ಬಳ್ಳಾರಿ ಜನರಿಗಾಗಿ ಶಾಸಕ ಸ್ಥಾನ ತ್ಯಾಗ: ಆನಂದ್ ಸಿಂಗ್

ಬಳ್ಳಾರಿ ಜಿಲ್ಲೆಯ ಜನರ ಶ್ರೇಯೋಭಿವೃದ್ಧಿಗಾಗಿ ಶಾಸಕ ಸ್ಥಾನ ತ್ಯಾಗ ಮಾಡುತ್ತಿರುವುದಾಗಿ ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹೇಳಿದ್ದಾರೆ.
ಆನಂದ್ ಸಿಂಗ್
ಆನಂದ್ ಸಿಂಗ್
ಬೆಂಗಳೂರು: ಬಳ್ಳಾರಿ ಜಿಲ್ಲೆಯ ಜನರ ಶ್ರೇಯೋಭಿವೃದ್ಧಿಗಾಗಿ ಶಾಸಕ ಸ್ಥಾನ ತ್ಯಾಗ ಮಾಡುತ್ತಿರುವುದಾಗಿ ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹೇಳಿದ್ದಾರೆ. ಈ ಮೂಲಕ ತಾವು ಭವಿಷ್ಯದಲ್ಲಿ ಸಚಿವರಾಗಿ ಜಿಲ್ಲೆ ಮತ್ತು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಭಾಧ‍್ಯಕ್ಷರಿಗೆ ತಾವು ರಾಜೀನಾಮೆ ಸಲ್ಲಿಸಿದ್ದು, ಅಗತ್ಯವಿದ್ದಲ್ಲಿ ಮತ್ತೊಮ್ಮೆ ತ್ಯಾಗ ಪತ್ರ ಸಲ್ಲಿಸಲು ಸಿದ್ಧ. ಬಳ್ಳಾರಿ ಜಿಲ್ಲೆಗೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸದಿದ್ದರೆ ತಾವು ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ಜಿಲ್ಲೆಯ ಜನರಿಗೆ ಅನ್ಯಾಯವಾಗುತ್ತಿದ್ದು, ಆ ಬಗ್ಗೆ ಧ‍್ವನಿಯೆತ್ತುತ್ತಿದ್ದೇನೆ ಎಂದರು.
ಸಚಿವ ಸ್ಥಾನದ ಆಕಾಂಕ್ಷಿ ತಾವಲ್ಲ. ಅಧಿಕಾರ ಶಾಶ್ವತವಲ್ಲ. ಆದರೆ ಕ್ಷೇತ್ರದ, ಜಿಲ್ಲೆಯ, ರಾಜ್ಯದ ಜನರು ಮುಖ್ಯ. ವಿಜಯನಗರ ಕ್ಷೇತ್ರವನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡಬೇಕು. ಹೀಗಾಗಿ ತಮಗೆ ಸಚಿವಸ್ಥಾನ ಬೇಡ ಎಂದಿದ್ದೆ. ರಾಜ್ಯದ ಜನರಿಗೆ ಉದ್ಯೋಗ ಸಿಗಬೇಕು. ಜಿಂದಾಲ್ ಗೆ ಭೂಮಿ ಪರಭಾರೆ ಮಾಡಬೇಡಿ ಎಂದು ಮನವಿ ಮಾಡಿದ್ದೆ. ಅದಕ್ಕೆ ಬೆಲೆ ಸಿಗದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೇನೆ ಎಂದರು.
ನಾನು ಯಾವುದೇ ಕಾರ್ಖಾನೆಗೆ ವಿರೋಧವಾಗಿಲ್ಲ. ಜಿಲ್ಲೆಯ ಜನರಿಗೆ ಅನ್ಯಾಯ ಆದಾಗ ಧ್ವನಿಯೆತ್ತಬೇಕು.ನನ್ನ ಬೇಡಿಕೆ ಈಡೇರಿಕೆಗೆ ನನ್ನ ಮುಂದೆ ಇರುವ ಅಸ್ತ್ರ ಎಂದರೆ ರಾಜೀನಾಮೆ ಮಾತ್ರ. ಸರ್ಕಾರದ ಮುಂದೆ ನನ್ನ ಬೇಡಿಕೆ ಮುಂದಿಟ್ಟಿದ್ದೇನೆ.ಅದಕ್ಕೆ ಹೇಗೆ ಸ್ಪಂದಿಸುತ್ತಾರೆ ಎನ್ನುವುದರ ಮೇಲೆ ತಮ್ಮ ಮುಂದಿನ ನಿರ್ಧಾರ ನಿಂತಿದೆ ಎಂದು ಆನಂದ್ ಸಿಂಗ್ ಸ್ಪಷ್ಟಪಡಿಸಿದರು.
ಸರ್ಕಾರಕ್ಕೆ ಬ್ಲಾಕ್ ಮೇಲ್ ಮಾಡುತ್ತಿಲ್ಲ. ನ್ಯಾಯಕ್ಕಾಗಿ ಏಕಾಂಗಿ ಹೋರಾಟಕ್ಕೂ ಸಿದ್ಧವಿರುವ ತಾವು ಜಿಲ್ಲೆ, ರಾಜ್ಯದ ಜನರಿಗಾಗಿ ತ್ಯಾಗ ಮಾಡುತ್ತಿದ್ದು, ಒಂಟಿಯಾಗಿ ಜಿಲ್ಲೆಗಾಗಿ ಹೋರಾಟ ಮಾಡಲು ಸಿದ್ಧ. ಬಳ್ಳಾರಿ ಒಳಿತಿಗಾಗಿ ಪಕ್ಷಾತೀತವಾಗಿ ಹೋರಾಡುತ್ತೇನೆ. ತಮ್ಮ ಬೇಡಿಕೆಗೆ ಹೇಗೆ ಸ್ಪಂದಿಸುತ್ತಾರೆ ಎನ್ನುವುದನ್ನು ಕಾದು ನೋಡುತ್ತೇನೆ ಎಂದರು.
ತಾವು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ ಎಂಬುದನ್ನು ಒತ್ತಿ ಹೇಳಿದ ಆನಂದ್ ಸಿಂಗ್, ಯಾವುದೇ ಗುಂಪುಗಾರಿಕೆ ಮಾಡುತ್ತಿಲ್ಲ. ಎಲ್ಲರ ಜೊತೆ ಚೆನ್ನಾಗಿದ್ದೇನೆ .ತಾವು ಬಿಜೆಪಿ ಸೇರುತ್ತಿರುವ ವರದಿಗಳು ಸುಳ್ಳು ಎಂದರು. ತಮಗೆ ಬಳ್ಳಾರಿ ಜಿಲ್ಲೆ, ರಾಜ್ಯ ಮುಖ್ಯವೇ ಹೊರತು ಅಧಿಕಾರವಲ್ಲ. ಜನರ ಮುಂದೆ ಯಾವುದೇ ಅಧಿಕಾರ ಶಾಶ್ವತವಲ್ಲ. ತಮ್ಮ ಹೋರಾಟಕ್ಕೆ ಅನಿಲ್ ಲಾಡ್ ಬೆಂಬಲವೂ ಇದೆ.
ಪಕ್ಷಾತೀತವಾಗಿ ಬಳ್ಳಾರಿ ಜಿಲ್ಲೆಗಾಗಿ ಎಲ್ಲಾ ಶಾಸಕರು ಹೋರಾಟ ಮಾಡಬೇಕು. ಹೀಗಾಗಿ ರಾಜೀನಾಮೆ ಸಲ್ಲಿಸಿದ್ದು, ಅದರ ಪ್ರತಿಯನ್ನು ರಾಜ್ಯಪಾಲರಿಗೂ ನೀಡಿದ್ದೇನೆ. ರಾಜೀನಾಮೆ ಪತ್ರದಲ್ಲಿ ಏನಾದರೂ ತಾಂತ್ರಿಕ ತೊಂದರೆಗಳಿದ್ದರೆ, ಸಭಾಧ್ಯಕ್ಷರನ್ನು ಮತ್ತೆ ಭೇಟಿಯಾಗಲಿ‍ದ್ದೇನೆ ಎಂದರು.
ಸೋಮವಾರ ಬೆಳಿಗ್ಗೆ ಸ್ಪೀಕರ್ ರಮೇಶ್ ಕುಮಾರ್, ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದನ್ನು ತಳ್ಳಿಹಾಕಿದ್ದರು. ಆದರೆ ಮಧ್ಯಾಹ್ನದ ಹೊತ್ತಿಗೆ ವಿಧಾಸಭಾಧ್ಯಕ್ಷರ ಕಚೇರಿಗೆ ಸಿಂಗ್ ರಾಜೀನಾಮೆ ತಲುಪಿರುವ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com