ಕೈ ಶಾಸಕರ ರಾಜೀನಾಮೆ ಹಿಂದೆ ಸಿದ್ದು ಕೈವಾಡವಿದೆಯಾ?

ದಿಢೀರ್ ರಾಜಕೀಯ ಬೆಳವಣಿಯಲ್ಲಿ ಕಾಂಗ್ರೆಸ್ ಪಕ್ಷದ 8 ಹಾಗೂ ಜೆಡಿಎಸ್ ಪಕ್ಷದ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮೈತ್ರಿ ಸರ್ಕಾರ ಪತನದತ್ತ ಸಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ದಿಢೀರ್ ರಾಜಕೀಯ ಬೆಳವಣಿಯಲ್ಲಿ ಕಾಂಗ್ರೆಸ್  ಪಕ್ಷದ 8  ಹಾಗೂ ಜೆಡಿಎಸ್ ಪಕ್ಷದ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮೈತ್ರಿ ಸರ್ಕಾರ ಪತನದತ್ತ  ಸಾಗಿದೆ. 
ಕಾಂಗ್ರೆಸ್ ಪಕ್ಷದಿಂದ ಸತತ ಎಳು ಬಾರಿ ಗೆದಿದ್ದ ಬೆಂಗಳೂರಿನ ಬಿಟಿಎಂ ಲೇಔಟಿನ ರಾಮಲಿಂಗಾರೆಡ್ಡಿ, ಎಸ್ ಟಿ ಸೋಮಶೇಖರ್ ,ಮುನಿರತ್ನ, ಬಿ. ಸಿ. ಪಾಟೀಲ್, ರಮೇಶ್ ಜಾರಕಿ ಹೊಳಿ, ಮಸ್ಕಿ ಕ್ಷೇತ್ರದ ಶಾಸಕರ  ಪ್ರತಪಗೌಡ ಪಾಟೀಲ್ , ಮಹೇಶ್ ಕುಮಟಳ್ಳಿ,  ಶಿವರಾಮ್  ಹೆಬ್ಬಾರ್  ಹಾಗೂ ಜೆಡಿಎಸ್ ಪಕ್ಷದ ಎಚ್. ವಿಶ್ವನಾಥ್ , ಕೆ. ಗೋಪಾಲಯ್ಯ ,ನಾರಾಯಣಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮತ್ತೊಂದೆಡೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ರಾಜೀನಾಮೆ ನೀಡಿರುವ ಅತೃಪ್ತ ಶಾಸಕರೊಂದಿಗೆ ಡಿ. ಕೆ. ಶಿವಕುಮಾರ್ ಮಾತುಕತೆ ನಡೆಸುತ್ತಾರೆ. ರಾಜೀನಾಮೆ ಕೊಟ್ಟ ಮಾತ್ರಕ್ಕೆ ಸರ್ಕಾರ ಪತನವಾಗುವುದಿಲ್ಲ. ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ  ಕಾಂಗ್ರೆಸ್ ಪಕ್ಷದಿಂದ  ಗೆದ್ದು ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಲ್ಲಾ ಶಾಸಕರು ಸಿದ್ದರಾಮಯ್ಯನ ಬೆಂಬಲಿಗರು ಎಂಬುದು ಕುತೂಹಲಕರಿ  ವಿಷಯವಾಗಿದೆ.
ಇವರೆಲ್ಲರೂ ಸಿದ್ದರಾಮಯ್ಯ ಅವರ ಆಪ್ತ ಬಣದವರಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವರಿಗೆಲ್ಲಾ ಸಿದ್ದರಾಮಯ್ಯ ಅವರೇ ಟಿಕೆಟ್ ಕೊಡಿಸಿದ್ದಾರೆ. ಈ ಹಿಂದೆ  ಸರ್ಕಾರದ ಮೇಲೆ ಒತ್ತಡ ಹೇರುವ ಸಂದರ್ಭಗಳೆಲ್ಲಾ ಇವರೆಲ್ಲಾ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಕೈ ಶಾಸಕರಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ನಿರ್ಲಕ್ಷತೆ , ಜೆಡಿಎಸ್ ಪಕ್ಷದವರಿಗೆ ಹೆಚ್ಚಿನ ಆದ್ಯತೆ ಕೂಡಾ ರಾಜೀನಾಮೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ. 
ಏಳು ಬಾರಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಹಿಂದಿನ ಸರ್ಕಾರದಲ್ಲಿ ಸಾರಿಗೆ ಹಾಗೂ ಗೃಹ ಸಚಿವರಾಗಿ ಕೆಲಸ ಮಾಡಿದ್ದ ರಾಮಲಿಂಗಾರೆಡ್ಡಿ ಕೂಡಾ ಸಿದ್ದರಾಮಯ್ಯ ಆಪ್ತ ಬಣದವರೇ ಆಗಿದ್ದಾರೆ. ರಾಜ್ಯ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿರುವ  ರಾಮಲಿಂಗಾರೆಡ್ಡಿ, ಈಗ ರಾಜೀನಾಮೆ  ಸಲ್ಲಿಸಿದ್ದು, ಮನವೊಲಿಕೆಯ ಯತ್ನಗಳು ನಡೆಯುತ್ತಿವೆ. 
ಜೆಡಿಎಸ್ ಪಕ್ಷದ ಬಳಿಯಿರುವ ಮುಖ್ಯಮಂತ್ರಿ ಪಟ್ಟವನ್ನು ಕಸಿಯುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಈ ಆತೃಪ್ತ ಶಾಸಕರನ್ನು ಮುಂದಿಟ್ಟುಕೊಂಡು ಜೆಡಿಎಸ್  ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ. ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನಿಂದಾಗಿ ಹೈಕಮಾಂಡ್ ಮಟ್ಟದಲ್ಲೂ ವರ್ಚಸ್ಸು ಕಳೆದುಕೊಂಡಿರುವ ಸಿದ್ದರಾಮಯ್ಯ, ಸರ್ಕಾರದ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಮತ್ತೊಂದು ಆಟ ಆಡುತ್ತಿದ್ದಾರೆಯೇ ಎಂಬಂತಹ ಗುಮಾನಿಯೂ ವ್ಯಕ್ತವಾಗುತ್ತಿದೆ.
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಒಲಿದು ಬಂದರೆ  ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿ  ತಮ್ಮ ಕೆಲಸ ಕಾರ್ಯಗಳು ಸುಲಭವಾಗಿ ನಡೆಯಲಿವೆ ಎಂಬ ಮನೋಭಾವದೊಂದಿಗೆ ಕೈ ಶಾಸಕರು ರಾಜೀನಾಮೆ ಎಂಬ ಅಸ್ತ್ರ ಪ್ರಯೋಗಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
 ಒಟ್ಟಾರೇ, ಈಗ ರಾಜೀನಾಮೆ ಚೆಂಡು ಸ್ಪೀಕರ್ ಅಂಗಳದಲ್ಲಿದ್ದು, ಸ್ಪೀಕರ್ ರಾಜೀನಾಮೆ ಅಂಗೀಕರಿಸುವರೇ ? ಅಥವಾ ಅಂಗೀಕರಿಸದೆ  ಸರ್ಕಾರವನ್ನು ರಕ್ಷಿಸುವರೇ ಕಾದು ನೋಡಬೇಕಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com