ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದಿಂದ ವಿಧಾನಸಭಾಧ್ಯಕ್ಷರ ಕಚೇರಿ ದುರುಪಯೋಗ: ಬಿಜೆಪಿ ಆರೋಪ

ಆಡಳಿತಾರೂಡ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರ ವಿಧಾನಸಭಾಧ್ಯಕ್ಷರ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ...
ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ಸದಸ್ಯರ ಪ್ರತಿಭಟನೆ
ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ಸದಸ್ಯರ ಪ್ರತಿಭಟನೆ

ಬೆಂಗಳೂರು: ಆಡಳಿತಾರೂಡ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರ ವಿಧಾನಸಭಾಧ್ಯಕ್ಷರ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಶಾಸಕರು  ಬುಧವಾರ ವಿಧಾನಸೌಧ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆ ಪೀಠದ ಬಳಿ ಧರಣಿ ನಡೆಸಿದರು.


ಸರ್ಕಾರ ಸ್ಪೀಕರ್ ಕಾರ್ಯಾಲಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಪ್ರತಿಭಟಿಸಿ ಮಾಜಿ ಉಪ ಮುಖ್ಯಮಂತ್ರಿಗಳಾದ ಆರ್. ಆಶೋಕ್ ಹಾಗೂ ಕೆ.ಎಸ್. ಈಶ್ವರಪ್ಪ ಹಾಗೂ ನೂರಕ್ಕೂ ಹೆಚ್ಚು ಶಾಸಕರು, ವಿಧಾನ ಪರಿಷತ್ ಸದಸ್ಯರು ಧರಣಿ ಆರಂಭಿಸಿದ್ದಾರೆ.
ರಾಜೀನಾಮೆ ನೀಡಿರುವ ಬಂಡುಕೋರ ಶಾಸಕರನ್ನು ಸರ್ಕಾರ ಬೆದರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಶಾಸಕರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಘೋಷಣೆ ಕೂಗಿದರು.

ಇದಕ್ಕೂ ಮುನ್ನ ಮಾತನಾಡಿದ ಬಿಎಸ್ ಯಡಿಯೂರಪ್ಪ, ಪಕ್ಷದ ನಿಯೋಗ ರಾಜ್ಯಪಾಲ ವಜುಬಾಯಿ ವಾಲಾ ಅವರನ್ನು ಭೇಟಿ ಮಾಡಿ ಬಂಡುಕೋರ ಶಾಸಕರ ಮೇಲೆ ಕಾಂಗ್ರೆಸ್ ನಾಯಕರು ಒಡ್ಡುತ್ತಿರುವ ಬೆದರಿಕೆ ಮತ್ತಿತತರ ಒತ್ತಡಗಳ ಕುರಿತು ದೂರು ಸಲ್ಲಿಸುವುದಾಗಿ ಹೇಳಿದರು.

ಅತೃಪ್ತ ಶಾಸಕರು ನೀಡಿರುವ ಕ್ರಮ ಬದ್ದ ರಾಜೀನಾಮೆಯನ್ನು ತಕ್ಷಣವೇ ಒಪ್ಪಿಕೊಳ್ಳುವುದನ್ನು ಬಿಟ್ಟು ಸ್ಪೀಕರ್ ರಮೇಶ್ ಕುಮಾರ್ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಕಾನೂನು ಬದ್ದವಾಗಿರುವ ರಾಜೀನಾಮೆಯನ್ನು ತಕ್ಷಣ ಒಪ್ಪಿಕೊಳ್ಳಬೇಕು. ಏಕೆ ಸ್ಪೀಕರ್ ರಮೇಶ್ ಕುಮಾರ ವಿಳಂಬ ಮಾಡುತ್ತಿದ್ದಾರೆ ಗೊತ್ತಿಲ್ಲ, ಸರ್ವಾನುಮತದಿಂದ ಆಯ್ಕೆಗೊಂಡ ಸ್ಪೀಕರ್ ಈ ರೀತಿ ಏಕೆ ಮಾಡುತ್ತಿದ್ದಾರೋ ತಿಳಿದಿಲ್ಲ. ರಾಜೀನಾಮೆ ಪತ್ರ ಕ್ರಮಬದ್ದವಾಗಿಲ್ಲದವರು ಬಂದು ಮತ್ತೊಮ್ಮೆ ರಾಜೀನಾಮೆ ಪತ್ರ ಕೊಡುತ್ತಾರೆ ಕ್ರಮಬದ್ದವಾಗಿ ಇರುವ ರಾಜೀನಾಮೆ ಅಂಗೀಕಾರಕ್ಕೆ ಏನು ಸಮಸ್ಯೆ ? ಎಂದು ಸ್ಪೀಕರ್ ನಡೆಯನ್ನು ಯಡಿಯೂರಪ್ಪ ಪ್ರಶ್ನಿಸಿದರು.

ಕೆಲವು ಸಚಿವರ ಜೊತೆ ಅಡ್ವೋಕೇಟ್ ಜನರಲ್ ರನ್ನು ಸ್ಪೀಕರ್ ಭೇಟಿ ಮಾಡಿರೋ ವಿಚಾರ ಅವರನ್ನೇ ಕೇಳಬೇಕು ಆದರೆ ಸ್ಪೀಕರ್ ಕಚೇರಿಯಲ್ಲಿ ಡಿ ಕೆ ಶಿವಕುಮಾರ್ ರಾಜೀನಾಮೆ ಪತ್ರ ಹರಿದ ವಿಚಾರದ ಬಗ್ಗೆ ಸ್ಪೀಕರ್ ಏನು ಮಾತಾಡುತ್ತಿಲ್ಲ.ಸ್ಪೀಕರ್ ಕಚೇರಿಯಲ್ಲಿ ಡಿಕೆ ಶಿವಕುಮಾರ್ ರಾಜೀನಾಮೆ ಪತ್ರ ಹರಿದಿರುವ ಬಗ್ಗೆ ಸ್ಪೀಕರ್ ಮಾತನಾಡಬೇಕಿತ್ತು.ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎನ್ನುವುದು ಗೊತ್ತಾಗ್ತಿಲ್ಲ ಎಂದರು. 

ಈ ನಡುವೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರಸ್ – ಜೆಡಿಎಸ್ ಶಾಸಕರನ್ನು ಮುಂಬೈ ಹೋಟೆಲ್ ನಲ್ಲಿ ಇರಿಸಿ, ಕಾಂಗ್ರೆಸ್ ಶಾಸಕರ ಪಕ್ಷಾಂತರಕ್ಕೆ ಬಿಜೆಪಿ ಪ್ರಚೋದನೆ ನೀಡುತ್ತಿದ್ದು, ಇದರಲ್ಲಿ ಆ ಪಕ್ಷದ ಎಲ್ಲ ನಾಯಕರ ನೇರ ಕೈವಾಡ ಇದೆ ಎಂದು ಆರೋಪಿಸಿದರು.

ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರ ಬಹುಮತ ಹೊಂದಿದೆ. ಶುಕ್ರವಾರದಿಂದ ವಿಧಾನಮಂಡಲ ಅಧಿವೇಶನ ಆರಂಭಗೊಳ್ಳಲಿದೆ. ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿಲುವಳಿ ಮಂಡಿಸಲು ವಿಫಲವಾದರೆ,ಸರ್ಕಾರವೇ ವಿಶ್ವಾಸ ಮತ ಯಾಚಿಸಲಿದೆ ಎಂದರು
ದೇಶದಲ್ಲಿ ಏಕ ಪಕ್ಷ ಆಡಳಿತವನ್ನು ಬಿಜೆಪಿ ಬಯಸುತ್ತಿದೆ. ಪ್ರಧಾನಿ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ರಾಜ್ಯದ ಮೈತ್ರಿ ಸರ್ಕಾರ ಸೇರಿದಂತೆ ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಇದೇ ಕಾರಣಕ್ಕೆ ಉರುಳಿಸಲು ಕೇಸರಿ ಪಕ್ಷ ಯತ್ನಿಸುತ್ತಿದೆ ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com