ಲೋಕಸಭಾ ಚುನಾವಣೆ: ಗೆಲ್ಲುವ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್- ಕೆ.ಸಿ. ವೇಣುಗೋಪಾಲ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಮಾನದಂಡದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಕೆ. ಸಿ. ವೇಣು ಗೋಪಾಲ್
ಕೆ. ಸಿ. ವೇಣು ಗೋಪಾಲ್

ಬೆಂಗಳೂರು: ಮುಂಬರುವ  ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಮಾನದಂಡದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್  ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಲೋಕಸಭಾ ಚುನಾವಣೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪರಿಷತ್ ಸದಸ್ಯರು, ಹಾಗು ಜಿಲ್ಲಾ ಪದಾಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು,ಸಚಿವರು,ಪಕ್ಷದ ಮುಖಂಡರ ಅಭಿಪ್ರಾಯದ ಜೊತೆಗೆ ಅಭ್ಯರ್ಥಿಯ ಗೆಲುವಿನ  ಮಾನದಂಡವೇ ಆಯ್ಕೆಯಲ್ಲಿ ಪ್ರಧಾನವಾಗಲಿದೆ ಸ್ಪಷ್ಟಪಡಿಸಿದರು.

ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಪ್ರಮುಖರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ನಾಳೆ ಮತ್ತಷ್ಟು ಜಿಲ್ಲೆಗಳ ಮುಖಂಡರ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು. ಎಲ್ಲರ ಅಭಿಪ್ರಾಯವನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತಂದು ಸೂಕ್ತ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರ ಹಲ್ಲೆ ಪ್ರಕರಣದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿಲ್ಲ. ಪಕ್ಷದ ವರ್ಚಸ್ಸನ್ನು ಯಾರೂ ಕೆಡಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಮುಖ್ಯ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಶಾಸಕ ಗಣೇಶ್ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಂಡಿದೆ ಎಂದರು.

ಪ್ರಿಯಾಂಕ ಗಾಂಧಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದು ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದಂತಾಗಿದೆ. ಇದುವರೆಗೂ ಪ್ರಿಯಾಂಕ ತೆರೆಯ ಹಿಂದೆ ಇದ್ದು ಪಕ್ಷದ ಕೆಲಸ ಮಾಡುತ್ತಿದ್ದರು. ಈಗ ಮುಖ್ಯವಾಹಿನಿಯಲ್ಲಿ ಪಕ್ಷಕ್ಕೆ ಹಾಗು ರಾಹುಲ್ ಗಾಂಧಿ ಅವರಿಗೆ ಬಲ ತುಂಬಲಿದ್ದಾರೆ ಎಂದು ಹೇಳಿದರು.

ಕಳೆದ ಹಲವು ತಿಂಗಳಿಂದ ಮೋದಿ ಸರ್ಕಾರದ ವಿರುದ್ದ ರಾಹುಲ್ ಗಾಂಧಿ ಯೋಧನಂತೆ ಶ್ರಮಿಸುತ್ತಿದ್ದಾರೆ. ಬಿಜೆಪಿಯವರು ಯಾವ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ಆ ಕುಟುಂಬದವರು ದೇಶಕ್ಕಾಗೆ ತ್ಯಾಗ ಮಾಡಿದ್ದಾರೆ. ನೆಹರು ಕುಟುಂಬ ದೇಶದ ಅಭಿವೃದ್ದಿಗೆ  ಕೊಟ್ಟ ಕೊಡುಗೆಗಳ ಬಗ್ಗೆ ಬಿಜೆಪಿಯವರಿಗೇನು ಗೊತ್ತು ವೇಣುಗೋಪಾಲ್ ತಿರುಗೇಟು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com