ಈಗಲ್ಟನ್ ರೆಸಾರ್ಟ್ ನಲ್ಲಿ ಕೈ ಕೈ ಮಿಲಾಸಿದ ಕೈ ಶಾಸಕರು..?; ಶಾಸಕ ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲು

ನಗರದ ಹೊರವಲಯದ ಬಿಡದಿ ಬಳಿ ಈಗಲ್ಟನ್ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದ ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ಮಧ್ಯೆ ...

Published: 20th January 2019 12:00 PM  |   Last Updated: 20th January 2019 03:35 AM   |  A+A-


MLA Anand Singh

ಶಾಸಕ ಆನಂದ್ ಸಿಂಗ್

Posted By : SUD SUD
Source : Online Desk
ಬೆಂಗಳೂರು: ನಗರದ ಹೊರವಲಯದ ಬಿಡದಿ ಬಳಿ ಈಗಲ್ಟನ್ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದ ಕಾಂಗ್ರೆಸ್  ಶಾಸಕರಾದ ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ಮಧ್ಯೆ ತೀವ್ರ ಮಾರಾಮಾರಿ ನಡೆದು ಆನಂದ್ ಸಿಂಗ್ ಅವರ ತಲೆಗೆ ತೀವ್ರ ಪೆಟ್ಟಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ವಿಜಯನಗರ ಹೊಸಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಾಗೂ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ನಡುವೆ ಮಾರಾಮಾರಿ ನಡೆದಿದ್ದು, ಬೆಳಗಿನ ಜಾವ ಸುಮಾರು ಮೂರು ಗಂಟೆ ಈ ಗಲಾಟೆ ನಡೆದಿದೆ. ಕಾಂಗ್ರೆಸ್ ಶಾಸಕರು ಬಿಡದಿಯಲ್ಲಿರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಉಳಿದಿದ್ದರು. ಶನಿವಾರ ರಾತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಲ್‍ಪಿ ಸಭೆ ಮುಗಿದ ನಂತರ ಕೈ ಶಾಸಕರು ಪಾರ್ಟಿ ಮಾಡಿದ್ದಾರೆ.

ಆಪರೇಶನ್ ಕಮಲ ಭೀತಿಯಿಂದ ಕಾಂಗ್ರೆಸ್ ನ ಎಲ್ಲಾ ಶಾಸಕರನ್ನು ಎರಡು ದಿನಗಳ ಹಿಂದೆ ಶಾಸಕಾಂಗ ಪಕ್ಷದ ಸಭೆ ಮುಗಿದ ನಂತರ ನೇರವಾಗಿ ಈಗಲ್ಟನ್ ರೆಸಾರ್ಟ್ ಗೆ ಕರೆದೊಯ್ಯಲಾಗಿತ್ತು. ಅಲ್ಲಿ ಕಳೆದ ರಾತ್ರಿ ಬಳ್ಳಾರಿಯ ಶಾಸಕರಾದ ಕಂಪ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ರಾತ್ರಿಯಿಡೀ ಮದ್ಯ ಸೇವಿಸಿ ನಿದ್ರೆ ಮಾಡದೆ ಮಾತುಕತೆ ನಡೆಸುತ್ತಾ ಕುಳಿತಿದ್ದರು. ಈ ಸಂದರ್ಭದಲ್ಲಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಒಂದು ಹಂತದಲ್ಲಿ ಕಂಪ್ಲಿ ಗಣೇಶ್ ಮದ್ಯದ ಬಾಟಲಿಯಿಂದ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದರಿಂದ ತೀವ್ರ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.

ಇದಕ್ಕೂ ಮುನ್ನ ಆನಂದ್ ಸಿಂಗ್, ಕಂಪ್ಲಿ ಗಣೇಶ್ ಮತ್ತು ಭೀಮಾ ನಾಯಕ್ ಅವರ ಮಧ್ಯೆ ವಾಗ್ವಾದ ನಡೆದಿತ್ತು. ಒಗ್ಗಟ್ಟಿನ ಪ್ರದರ್ಶನಕ್ಕೆ ರೆಸಾರ್ಟ್ ಗೆ ಹೋಗಿದ್ದ ಕಾಂಗ್ರೆಸ್ ಶಾಸಕರು ಬಡಿದಾಡಿಕೊಂಡಿರುವುದು ಇದೀಗ ಸಾರ್ವಜನಿಕರಲ್ಲಿ ನಗೆಪಾಟಲಿಗೀಡಾಗುವಂತೆ ಮಾಡಿದೆ. 

ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆಯಾಗಿ ತೀವ್ರ ಗಾಯಗೊಂಡಿದ್ದರಿಂದ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಅವರನ್ನು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಆಸ್ಪತ್ರೆಯ 6ನೇ ಮಹಡಿಯಲ್ಲಿರುವ ವಿಶೇಷ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಆಸ್ಪತ್ರೆಯೊಳಗೆ ಆನಂದ್ ಸಿಂಗ್ ಅವರ ಆಪ್ತರು ಮಾತ್ರ ಜೊತೆಗಿದ್ದು, ಮತ್ತಿನ್ಯಾರನ್ನೂ ಒಳಗೆ ಬಿಡುತ್ತಿಲ್ಲ. ಆಸ್ಪತ್ರೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
Stay up to date on all the latest ರಾಜಕೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp