ಇತ್ತ ಬರಗಾಲವಿದ್ದರೆ ಅತ್ತ ಆಸ್ಟ್ರೇಲಿಯಾಕ್ಕೆ ಅಧ್ಯಯನ ಪ್ರವಾಸಕ್ಕೆ ಹೋದ ಸಚಿವ ಹೆಚ್ ಡಿ ರೇವಣ್ಣ

ರಾಜ್ಯದಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳ ನಡುವೆ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ತಮ್ಮ...
ಸಚಿವ ಹೆಚ್ ಡಿ ರೇವಣ್ಣ
ಸಚಿವ ಹೆಚ್ ಡಿ ರೇವಣ್ಣ

ಬೆಂಗಳೂರು; ರಾಜ್ಯದಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳ ನಡುವೆ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಒಂದು ವಾರದ ಆಸ್ಟ್ರೇಲಿಯಾಕ್ಕೆ ಅಧ್ಯಯನ ಪ್ರವಾಸಕ್ಕೆ ತೆರಳಿದ್ದಾರೆ. ರಾಜ್ಯದಲ್ಲಿ ಬರಗಾಲ ಸ್ಥಿತಿ ಇರುವಾಗ ವಿದೇಶಕ್ಕೆ ಅಧ್ಯಯನ ಪ್ರವಾಸಕ್ಕೆಂದು ಸಚಿವರು ಹೋಗುವ ಅಗತ್ಯವೇನಿದೆ ಎಂದು ಹಲವರು ಟೀಕಿಸುತ್ತಿದ್ದಾರೆ.

ಮಾಹಿತಿಗಳ ಪ್ರಕಾರ, ಸಂಕ್ರಾಂತಿ ಮುಗಿದ ಮರುದಿನ ಅಂದರೆ ಜನವರಿ 16ರಂದು ಸಚಿವ ಹೆಚ್ ಡಿ ರೇವಣ್ಣ ಆಸ್ಟ್ರೇಲಿಯಾಕ್ಕೆ ತೆರಳಿದ್ದು ಇದೇ 23ರವರೆಗೆ ಅಲ್ಲಿ ಇರುತ್ತಾರೆ. ಆರಂಭದಲ್ಲಿ ಇವರ ಪ್ರವಾಸಕ್ಕೆ ವಿದೇಶಾಂಗ ಸಚಿವಾಲಯ ಅನುಮತಿ ನೀಡಿರಲಿಲ್ಲ.

ಇಲ್ಲಿ ಇನ್ನೊಂದು ಮುಖ್ಯ ವಿಚಾರವೆಂದರೆ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಪರೀಕ್ಷಿಸಿ ಅಧಿಕಾರಿಗಳಿಗೆ ಮಾತ್ರ ಪ್ರವಾಸಕ್ಕೆ ಅನುಮತಿ ನೀಡಿತ್ತು. ಪ್ರಸ್ತಾವನೆಯಲ್ಲಿ ಸಚಿವ ಹೆಚ್ ಡಿ ರೇವಣ್ಣ ಮತ್ತು ಇತರ 5 ಮಂದಿಯ ಹೆಸರುಗಳಿದ್ದವು. ಅಧ್ಯಯನ ಪ್ರವಾಸಕ್ಕೆ ರಾಜಕೀಯ ದೃಷ್ಟಿಕೋನ ಸಿಗಬಾರದು ಎಂದು ಸಚಿವ ಹೆಚ್ ಡಿ ರೇವಣ್ಣ ಹೆಸರಿಗೆ ವಿದೇಶಾಂಗ ಸಚಿವಾಲಯ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು. ನಂತರ ಇ-ಅನುಮೋದನೆ ನೀಡಿತು.

ಇದೀಗ ಸಚಿವರ ಜೊತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಕಾರ್ಯದರ್ಶಿ ಕೃಷ್ಣಾ ರೆಡ್ಡಿ ಕೆ ಎಸ್, ಸೂಪರಿಂಟೆಂಡೆಂಟ್ ಎಂಜಿನಿಯರ್ ಸುರೇಶ್ ಮತ್ತು ದುರ್ಗಪ್ಪ ಮತ್ತು ಕಾರ್ಯಕಾರಿ ಎಂಜಿನಿಯರ್ ಯಶವಂತ್ ಕುಮಾರ್ ಇದ್ದಾರೆ.
ನಿಯೋಗದ ಪ್ರವಾಸದ ಇಡೀ ವೆಚ್ಚವನ್ನು ಲೋಕೋಪಯೋಗಿ ಇಲಾಖೆಯೇ ಭರಿಸಲಿದೆ. ಹೆದ್ದಾರಿ ನಿರ್ಮಾಣ, ಆಸ್ತಿಯ ನಿರ್ವಹಣೆ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಆಸ್ಟ್ರೇಲಿಯಾದಿಂದ ಕಲಿಯಲು ಅಧ್ಯಯನ ಪ್ರವಾಸಕ್ಕೆ ತೆರಳಿದ್ದಾರೆ. ಪ್ರವಾಸಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂದು ತಿಳಿದುಬಂದಿಲ್ಲ.

ಪ್ರವಾಸಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದರೇ ಎಂದು ಕೇಳಿದರೆ ಅವರ ಕಚೇರಿ ಮೂಲಗಳು ಪ್ರತಿಕ್ರಿಯಿಸಿಲ್ಲ. ಸಚಿವರ ಎಲ್ಲಾ ವಿದೇಶಿ ಪ್ರವಾಸಗಳಿಗೆ ಮುಖ್ಯಮಂತ್ರಿಗಳ ಒಪ್ಪಿಗೆ ಬೇಕು ಎಂದು ಇತ್ತೀಚೆಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com