ಪೊಲೀಸರ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ: ಶಾಸಕ ಗೂಳಿಹಟ್ಟಿ ಶೇಖರ್

ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಪೊಲೀಸರ ....
ಶಾಸಕ ಗೂಳಿಹಟ್ಟಿ ಶೇಖರ್
ಶಾಸಕ ಗೂಳಿಹಟ್ಟಿ ಶೇಖರ್

ಚಿತ್ರದುರ್ಗ: ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಪೊಲೀಸರ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಚಿತ್ರದುರ್ಗದ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ ಶೇಖರ್ ತಿಳಿಸಿದ್ದಾರೆ.

ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೊಸದುರ್ಗ ತಾಲ್ಲೂಕಿನಲ್ಲಿ ಪೊಲೀಸರು ಮಾಜಿ ಶಾಸಕ ಬಿ ಜಿ ಗೋವಿಂದಪ್ಪ ಅವರ ಆದೇಶದ ಪ್ರಕಾರ ಕೆಲಸ ಮಾಡುತ್ತಿದ್ದು ನನ್ನ ಮತ್ತು ನನ್ನ ಬೆಂಬಲಿಗರ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ನನ್ನ ಬೆಂಬಲಿಗರ ವಿರುದ್ಧ ಕೇಸು ದಾಖಲಿಸಿದ್ದಾರೆ ಎಂದರು.

ತಾಲ್ಲೂಕಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಬಳಸುವ ಮರಳು ಕಾನೂನುಬದ್ಧವಾಗಿ ಪೂರೈಕೆಯಾಗಿದ್ದರೂ ಸಹ ಪೊಲೀಸರು ಮಧುರೆ ಗ್ರಾಮದಲ್ಲಿ ಟ್ರಾಕ್ಟರ್ ನ್ನು ವಶಪಡಿಸಿಕೊಂಡು ಅದರ ಮಾಲೀಕರ ವಿರುದ್ಧ ಕೇಸು ದಾಖಲಿಸಿದ್ದಾರೆ. ಪೊಲೀಸರನ್ನು ಕೇಳಿದಾಗ ನಿರ್ಲಕ್ಷ್ಯದ ಹೇಳಿಕೆ ನೀಡುತ್ತಾರೆ. ಕಳೆದು ಆರೇಳು ತಿಂಗಳಿನಿಂದ ಈ ರೀತಿ ವರ್ತನೆ ತೋರಿಸುತ್ತಿದ್ದಾರೆ. ಇವೆಲ್ಲವುಗಳಿಂದ ಬೇಸತ್ತು ಬೇರೆ ದಾರಿಯಿಲ್ಲದೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದೆ, ಅದು ಬಿಟ್ಟರೆ ನನ್ನನ್ನು ನಾನೇ ಕೊಲ್ಲುವ ಯಾವುದೇ ಉದ್ದೇಶ ನನಗೆ ಇರಲಿಲ್ಲ ಎನ್ನುತ್ತಾರೆ.

ಅಗತ್ಯಬಿದ್ದರೆ ಪೊಲೀಸರಿಗೆ ಸರಿಯಾದ ಪಾಠ ಕಲಿಸಲು ಅವರ ವಿರುದ್ಧ ಖಾಸಗಿ ದೂರು ಸಲ್ಲಿಸುವುದಾಗಿಯೂ ಹೇಳಿದ್ದಾರೆ. ಪೊಲೀಸರು ಇದರಲ್ಲಿ ನೇರವಾಗಿ ಭಾಗಿಯಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದ್ದು ಪೊಲೀಸರೇ ಎಂದು ಆರೋಪಿಸಿದ್ದಾರೆ.

ತಾಲ್ಲೂಕಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಯಾವ ಅಧಿಕಾರಿಗಳು ಕೂಡ ತಮಗೆ ಬೆಂಬಲ ನೀಡುತ್ತಿಲ್ಲ, ಮಾಜಿ ಶಾಸಕ ಬಿ ಜಿ ಗೋವಿಂದಪ್ಪ ಅವರಿಗೇ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಜವಾಬ್ದಾರಿಯುತ ಶಾಸಕನಾಗಿ ನನ್ನ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದು ಜನವರಿ 22ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com