ಶೋಕಾಚರಣೆ ನಡುವೆ ಕಾರ್ಯಕ್ರಮ: ಸಚಿವ ಪ್ರಿಯಾಂಕ್ ಖರ್ಗೆಗೆ ವೇಣುಗೋಪಾಲ್ ತರಾಟೆ

ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನ ಶೋಕಾಚರಣೆಯ ಆದೇಶ ಹೊರಡಿಸಿದರೂ ಖಾಸಗಿ ಹೋಟೆಲಿನಲ್ಲಿ ಅದ್ಧೂರಿ...
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಬೆಂಗಳೂರು: ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನ ಶೋಕಾಚರಣೆಯ ಆದೇಶ ಹೊರಡಿಸಿದರೂ ಖಾಸಗಿ ಹೋಟೆಲಿನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ 'ಸಮಾನತೆ ಅನ್ವೇಷಣೆ -ಸಂವಿಧಾನ ಸಂಭಾಷಣೆ' ಕಾರ್ಯಕ್ರಮವನ್ನು ಆಯೋಜಿಸಿತು. 
ಶೋಕಾಚರಣೆಯಿದ್ದರೂ ಕಾರ್ಯಕ್ರಮ ನಡೆಸಿದ ಪ್ರಿಯಾಂಕ್ ಖರ್ಗೆ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಿವಿಧ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಚಿವರ ವರ್ತನೆಗೆ ಆಕ್ಷೇಪ ವ್ಯೆಕ್ತಪಡಿಸಿದ್ದರು.
ಈ ವಿಚಾರ ಹೈಕಮಾಂಡ್ ಅಂಗಳಕ್ಕೆ ತಲುಪಿತ್ತು. ಹೀಗಾಗಿ ಬೆಳ್ಳಂಬೆಳಗ್ಗೆ ಪ್ರಿಯಾಂಕ್ ಖರ್ಗೆಗೆ ಕರೆ ಮಾಡಿ ಕೆ.ಸಿ.ವೇಣುಗೋಪಾಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಯುಎನ್ಐಗೆ ಕೆಪಿಸಿಸಿ ಮೂಲಗಳಿಂದ ತಿಳಿದುಬಂದಿದೆ.
ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನ ನಿಮಗೆ ಇಲ್ಲದೇ ಹೋಯ್ತೇ? ಸಿದ್ದಗಂಗಾ ಶ್ರೀಗಳಂತ ಸಾಧಕರು ಅಗಲಿದಾಗ ಈ ಕಾರ್ಯಕ್ರಮ ನಡೆಸಿ ವಿವಾದ ಮಾಡಿಕೊಳ್ಳಬೇಕಾದ ಅವಶ್ಯಕತೆ ಏನಿತ್ತು? ಈ ವಿಚಾರಗಳು ಭಾವನಾತ್ಮಕವಾದ ವಿಷಯಗಳು ಎನ್ನುವುದು ನಿಮಗೆ ಗೊತ್ತಾಗುದಿಲ್ಲವೇ? ಇದರಿಂದ ಆಗುವ ಪರಿಣಾಮಗಳೇನು ಅಂತ ಯೋಚಿಸುವ ಶಕ್ತಿಯು ನಿಮಗಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ. ಅಷ್ಟೇ ಅಲ್ಲದೇ ಈ ವಿಚಾರವಾಗಿ ಬಹಿರಂಗವಾಗಿ ಕ್ಷಮೆ ಯಾಚಿಸುವಂತೆ ಪ್ರಿಯಾಂಕ್ ಖರ್ಗೆಗೆ ಸೂಚನೆಯನ್ನು ಕೂಡ ವೇಣುಗೋಪಾಲ್ ನೀಡಿದ್ದಾರೆ.
ಮಂಗಳವಾರ ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಲಿಂಗೈಕ್ಯರಾದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಕಾರ್ಯಕ್ರಮವನ್ನು ಮುಂದುವರಿಸಲಾಯಿತು. ಇಡೀ ರಾಜ್ಯವೇ ಶೋಕಾಚರಣೆ ಮಾಡುತ್ತಿರುವಾಗ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ತಪ್ಪು ಎಂದು ಬಿಜೆಪಿ ಆಕ್ಷೇಪಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com