ಅಧಿಕಾರವಿದ್ದಾಗ ಡಿ.ಕೆ. ಶಿವಕುಮಾರ್ ಫ್ರಂಟ್ ಲೈನ್, ಇಲ್ಲದಿದ್ದರೆ ಸೈಡ್ ಲೈನ್: ಆರ್.ಅಶೋಕ್

ಅಧಿಕಾರ ಯಾರ ಕೈಯಲ್ಲಿ ಇರುತ್ತದೆಯೋ ಅವರು ಒಕ್ಕಲಿಗರಲ್ಲಿ ಪ್ರಬಲರು ಎಂದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಶಾಸಕ ಆರ್.ಅಶೋಕ್ ಹೇಳಿದ್ದಾರೆ.
ಆರ್. ಅಶೋಕ್
ಆರ್. ಅಶೋಕ್

ಬೆಂಗಳೂರು: ಒಕ್ಕಲಿಗ ನಾಯಕನಾಗಿ ತಾವು ಅನುಭವಿಸಿದಷ್ಟು ಖಾತೆಗಳನ್ನು ಸಚಿವ ಡಿ.ಕೆ.ಶಿವಕುಮಾರ್ ಇನ್ನೂ ಅನುಭವಿಸಲು ಸಾಧ್ಯವಾಗಿಲ್ಲ. ಅಧಿಕಾರ ಯಾರ ಕೈಯಲ್ಲಿ ಇರುತ್ತದೆಯೋ ಅವರು ಒಕ್ಕಲಿಗರಲ್ಲಿ ಪ್ರಬಲರು ಎಂದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಶಾಸಕ ಆರ್.ಅಶೋಕ್ ಹೇಳಿದ್ದಾರೆ.

ಯುಎನ್‍ಐ ಕನ್ನಡ ಸುದ್ದಿಸಂಸ್ಥೆಯೊಂದಕ್ಕೆ  ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಗೆ ನನ್ನಷ್ಟು ಖಾತೆಗಳು ಇನ್ನೂ ಸಿಕ್ಕಿಲ್ಲ. ಡಿಕೆಶಿ ಇನ್ನೂ ಉಪಮುಖ್ಯಮಂತ್ರಿ ಖಾತೆ ನೋಡಿಯೇ ಇಲ್ಲ. ನಾನು ಈಗಾಗಲೇ ಆ ಹುದ್ದೆ ಅನುಭವಿಸಿದ್ದೇನೆ. ಒಂದೇ ಬಾರಿಗೆ ಮೂರು ಖಾತೆಗಳನ್ನು ನಿರ್ವಹಿಸಿದ್ದೇನೆ. ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಅಧಿಕಾರದಲ್ಲಿರುವುದರಿಂದ ಒಕ್ಕಲಿಗರಲ್ಲಿ ಪ್ರಬಲರಾಗಿದ್ದಾರಷ್ಟೆ. ನಾಳೆ ನನ್ನ ಕಡೆ ಎಲ್ಲ ಇರುತ್ತಾರೆ ಎಂದರು.

ನಿರ್ಮಲಾನಂದನಾಥ ಸ್ವಾಮೀಜಿಗಳು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಮೂವರನ್ನು ಸಮಾನವಾಗಿ ಕಾಣುತ್ತಾರೆ. ಇಡೀ ಕರ್ನಾಟಕದಲ್ಲಿ 50 ಸಾವಿರ ಜನರನ್ನು ಸೇರಿಸಿ ಹಿಂದೆ ನಾನು ಒಕ್ಕಲಿಗರ ಬೃಹತ್ ಸಮಾವೇಶ ಮಾಡಿದ್ದು ಬಿಟ್ಟರೆ ಬೇರೆ ಯಾರೂ ಈವರೆಗೂ ಮಾಡಿಲ್ಲ. ಮಠದಿಂದಾಗಲೀ ಒಕ್ಕಲಿಗರ ಯಾವುದೇ ಕಾರ್ಯಕ್ರಮಗಳು, ಸಭೆ ಇದ್ದರೂ ನನಗೆ ಮೊದಲ ಆಹ್ವಾನ ಎಂದು ಸಂದರ್ಶನದಲ್ಲಿ ತಿಳಿಸಿದರು.

ನಾನು ಬಿಜೆಪಿಯಲ್ಲಿ ಒಕ್ಕಲಿಗ ನಾಯಕನಾಗಿ ಗುರುತು ಮಾಡಿಕೊಂಡಿದ್ದೇನೆ. ಅಧಿಕಾರ ಇದ್ದಾಗ ಫ್ರಂಟ್ ಲೈನ್ ತೋರಿಸುತ್ತಾರೆ. ಇಲ್ಲವಾದರರೆ ಸೈಡ್ ಲೈನ್ ಆಗಬೇಕಾಗುತ್ತದೆ.  ನಾನು ಯಡಿಯೂರಪ್ಪ ಫಾಲೋವರ್. ಬಿಜೆಪಿಯಲ್ಲಿ ಇನ್ನೊಬ್ಬ ಅಶೋಕನನ್ನು ಸೃಷ್ಟಿಮಾಡಲು ಸಾಧ್ಯವೇ ಇಲ್ಲ. ಶೋಭಾ ಕರಂದ್ಲಾಜೆಗೆ ಚಿಕ್ಕಮಗಳೂರು,ಉಡುಪಿ ಜವಾಬ್ದಾರಿ ಕೊಟ್ಟಿದ್ದಾರೆ, ಅವರು ಅಲ್ಲಿ ಕೆಲಸ ಮಾಡಬೇಕು. ನನಗೆ ಬೆಂಗಳೂರು ಜವಾಬ್ದಾರಿ ನೀಡಿದ್ದಾರೆ. ನಾನು ಇಲ್ಲಿ ಕೆಲಸ ಮಾಡುತ್ತೇನೆ ಎಂದರು.

ಹಳೆ ಮೈಸೂರು ಭಾಗದಲ್ಲಿ ಮಂಡ್ಯ, ಹಾಸನ ಬಿಟ್ಟರೆ ಬೇರೆ ಯಾವ ಭಾಗದಲ್ಲಿಯೂ ಜೆಡಿಎಸ್  ಪ್ರಬಲವಾಗಿಲ್ಲ. ಈ ಭಾಗದಲ್ಲಿ ದೇವೇಗೌಡರೇ ನನಗೆ ಪ್ರತಿಸ್ಪರ್ಧಿ. ಮಂಡ್ಯ ಉಪಚುನಾವಣೆ ಜವಾಬ್ದಾರಿ ವಹಿಸಿಕೊಂಡು ನಿರ್ವಹಿಸಿದ್ದೇನೆ.  ಬೆಂಗಳೂರಿನಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ. ರಾಜಧಾನಿಯಲ್ಲಿ ನಾವೇ ಪ್ರಬಲರು.  39 ವರ್ಷಗಳಿಂದ  ಪಕ್ಷದಲ್ಲಿರುವ ನಾನೇ ಬೆಂಗಳೂರಿನಲ್ಲಿ ನೂರಕ್ಕೆ ನೂರು ಬಲಿಷ್ಠ ನಾಯಕ ಎಂದು ಅಶೋಕ್ ಹೇಳಿಕೊಂಡರು.

ಹಳೆಮೈಸೂರು ಭಾಗದಲ್ಲಿ ದೇವೇಗೌಡರ ಕುಟುಂಬ ರಾಜಕಾರಣವಿದೆ. ಬೆಂಗಳೂರು, ಕೋಲಾರವನ್ನು ಬಿಜೆಪಿ ಆಕ್ರಮಿಸಿಕೊಂಡಿದೆ.  ಹಳೆಮೈಸೂರು ಭಾಗವನ್ನು ಒಂದೊಂದಾಗಿ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ದೇವೇಗೌಡರ ಕುಟುಂಬ ರಾಜಕಾರಣ ತುಂಬಾ ದಿನಗಳ ಕಾಲ ಉಳಿಯುವುದಿಲ್ಲ. ಸಮ್ಮಿಶ್ರ ಸರ್ಕಾರವೂ  ಬಹಳ ದಿನ ಉಳಿಯುವುದಿಲ್ಲ ಎಂದು ಅವರು ಭವಿಷ್ಯ ನುಡಿದರು.
ಅಧಿವೇಶನವರೆಗೂ ಸಮ್ಮಿಶ್ರ ಸರ್ಕಾರ ಇರುತ್ತದೆ ಎನ್ನುವುದೇ ಅನುಮಾನ. ಸಮ್ಮಿಶ್ರ ಸರ್ಕಾರದ ಆಂತರಿಕ ಸಮಸ್ಯೆಯಲ್ಲಿ ಬಿಜೆಪಿ ಪ್ರವೇಶ ಮಾಡುವುದಿಲ್ಲ. ರಮೇಶ್ ಜಾರಕಿಹೊಳಿ ಅವರನ್ನು ನಾನಾಗಲಿ, ಪಕ್ಷವಾಗಲಿ ಸಂಪರ್ಕಿಸಿಲ್ಲ ಎಂದು ಸ್ಪಷ್ಪಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com