ಸ್ಪೀಕರ್ ಕಚೇರಿ ಪೋಸ್ಟ್ ಮ್ಯಾನ್ ಕಚೇರಿಯಲ್ಲ: ರಮೇಶ್ ಜಾರಕಿಹೊಳಿಗೆ ರಮೇಶ್ ಕುಮಾರ್ ತರಾಟೆ

ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆ ತೀವ್ರವಾಗಿರುವಂತೆಯೇ ಕಾಂಗ್ರೆಸ್ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ವಿರುದ್ದ ಸ್ಪೀಕರ್ ರಮೇಶ್ ಕುಮಾರ್ ತೀವ್ರ ಕಿಡಿಕಾರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆ ತೀವ್ರವಾಗಿರುವಂತೆಯೇ ಕಾಂಗ್ರೆಸ್ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ವಿರುದ್ದ ಸ್ಪೀಕರ್ ರಮೇಶ್ ಕುಮಾರ್ ತೀವ್ರ ಕಿಡಿಕಾರಿದ್ದಾರೆ.
ರಮೇಶ್ ಜಾರಕಿಹೊಳಿ ರಾಜಿನಾಮೆ ಪ್ರಹಸನ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ರಮೇಶ್ ಕುಮಾರ್ ಅವರು, 'ಸಂವಿಧಾನದಲ್ಲಿ ಪರಮೋಚ್ಛ ಸ್ಥಾನ ಹೊಂದಿರುವ ಸ್ಪೀಕರ್ ಕಚೇರಿಯನ್ನು ರಾಜಕೀಯ ಉದ್ದೇಶಕ್ಕಾಗಿ ಹಗುರವಾಗಿ ಪರಿಗಣಿಸಬಾರದು. ಸ್ಪೀಕರ್ ಕಚೇರಿ ಪೋಸ್ಟ್ ಮ್ಯಾನ್ ಕಚೇರಿಯಲ್ಲ" ಎಂದು ಹೇಳಿದ್ದಾರೆ.
ಅರಭಾವಿ ಶಾಸಕ ರಮೇಶ್ ಜಾರಕಿ ಹೊಳಿ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಕಚೇರಿಗೆ ಫ್ಯಾಕ್ಸ್ ಮಾಡಿರುವುದಾಗಿ ನೀಡಿರುವ ಹೇಳಿಕೆಗೆ ಕೆಂಡಮಂಡಲವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜೀನಾಮೆ ಪತ್ರವನ್ನು ಖುದ್ದಾಗಿ ಬಂದು ನೀಡಬೇಕು. ಅದನ್ನು ಬಿಟ್ಟು ರಾಜೀನಾಮೆ ಫ್ಯಾಕ್ಸ್ ಮಾಡಿರುವುದಾಗಿ ನೀಡಿರುವ ಹೇಳಿಕೆ ಸರಿಯಲ್ಲ. ರಮೇಶ್ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆ ತಮಗೆ ತಲುಪಿಲ್ಲ. ಹೀಗಿರುವಾಗ ಅವರು ರಾಜೀನಾಮೆಯನ್ನು ಫ್ಯಾಕ್ಸ್ ಮಾಡಿರುವುದಾಗಿ ಮಾಧ್ಯಮಗಳ ಮುಂದೆ ಹೇಗೆ ಹೇಳಲು ಸಾಧ್ಯ. ತಾವು ವಿಧಾನಸಭೆಯ ಸಭಾಧ್ಯಕ್ಷರೇ ಹೊರತು, ಯಾರದೋ ಸೇವಕನಲ್ಲ. ಯಾರ ದೊಡ್ಡಸ್ಥಿಕೆಯೂ ನಮ್ಮ ಮುಂದೆ ನಡೆಯುವುದಿಲ್ಲ. ಇಷ್ಟಕ್ಕೂ ತಾವು ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ..." ಎಂದು ಕೋಪೋದ್ರಿಕ್ತರಾಗಿ ನುಡಿದರು.
ಅಂತೆಯೇ "ಸಂವಿಧಾನಕ್ಕಷ್ಟೇ ತಲೆ ಬಾಗುತ್ತೇನೆ. ಸಂವಿಧಾನದ ಆಶಯಗಳಿಗೆ ಗೌರವ ನೀಡುತ್ತೇನೆ. ಜನಪ್ರತಿನಿಧಿಗಳಾದವರು ಗೌರವದಿಂದ ನಡೆದುಕೊಳ್ಳಬೇಕು. ಸ್ಪೀಕರ್ ಹುದ್ದೆಯ ಬಗ್ಗೆ ತಮಗೆ ಇಷ್ಟ ಬಂದಂತೆ ಹೇಳಿಕೆ ನೀಡುವುದಾಗಲೀ, ಲಘುವಾಗಿ ಪರಿಗಣಿಸುವುದಾಗಲೀ ಮಾಡಿದರೆ ಅದನ್ನು ಸಹಿಸುವುದಿಲ್ಲ ಎಂದು ನೇರವಾಗಿ ಎಚ್ಚರಿಕೆ ನೀಡಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಇದೂವರೆಗೂ ಆನಂದ್ ಸಿಂಗ್ ಅವರ ರಾಜೀನಾಮೆ ಮಾತ್ರ ಸಲ್ಲಿಕೆಯಾಗಿದ್ದು, ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಬಂದಿಲ್ಲ. ಸೋಮವಾರ ಬೆಳಗ್ಗೆ 5 ಗಂಟೆಗೆ ತಮ್ಮ ಖಾಸಗಿ ನಿವಾಸಕ್ಕೆ ಬಂದಿದ್ದ ಆನಂದ್ ಸಿಂಗ್ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದು ಅದನ್ನು ನಿಯಮಾವಳಿಗಳ ಪ್ರಕಾರ ಅಂಗೀಕರಿಸಬೇಕಾಗುತ್ತದೆ. ಅಗತ್ಯಬಿದ್ದಲ್ಲಿ ಆನಂದಸಿಂಗ್ ಅವರನ್ನು ಮತ್ತೊಮ್ಮೆ ಕರೆಸಿಕೊಂಡು ರಾಜೀನಾಮೆಯನ್ನು ಖಾತ್ರಿ ಪಡಿಸಿಕೊಳ್ಳುತ್ತೇನೆ ಎಂದರು.
ಶಾಸಕರನ್ನು ಆಯ್ಕೆ ಮಾಡಿದ ಸಾರ್ವಜನಿಕರ ಆಕ್ಷೇಪಣೆಗಳಿದ್ದರೆ ಅದನ್ನೂ ಸಹ ಕೇಳುತ್ತೇವೆ‌. ಉಮೇಶ್ ಜಾದವ್ ಪ್ರಕರಣದಲ್ಲಿ ಆದಂತೆ ಇಲ್ಲಿಯೂ ಸಹ ಸಾರ್ವಜನಿಕ ಸಂಘಸಂಸ್ಥೆಗಳ ಆಕ್ಷೇಪಣೆಗಳಿದ್ದರೆ ವಿಚಾರಣೆ ಮಾಡಲೇಬೇಕಾಗುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com