ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ: ತಾತನ ಹಾದಿಯಲ್ಲೇ ನಡೆಯುವೆ; ನಿಖಿಲ್

ಪಕ್ಷದ ನಾಯಕರು ಚಿಕ್ಕ ವಯಸ್ಸಿನಲ್ಲಿ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ...
ಬೆಂಗಳೂರು: ಪಕ್ಷದ ನಾಯಕರು ಚಿಕ್ಕ ವಯಸ್ಸಿನಲ್ಲಿ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ದೇವೇಗೌಡರು ಇಳಿ ವಯಸ್ಸಿನಲ್ಲಿಯೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ನಾನು ಪಕ್ಷ ಕಟ್ಟಲು ಅವರೇ ಸ್ಪೂರ್ತಿ' ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್, ಪಕ್ಷವನ್ನು ಮುಂದಕ್ಕೆ ಕೊಂಡೊಯ್ಯಲು ಸಮರ್ಥನಿದ್ದೇನೆ ಎಂಬ ಭಾವನೆಯೊಂದಿಗೆ ಯುವ ಘಟಕದ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಆದರೆ ಇಂದಿಗೂ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ. ನನಗೆ ಈ ಸ್ಥಾನಮಾನ ಮುಖ್ಯವಾಗುವುದಿಲ್ಲ. ಮಧು ಬಂಗಾರಪ್ಪ ಅವರು ಹಲವು ವರ್ಷದಿಂದ ಈ ಸ್ಥಾನವನ್ನು ಸಂಪೂರ್ಣವಾಗಿ ತುಂಬಿದ್ದಾರೆ. ಅವರು ಮಾಡಿದ ಒಳ್ಳೆ ಕೆಲಸ ಕಾರ್ಯಗಳನ್ನು ಉಳಿಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮಂಡ್ಯ ಚುನಾವಣಾ ಫಲಿತಾಂಶ ಬಂದ ಬಳಿಕ ಪತ್ರಿಕಾಗೋಷ್ಠಿ ಮಾಡಿರಲಿಲ್ಲ. ನನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದೆ. ನನ್ನ ಎಲ್ಲ ಮತದಾರ ಬಂಧುಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಐದೂ ಮುಕ್ಕಾಲು ಲಕ್ಷ ಜನರು ನಿಖಿಲ್ ಕುಮಾರಸ್ವಾಮಿ ಅಥವಾ ಜನತಾದಳದ ಪರವಾಗಿ ಮತ ಹಾಕಿದ್ದೀರಿ. ಇದು ತಮಾಷೆಯ ಸಂಗತಿ ಅಲ್ಲ. ಐದೂ ಮುಕ್ಕಾಲು ಲಕ್ಷ ಜನ ನನ್ನ ಪರವಾಗಿದ್ದಾರೆ. ನನ್ನ ವಿರುದ್ಧ ಮತಹಾಕಿದವರ ಮನ ಗೆಲ್ಲಲು ಮುಂದಿನ ವರ್ಷಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಜೆಡಿಎಸ್ ಪಕ್ಷ ಉಳಿದಿರುವುದು ದೇವೇಗೌಡ ಸಾಹೇಬರ ಶ್ರಮದಿಂದ ಮಾತ್ರ. ಸಂಘಟನೆ ಮಾಡುವ ವಿಚಾರದಲ್ಲಿ ನಿರಂತರವಾಗಿ ಅವರ ದುಡಿಮೆಯನ್ನು ಮಾಡಿದ್ದರು. ಇಂದು ನಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಅದೇ ಹಾದಿಯಲ್ಲಿ ನಾನೂ ಹೆಜ್ಜೆ ಹಾಕಬೇಕು ಎಂಬ ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದರು.
ಇನ್ನೂ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, 'ಕುಟುಂಬ ರಾಜಕಾರಣ ಎಲ್ಲಿ ಇಲ್ಲ ಹೇಳಿ. ಎಲ್ಲಾ ಕಡೆ ಕುಟುಂಬ ರಾಜಕೀಯವಿದೆ. ಉತ್ತಮ ವಿಚಾರ ಇಟ್ಟುಕೊಂಡು ಜನರ ಪರವಾಗಿ ಕೆಲಸ ಮಾಡಬೇಕು. ಅಂತಹ ವ್ಯಕ್ತಿಗೆ ಎಲ್ಲರೂ ಬೆಂಬಲ ಕೊಡಬೇಕು, ಅವಕಾಶ ನೀಡಬೇಕು' ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com