ಐದಾರು ಶಾಸಕರೊಂದಿಗೆ ಸಂಪರ್ಕದಲ್ಲಿದ್ದೇನೆ- ಸಿದ್ದರಾಮಯ್ಯ

ರಾಜೀನಾಮೆ ನೀಡಿರುವ ಐದಾರು ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿರುವುದಾಗಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ರಾಜಕೀಯ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರು ಮುಂದಾಗಿದ್ದು, ಅತೃಪ್ತ ಶಾಸಕರ ಸಮಸ್ಯೆ ಆಲಿಸುವಂತೆ  ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿ. ಕೆ. ಹರಿಪ್ರಸಾದ್ ಅವರಿಗೆ ಜವಾಬ್ದಾರಿ ನೀಡಿದ್ದಾರೆ.
ಈ ಮಧ್ಯೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ರಾಜೀನಾಮೆ ನೀಡಿರುವ ಐದಾರು ಶಾಸಕರೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ. 
ಐದಾರು ಶಾಸಕರೊಂದಿಗೆ ಸಂಪರ್ಕದಲ್ಲಿದ್ದೇನೆ.ಆದರೆ, ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ. ಎಲ್ಲರೂ ಪಕ್ಷಕ್ಕೆ ನಿಷ್ಠರಾಗಿದ್ದಾರೆ. ನನ್ನ ಮೇಲೆ ನಿಷ್ಠರಾಗಿದ್ದಾರೆ ಎಂಬುದು ಪ್ರಶ್ನೆಯಲ್ಲ, ಎಲ್ಲರೂ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದಾರೆ ಎಂದು ಹೇಳಿದರು.
ರಾಜ್ಯ ರಾಜಕೀಯ ಬಿಕ್ಕಟ್ಟಿನ ಹಿಂದೆ ಬಿಜೆಪಿಯ ಪಿತೂರಿ ಅಡಗಿದೆ. ಇದು ಆಪರೇಷನ್ ಕಮಲ,  ಎಲ್ಲವೂ ಚೆನ್ನಾಗಿದೆ. ಭಯಪಡಬೇಕಾದ ಅಗತ್ಯವಿಲ್ಲ. ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಬೆಂಬಲಿಗರೇ  ಹೆಚ್ಚಿನ ಸಂಖ್ಯೆಯಲ್ಲಿ ರಾಜೀನಾಮೆ ನೀಡಿದ್ದು, ಅವರ ಕುಮ್ಮಕ್ಕಿನಿಂದಲೇ  ರಾಜ್ಯ ರಾಜಕೀಯದಲ್ಲಿ ಬಿಕ್ಕಟ್ಟು ಎದುರಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು, ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆ.
 ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿ ಎಂಬ ಉದ್ದೇಶದಿಂದ ಅವರ ಬೆಂಬಲಿಗರು ಈ ರೀತಿಯ ನಾಟಕವಾಡುತ್ತಿದ್ದಾರೆ ಎಂಬುದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com