ಮೈತ್ರಿ ಸರ್ಕಾರದಲ್ಲಿ ಒಗ್ಗಟ್ಟು ಇದೆಯೇ?: ಇನ್ನೂ ಜಾರಿಗೆ ಬಂದಿಲ್ಲ ಸಾಮಾನ್ಯ ಕನಿಷ್ಠ ಕಾರ್ಯಕ್ರಮ

ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟಗಳು ವಾದ ವಿವಾದ ನಡೆಸದೆ ಯಾವುದಕ್ಕೂ ಹೊಂದಾಣಿಕೆ...
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್

ಬೆಂಗಳೂರು: ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟಗಳಲ್ಲಿ ಇತ್ತೀಚೆಗೆ ವಾದ ವಿವಾದ ನಡೆಯದೆ ಯಾವುದೂ ಜಾರಿಗೆ ಬರುವುದಿಲ್ಲ ಎನಿಸುತ್ತದೆ. ಮುಖ್ಯಮಂತ್ರಿಯಾಗಿ ಹೆಚ್ ಡಿ ಕುಮಾರಸ್ವಾಮಿ ಅಧಿಕಾರ ವಹಿಸಿ ಎಂಟು ತಿಂಗಳಾಗಿವೆ. ಸರ್ಕಾರದ ಸುಗಮ ಆಡಳಿತಾಭಿವೃದ್ಧಿಗೆ ಅನುಕೂಲವಾಗಿರುವ ಸಾಮಾನ್ಯ ಕನಿಷ್ಟ ಕಾರ್ಯಕ್ರಮ ವಿಚಾರದಲ್ಲಿ ಇನ್ನೂ ಎರಡೂ ಪಕ್ಷಗಳು ಒಮ್ಮತಕ್ಕೆ ಬಂದಿಲ್ಲ.

ಮೈತ್ರಿ ಸರ್ಕಾರ ರಚನೆಯಾದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚನೆ ಮಾಡಿದವು. ಸಮನ್ವಯ ಸಮಿತಿಯಲ್ಲಿಯೇ ಇದುವರೆಗೆ ಎರಡೂ ಪಕ್ಷಗಳಲ್ಲಿ ಒಗ್ಗಟ್ಟು ಮೂಡಿಲ್ಲ, ಈ ಮಧ್ಯೆ ಸರ್ಕಾರದ ಸಾಮಾನ್ಯ ಕನಿಷ್ಟ ಕಾರ್ಯಕ್ರಮದ ಕುರಿತು ಕೇಳುವವರೇ ಇಲ್ಲದಂತಾಗಿದೆ.

ಸಮನ್ವಯ ಸಮಿತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿದ್ದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇದ್ದಾರೆ. ಇವರು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರಚನೆಗೆ ಸಮಿತಿ ನೇಮಿಸಿದ್ದರು. ಮೊಯ್ಲಿ ಸಮಿತಿ ವರದಿ ಸಲ್ಲಿಸಿ ತಿಂಗಳುಗಳೇ ಕಳೆದರೂ ಕೂಡ ಸಮನ್ವಯ ಸಮಿತಿ ಅದನ್ನು ಇನ್ನೂ ಬಹಿರಂಗಪಡಿಸಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಸಚಿವರುಗಳು ಸಮಿತಿಯ ಭಾಗವಾಗಿದ್ದರು.

ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಸರ್ಕಾರ ಆರಂಭಿಸಿದ್ದ ಎಲ್ಲಾ ಯೋಜನೆಗಳನ್ನು ಸೇರಿಸಲಾಗಿದ್ದು ಜೆಡಿಎಸ್ ತಾನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಭರವಸೆಗಳನ್ನು ಸೇರಿಸಿದೆ ಎನ್ನಲಾಗಿದೆ. ಸಮಿತಿಯ ಕರಡು ವರದಿಯನ್ನು ಸಮನ್ವಯ ಸಮಿತಿಗೆ ನೀಡಲಾಗಿದ್ದು ಅವರು ಅದನ್ನು ಅಂತಿಮಗೊಳಿಸಿ ಬಿಡುಗಡೆ ಮಾಡಬೇಕಾಗಿದೆ ಎನ್ನುತ್ತವೆ ಮೂಲಗಳು.

ಮುಖ್ಯಮಂತ್ರಿಗಳು ವರದಿ ಪಡೆದು ಸಿದ್ದರಾಗಿದ್ದು ಬಜೆಟ್ ನಂತರ ಯಾವಾಗ ಬೇಕಾದರೂ ಘೋಷಿಸಬಹುದು ಎನ್ನುತ್ತಾರೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಮನ್ವಯ ಸಮಿತಿ ಕಾರ್ಯದರ್ಶಿ ದನೀಶ್ ಆಲಿ.

ಆದರೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ವಿಶ್ವನಾಥ್ ಹೇಳುವ ಪ್ರಕಾರ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ವರದಿ ಸಿದ್ದವಾಗಿಯೂ ಇಲ್ಲ ಮತ್ತು ಅದರ ಬಗ್ಗೆ ಚರ್ಚಿಸಿಯೂ ಇಲ್ಲ.

ಹೀಗಿರುವಾಗ ಸದ್ಯದಲ್ಲಿ ಅದು ಜಾರಿಗೆ ಬರುವ ಲಕ್ಷಣ ಕಾಣುತ್ತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com