ಅಲೋಕ್‌ ವರ್ಮಾ ರಾಜೀನಾಮೆ ಹಿಂದೆ ದೊಡ್ಡ ಷಡ್ಯಂತ್ರ: ಮಾಜಿ ಸಿಎಂ ಸಿದ್ದರಾಮಯ್ಯ

ಸಿಬಿಐ ನಿರ್ದೇಶಕ ಸ್ಥಾನಕ್ಕೆ ಅಲೋಕ್‌ ವರ್ಮಾ ರಾಜೀನಾಮೆ ಪ್ರಹಸನದ ಹಿಂದೆ ದೊಡ್ಡ ಹುನ್ನಾರ ಅಡಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹುಬ್ಬಳ್ಳಿ: ಸಿಬಿಐ ನಿರ್ದೇಶಕ ಸ್ಥಾನಕ್ಕೆ ಅಲೋಕ್‌ ವರ್ಮಾ ರಾಜೀನಾಮೆ ಪ್ರಹಸನದ ಹಿಂದೆ ದೊಡ್ಡ ಹುನ್ನಾರ ಅಡಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಫೇಲ್ ಯುದ್ಧ ವಿಮಾನ ಹಗರಣ ಬಯಲಾಗುತ್ತದೆ ಎನ್ನುವ ಕಾರಣಕ್ಕೆ ಮೋದಿ ಸರ್ಕಾರ ಹೀಗೆ ಮಾಡಿದೆ. ಪ್ರಕರಣದಿಂದ ತಪ್ಪಿಸಿಕೊಳ್ಳಲು ಅಲೋಕ್ ವರ್ಮಾ ಅವರನ್ನು ಬಲಿ ಪಶು ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಅಂತೆಯೇ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಸೀಟು ಹಂಚಿಕೆಯ ಕುರಿತು ಈವರೆಗೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಈ ತಿಂಗಳಾಂತ್ಯದ ಹೊತ್ತಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸೀಟು ಹಂಚಿಕೆಯ ವಿಷಯವಾಗಿ ಈಶ್ವರ ಖಂಡ್ರೆ ನೀಡಿರುವ ಹೇಳಿಕೆ ಅವರ ವೈಯಕ್ತಿಕ. ಪಕ್ಷದ ಚೌಕಟ್ಟಿನಲ್ಲಿ ಯಾವುದೇ ಸಭೆ ನಡೆದಿಲ್ಲ, ಸಭೆ ಬಳಿಕ ಸೀಟು ಹಂಚಿಕೆ ಎಷ್ಟೆಂದು ನಿರ್ಧಾರಕ್ಕೆ ಬರುತ್ತೇವೆ ಎಂದರು.
ಸಚಿವ ಪುಟ್ಟರಂಗ ಅವರ ಆಪ್ತ ಸಹಾಯಕ ಹಣ ಪಡೆದ ಪ್ರಕರಣದಲ್ಲಿ ಎಸಿಬಿ ತನಿಖೆ ನಡೆಸುತ್ತಿದೆ. ಮೊದಲು ತನಿಖೆ ಮುಗಿದು ವರದಿ ಬರಲಿ, ಆ ನಂತರ ಕ್ರಮದ ಬಗ್ಗೆ ನೋಡೋಣ. ಯಾರೋ ಒಬ್ಬರ ಬಳಿ ಹಣ ಸಿಕ್ಕರೆ ಅದು ಸಚಿವರಿಗೆ ಸೇರಿದ್ದು ಎಂದು ಹೇಳಲಾಗದು. ಇದು ಊಹಾಪೋಹವಷ್ಟೇ. ತನಿಖೆ ಮುಗಿದ ನಂತರ ವಾಸ್ತವ ಎಲ್ಲರಿಗೂ ಗೊತ್ತಾಗಲಿದೆ. ಅಲ್ಲಿಯವರೆಗೆ ಕಾದು ನೋಡೋಣ ಎಂದರು.
ಎಲ್ಲರಿಗೂ ಬಿಜೆಪಿ ಸೋಲಿಸುವುದೇ ಉದ್ದೇಶ
ಇದೇ ವೇಳೆ ಉತ್ತರ ಪ್ರದೇಶದಲ್ಲಿ ಎಸ್ ಪಿ-ಬಿಎಸ್ ಪಿ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ಎಲ್ಲರಿಗೂ ಕೋಮುವಾದಿ ಪಕ್ಷ ಬಿಜೆಪಿಯನ್ನು ಸೋಲಿಸುವುದೇ ಉದ್ದೇಶವಾಗಿದೆ. ಹೀಗಾಗಿ ಯಾರೂ ಮಹಾಘಟ್ ಬಂಧನ ಬಿಟ್ಟು ಹೋಗದಿದ್ದರೆ ಒಳಿತು. ಅಧಿಕಾರಕ್ಕೆ ಬಂದರೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಗುವುದು ಎಂದು ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಈ ಹಿಂದೆ ಮೋದಿಯವರು ಈ ಹೇಳಿಕೆ ನೀಡಿದ್ದರು. ಈಗ ರಾಹುಲ್ ಗಾಂಧಿ ಆಂಧ್ರಪ್ರದೇಶ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆಂದು ಹೇಳಿದ್ದಾರಷ್ಟೇ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com