'ಕೈ ಕೈ ಮಿಲಾಸಿದ 'ಕೈ' ಶಾಸಕರು'; ಸುಳ್ಳು ಸುದ್ದಿ ಎಂದ ಸಚಿವ ಡಿಕೆ ಶಿವಕುಮಾರ್

ಈಗಲ್ಟನ್ ರೆಸಾರ್ಟ್ ನಲ್ಲಿ ತಂಗಿರುವ ಕಾಂಗ್ರೆಸ್ ಶಾಸಕರು ಯಾವುದೇ ರೀತಿಯ ಜಗಳದಲ್ಲಿ ಪಾಲ್ಗೊಂಡಿಲ್ಲ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈಗಲ್ಟನ್ ರೆಸಾರ್ಟ್ ಬಳಿ ಡಿಕೆ ಶಿವಕುಮಾರ್
ಈಗಲ್ಟನ್ ರೆಸಾರ್ಟ್ ಬಳಿ ಡಿಕೆ ಶಿವಕುಮಾರ್
ಬೆಂಗಳೂರು: ಈಗಲ್ಟನ್ ರೆಸಾರ್ಟ್ ನಲ್ಲಿ ತಂಗಿರುವ ಕಾಂಗ್ರೆಸ್ ಶಾಸಕರು ಯಾವುದೇ ರೀತಿಯ ಜಗಳದಲ್ಲಿ ಪಾಲ್ಗೊಂಡಿಲ್ಲ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮಗಳ ವರದಿಯನ್ವಯ ನಿನ್ನೆ ಕಾಂಗ್ರೆಸ್ ಶಾಸಕಾಂಗ ಸಭೆಯ ಬಳಿಕ ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಗಣೇಶ್ ನಡುವೆ ಮಾರಾಮಾರಿಯಾಗಿದ್ದು, ಈ ವೇಳೆ ಶಾಸಕ ಆನಂದ್ ಸಿಂಗ್ ಗಾಯಗೊಂಡಿದ್ದು, ಇಂದು ಮುಂಜಾನೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಕಂಪ್ಲಿ ಶಾಸಕ ಗಣೇಶ್ ರನ್ನು ಆಪರೇಷನ್ ಕಮಲದ ನಿಮಿತ್ತ ಬಿಜೆಪಿ ಶಾಸಕರು ಸಂಪರ್ಕಿಸಿದ್ದರು ಮತ್ತು ಅವರನ್ನು ಬಿಜೆಪಿ ಆಹ್ವಾನಿಸಿದ್ದ ವಿಚಾರವನ್ನು ಶಾಸಕ ಆನಂದ್ ಸಿಂಗ್ ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಮತ್ತು ಕಾಂಗ್ರೆಸ್ ಹೈಕಮಾಂಡ್ ಗೆ ಬಹಿರಂಗ ಪಡಿಸಿದ್ದರು. ಇದೇ ವಿಚಾರವಾಗಿ ನಿನ್ನೆ ನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕ ಗಣೇಶ್ ರನ್ನು ಮುಖಂಡರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಈ ಸಭೆ ಮುಕ್ತಾಯವಾಗುತ್ತಿದ್ದಂತೆಯೇ ನಿನ್ನೆ ಈಗಲ್ಟನ್ ರೆಸಾರ್ಟ್ ನಲ್ಲಿ ಆನಂದ್ ಸಿಂಗ್ ಮತ್ತು ಗಣೇಶ್ ನಡುವೆ ಮಾತಿನ ಚಕಚಮಕಿ ನಡೆದಿದ್ದು, ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತೆರಳಿ ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ.
ಬಳಿಕ ಗಣೇಶ್ ಅವರ ತಮ್ಮ ಕೈಗೆ ಸಿಕ್ಕ ಬಾಟಲಿಯಿಂದ ಆನಂದ್ ಸಿಂಗ್ ಅವರ ತಲೆಗೆ ಬಲವಾಗಿ ಹೊಡೆದಿದ್ದು, ಇದರಿಂದ ಆನಂದ್ ಸಿಂಗ್ ಅವರ ತಲೆಗೆ ಪೆಟ್ಟು ಬಿದ್ದಿದೆ. ಕೂಡಲೇ ಅವರನ್ನು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯ 6ನೇ ಮಹಡಿಯಲ್ಲಿರುವ ವಿಶೇಷ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಸುಳ್ಳು ಸುದ್ದಿ, ರೆಸಾರ್ಟ್ ನಲ್ಲಿ ಯಾವುದೇ ರೀತಿಯ ಗಲಾಟೆಯಾಗಿಲ್ಲ: ಡಿಕೆ ಶಿವಕುಮಾರ್
ಇನ್ನು ಈ ವಿಚಾರ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಮಾಧ್ಯಮಗಳಿಗೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಡಿಕೆ ಶಿವಕುಮಾರ್, ರೆಸಾರ್ಟ್ ನಲ್ಲಿ ಯಾವುದೇ ರೀತಿಯ ಮಾರಾಮಾರಿಯಾಗಿಲ್ಲ. ಶಾಸಕಾಂಗ ಸಭೆಗೂ ಮುನ್ನವೇ ಪಕ್ಷದಲ್ಲಿದ್ದ ಎಲ್ಲ ಭಿನ್ನಾಭಿಪ್ರಾಯ ಬಗೆಹರಿದಿದೆ. ಸುಖಾಸುಮ್ಮನೆ ಸುಳ್ಳು ಹಬ್ಬಿಸುವುದು ಬೇಡ. ಆನಂದ್ ಸಿಂಗ್ ಅವರು ಅವರ ಸಂಬಂಧಿಕರ ಮದುವೆಗೆ ತೆರಳಿದ್ದು, ಇನ್ನು 2-3 ಗಂಟೆಯಲ್ಲಿ ಬರುತ್ತಾರೆ. ಬಂದ ಮೇಲೆ ನೀವೇ ಕೇಳಿ ಎಂದು ಮಾರಾಮಾರಿ ಸುದ್ದಿಯನ್ನು ಅಲ್ಲಗಳೆದಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಬೆಂಜ್ ಕಾರು ಉಡುಗೊರೆ ನೀಡಿಲ್ಲ
ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ಶಾಸಕರ ಬೈರತಿ ಸುರೇಶ್ ಅವರು ಯಾವುದೇ ರೀತಿಯ ಉಡುಗೊರೆ ನೀಡಿಲ್ಲ. ನಮ್ಮ ಸ್ನೇಹಿತರಿಂದ ಪ್ರಯಾಣಕ್ಕೆ ನಾವೇ ಹಲವು ಬಾರಿ ಕಾರು ಪಡೆಯುತ್ತೇವೆ, ಇದೂ ಕೂಡ ಅಂತಹುದ್ದೇ..ಇದರಲ್ಲಿ ವಿವಾದ ಬೇಡ ಎಂದು ಡಿಕೆ ಶಿವಕುಮಾರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com