ಕಾಂಗ್ರೆಸ್​ ನಮ್ಮನ್ನು 3ನೇ ದರ್ಜೆ ನಾಗರಿಕರಂತೆ ನಡೆಸಿಕೊಳ್ಳಬಾರದು: ಸಿಎಂ ಕುಮಾರಸ್ವಾಮಿ

ಲೋಕಸಭೆ ಚುನಾವಣೆಯಲ್ಲೂ ಮೈತ್ರಿ ಮುಂದುವರೆಸಲು ಜೆಡಿಎಸ್​- ಕಾಂಗ್ರೆಸ್​ ನಿರ್ಧರಿಸಿವೆ. ಆದರೆ ಸೀಟು ಹಂಚಿಕೆ ಕಗ್ಗಂಟಾಗಿ....
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲೂ ಮೈತ್ರಿ ಮುಂದುವರೆಸಲು ಜೆಡಿಎಸ್​- ಕಾಂಗ್ರೆಸ್​ ನಿರ್ಧರಿಸಿವೆ. ಆದರೆ ಸೀಟು ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದ್ಜು, ಈ ಸಂಬಂಧ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಿತ್ರ ಪಕ್ಷದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್​ ಅನ್ನು ಕಾಂಗ್ರೆಸ್​ ತೃತೀಯ ದರ್ಜೆಯ ನಾಗರಿಕರಂತೆ ಕಾಣಬಾರದು. ಎರಡೂ ಪಕ್ಷಗಳೂ ಕೊಟ್ಟು-ತೆಗೆದುಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಪರಸ್ಪರ ಹೊಂದಾಣಿಕೆಯಿಂದ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು ಸಾಧ್ಯ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ.
ಮೈತ್ರಿ ಮಾಡಿಕೊಂಡ ನಂತರ ಎರಡೂ ಪಕ್ಷಗಳ ನಾಯಕರ ನಡುವೆ ಸಂಕುಚಿತ ಭಾವನೆಗಳು ಇರಬಾರದು. ಎಲ್ಲ ವಿಷಯಗಳಲ್ಲೂ ಹೊಂದಾಣಿಕೆ ಇರಬೇಕು ಎಂದಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಹಳದಿ ಕನ್ನಡಕವನ್ನು ಧರಿಸಿ ಜಗತ್ತನ್ನು ನೋಡುತ್ತಿದ್ದಾರೆ. ಅವರ ಕನ್ನಡಕ ಮಸುಕಾಗುತ್ತಿದೆ. ಜನವಿರೋಧಿ ಅಧಿಕಾರವನ್ನು ನಡೆಸುತ್ತಿರುವ ಅವರು ರಾಹುಲ್​ ಗಾಂಧಿ ವಿರುದ್ಧ ವಿನಾಕಾರಣ ದಾಳಿ ನಡೆಸುತ್ತಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಇದೇ ವೇಳೆ ರಾಹುಲ್​ ಗಾಂಧಿ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲು ಬಿಜೆಪಿ ವಿರೋಧಿ ಪಕ್ಷಗಳಲ್ಲಿ ಒಮ್ಮತವಿರಲಿಲ್ಲ ಎಂಬ ವಿಷಯವನ್ನೂ ಸಿಎಂ ಒಪ್ಪಿಕೊಂಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ನಮಗೆ 12 ಸೀಟು ಬಿಟ್ಟುಕೊಂಡುವಂತೆ ಜೆಡಿಎಸ್ ಪಟ್ಟು ಹಿಡಿದಿದೆ. ಆದರೆ ಕಾಂಗ್ರೆಸ್,  ಜೆಡಿಎಸ್ ​ಗೆ ಸ್ಪರ್ಧಿಸಲು ಕೆಲವು ಪ್ರಮುಖ ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com