವುದು, ಅಲ್ಲಿಯವರೆಗೂ ಶಾಸಕರು ಸಮಾಧಾನದಿಂದ ಇರಬೇಕು ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮುಂದುವರಿಯಲಿದ್ದು, ಸೀಟು ಹಂಚಿಕೆ ಸಂಬಂಧ ರಾಜ್ಯ ಕಾಂಗ್ರೆಸ್ ನಾಯಕರು ಅಡ್ಡಗಾಲು ಹಾಕುತ್ತಿರುವ ಹಿನ್ನೆಲೆಯಲ್ಲಿ ನೇರವಾಗಿ  ರಾಹುಲ್ ಗಾಂಧಿ ಅವರ ಜೊತೆ ಮಾತನಾಡುವುದಾಗಿ ದೇವೇಗೌಡರು ತಿಳಿಸಿದ್ದಾರೆ. ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯ, ಮೈಸೂರು, ಹಾಸನ, ತುಮಕೂರು ಸೇರಿದಂತೆ 12 ಕ್ಷೇತ್ರಗಳನ್ನ ಜೆಡಿಎಸ್ ಪಾಲಿಗೆ ಬಿಟ್ಟುಕೊಡುವಂತೆ ಚರ್ಚಿಸುವುದಾಗಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com