ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಮೈತ್ರಿ ಸರ್ಕಾರದ ವಿರುದ್ಧ ಅವಿಶ‍್ವಾಸ ನಿರ್ಣಯ ಮಂಡಿಸುವುದಿಲ್ಲ: ಯಡಿಯೂರಪ್ಪ

ಜುಲೈ 12ರಿಂದ ನಡೆಯಲಿರುವ ವಿಧಾನಮಂಡಲ ಮುಂಗಾರು ಅಧಿವೇಶನದಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಿಲ್ಲ....
ಬೆಂಗಳೂರು: ಜುಲೈ 12ರಿಂದ ನಡೆಯಲಿರುವ ವಿಧಾನಮಂಡಲ ಮುಂಗಾರು ಅಧಿವೇಶನದಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಇಂದು ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ. ಮೈತ್ರಿ ಸರ್ಕಾರದಲ್ಲಿನ ಬದಲಾವಣೆಗಳು, ರಾಜಕೀಯ ಬೆಳವಣಿಗೆಗಳನ್ನು ನೋಡಿ ಸದನದಲ್ಲಿ ಯಾವ ರೀತಿ  ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಎಂಬ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ  ನಡೆಸಲಾಗುವುದು. ಸಭೆಯ ಬಳಿಕವಷ್ಟೇ ಬಿಜೆಪಿಯ ಮುಂದಿನ ನಡೆ ಏನು ಎಂಬುದು  ಸ್ಪಷ್ಟವಾಗಲಿದೆ ಎಂದರು.
ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರಿಂದ ಬಿಜೆಪಿ ಶಾಸಕರಿಗೆ ಗಾಳ ಹಾಕಿರುವ ಕುರಿತ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಕಾಂಗ್ರೆಸ್ ಗೆ ತೂತುಬಿದ್ದು ಒಂದೂವರೆ ತಿಂಗಳಾಗಿದೆ. ಇಂತಹ ತೂತುಬಿದ್ದು ಮುಳುಗುತ್ತಿರುವ ಹಡಗನ್ನು ಏರಲು ಯಾರು ಸಹ ಇಷ್ಟಪಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ಕಳೆದ 3 ತಿಂಗಳಿನಿಂದಲೂ ಪಕ್ಷ ಬಿಟ್ಟು ಯಾವ ಶಾಸಕರೂ ಹೋಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಲೇ ಇದ್ದಾರೆ. ಆದರೆ ನಿನ್ನೆ ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ  ನೀಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಏನು ಹೇಳುತ್ತಾರೋ ಗೊತ್ತಿಲ್ಲ ಎಂದರು.
ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ನಾವೆಲ್ಲಿಯೂ ಆಪರೇಷನ್ ಕಮಲ ಮಾಡುತ್ತೇವೆ ಎಂದು ಹೇಳಿಲ್ಲ. ತಾವು ಯಾವ ಶಾಸಕರನ್ನೂ ಸಂಪರ್ಕ ಮಾಡಿಲ್ಲ. ಕಾಂಗ್ರೆಸ್-ಜೆಡಿಎಸ್ ಬೇಕಿದ್ದರೆ ರಿವರ್ಸ್ ಆಪರೇಷನ್ ಮಾಡಿಕೊಂಡು ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ ಎಂದು ಸವಾಲು ಹಾಕಿದರು.
ರಾಜ್ಯದ ಅಭಿವೃದ್ಧಿಯನ್ನು ಪರಿಗಣಿಸದ ಮುಖ್ಯಮಂತ್ರಿ ಎಂದರೆ ಅದು ಕುಮಾರಸ್ವಾಮಿ. ಜನರ ಸಮಸ್ಯೆಗೆ ಸ್ಪಂದಿಸಬೇಕಾಗಿರುವ ಮುಖ್ಯಮಂತ್ರಿ ಅಮೆರಿಕ ಪ್ರವಾಸದಲ್ಲಿದ್ದಾರೆ. ಅಮೆರಿಕಾ ಬಹಳ ದೂರವೇನಿಲ್ಲ. ಬೇಗನೇ ರಾಜ್ಯಕ್ಕೆ ಬಂದು ರಿವರ್ಸ್ ಆಪರೇಷನ್ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಲಿ ಎಂದರು. 
ಶಾಸಕ ಮಾಧುಸ್ವಾಮಿ ಮಾತನಾಡಿ, ಮೈತ್ರಿ ಸರ್ಕಾರದ ತೆಪ್ಪದಲ್ಲಿ ಮಂಗಗಳು ಕುಳಿತಿದ್ದು,  ಮಂಗಗಳು ಆಕಡೆ, ಈ ಕಡೆ ಜಿಗಿದಾಕ್ಷಣ ತೆಪ್ಪ ಮುಳುಗಿ ಹೋಗುತ್ತದೆ ಎಂದು ವ್ಯಂಗ್ಯವಾಗಿ ಟೀಕಿಸಿದರು.
ಜೆಡಿಎಸ್‍-ಕಾಂಗ್ರೆಸ್‍ನಿಂದ ಬಿಜೆಪಿ ಶಾಸಕರ ರಿವರ್ಸ್ ಆಪರೇಷನ್ ನಡೆಸಲಾಗುತ್ತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಶಾಸಕರು ಪಕ್ಷ ಬಿಡುವುದಿಲ್ಲ. ಬಿಜೆಪಿಯ ಶಾಸಕರು ಕಾಂಗ್ರೆಸ್-ಜೆಡಿಎಸ್ ಸೇರುತ್ತಾರೆ ಎನ್ನುವುದೆಲ್ಲ ಸುಳ್ಳು. ಪಶ್ಚಿಮ ಬಂಗಾಳದ ಶಾಸಕರುಗಳೇ ಬಿಜೆಪಿ ಕಡೆ ವಾಲಿದ್ದಾರೆ ಎಂದ ಮೇಲೆ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ರಿವರ್ಸ್ ಆಪರೇಷನ್ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು. 

Related Stories

No stories found.

Advertisement

X
Kannada Prabha
www.kannadaprabha.com