ಮೈತ್ರಿ ಸರ್ಕಾರದ ಉಳಿವಿಗಾಗಿ ವಿಶ್ವಾಸಮತ ಯಾಚನೆಗೂ ಸಿದ್ದ: ಕೃಷ್ಣಭೈರೇಗೌಡ

ರಾಜ್ಯದ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ತೀರ್ಮಾನಿಸಿರುವ ದೋಸ್ತಿ ನಾಯಕರು, ಅಗತ್ಯಬಿದ್ದರೆ ವಿಶ್ವಾಸಮತ ಯಾಚಿಸಲು ತೀರ್ಮಾನಿಸಿದ್ದಾರೆ
ಕೃಷ್ಣಭೈರೇಗೌಡ
ಕೃಷ್ಣಭೈರೇಗೌಡ
ಬೆಂಗಳೂರು: ರಾಜ್ಯದ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ತೀರ್ಮಾನಿಸಿರುವ ದೋಸ್ತಿ ನಾಯಕರು, ಅಗತ್ಯಬಿದ್ದರೆ ವಿಶ್ವಾಸಮತ ಯಾಚಿಸಲು ತೀರ್ಮಾನಿಸಿದ್ದಾರೆ
ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜಕೀಯ ವಿಚಾರದ ಬಗ್ಗೆ ಗಂಭೀರ ಚರ್ಚೆಯಾಗಿದ್ದು, ತರಾತುರಿ ಇದ್ದರೆ ಬಿಜೆಪಿಯವರು ಅವಿಶ್ವಾಸ ನಿರ್ಣಯ ಮಂಡಿಸಲಿ ಎನ್ನುವ ನಿಲುವಿಗೆ ಬಂದಿದ್ದಾರೆ. ಅಲ್ಲದೇ ತಮಗಿರುವ ಬಹುಮತ ಸಾಬೀತುಪಡಿಸಲು ಮೈತ್ರಿ ವಿಶ್ವಾಸ ಹೊಂದಿದ್ದಾರೆ.
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಕೃಷ್ಣಭೈರೇಗೌಡ, ರಾಜ್ಯದ ಮೈತ್ರಿ ಸರ್ಕಾರ ಸಂದಿಗ್ಧ ಪರಿಸ್ಥಿಯಲ್ಲಿರುವುದು ಸತ್ಯ. ರಾಜಕೀಯ ಬಿಕ್ಕಟ್ಟುಗಳನ್ನು ವ್ಯವಸ್ಥಿತವಾಗಿ ಬಗೆಹರಿಸುತ್ತೇವೆ. ಸರ್ಕಾರ ಪತನಗೊಳಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನವನ್ನು ವಿಫಲಗೊಳಿಸುತ್ತೇವೆ ಎಂದು ಹೇಳಿದರು.
ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಬಿಜೆಪಿ ಆರೋಪ ಮಾಡಿದೆ. ಅವರಿಗೆ ತರಾತುರಿ ಅಥವಾ ತುರ್ತು ಅಗತ್ಯವಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಲಿ ಎಂದು ಸವಾಲು ಹಾಕಿದ ಅವರು, ಹಾಗೊಂದು ವೇಳೆ ಬಿಜೆಪಿ ನಾಯಕರು ಅವಿಶ್ವಾಸ ನಿರ್ಣಯ ಮಂಡಿಸಿದ್ದೇ ಆದಲ್ಲಿ ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದರು.
ವಿಧಾನಮಂಡಲ ಅಧಿವೇಶನ ನಮ್ಮ ಕಣ್ಣ ಮುಂದೆಯೇ ನಡೆಯುತ್ತದೆ. ಅದಕ್ಕೆ ಮಾಧ್ಯಮ ಪ್ರತಿನಿಧಿಗಳಾದ ನೀವು ಸಹ ಸಾಕ್ಷಿಯಾಗುತ್ತೀರಿ. ಹಣಕಾಸು ಮಸೂದೆಗಳಿಗೆ ಅನುಮೋದನೆ ಸಿಗಲೇಬೇಕಾಗಿದೆ. ಅನಮೋದನೆ ಸಂದರ್ಭದಲ್ಲಿ ಪ್ರತಿಪಕ್ಷ ಮುಖಂಡರು ಬೇಕಿದ್ದರೆ ಹಣಕಾಸು ಮಸೂದೆಗಳನ್ನು ಮತಕ್ಕೆ ಹಾಕುವಂತೆ ಸಭಾಧ್ಯಕ್ಷರನ್ನು ಒತ್ತಾಯ ಮಾಡಬಹುದು. ಆಗ ಅನಿವಾರ್ಯವಾಗಿ ಮತ ಏಣಿಕೆ ಮಾಡಬೇಕಾಗುತ್ತದೆ. ಬಹುಮತ ದೊರೆಯದಿದ್ದರೆ ಸಹಜವಾಗಿಯೇ ಸರ್ಕಾರ ಪತನಗೊಳ್ಳುತ್ತದೆ. ಸರ್ಕಾರದ ಬಗ್ಗೆ ವಿಶ್ವಾಸವಿಲ್ಲ ಎನ್ನುವುದಾದರೆ ಅದನ್ನು ಸದನದಲ್ಲಿ ನಾವು ಸಾಬೀತುಪಡಿಸುತ್ತೇವೆ ಎಂದರು.
ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಆರು ಬಾರಿ ದಾಳಿ ನಡೆಸಿದೆ. ಇದು 7 ನೇ ದಾಳಿ. ಆದರೆ ಈ ಬಾರಿ ಹಿಂದಿಗಿಂತ ಹೆಚ್ಚು ತೀವ್ರವಾದ ದಾಳಿ ನಡೆಸಿದೆ. ಈ ಎಲ್ಲಾ ದಾಳಿಗಳನ್ನು ನಾವು ವ್ಯವಸ್ಥಿತವಾಗಿ ಎದುರಿಸುತ್ತೇವೆ ಎಂದರು.
ಸಂಪುಟ ಸಭೆಯಲ್ಲಿ ಸರ್ಕಾರಕ್ಕೆ ಎದುರಾಗಿರುವ ಸವಾಲನ್ನು ಒಗ್ಗಟ್ಟಾಗಿ ಎದುರಿಸುವ ಬಗ್ಗೆ ತೀರ್ಮಾನ ಮಾಡಿದ್ದು, ಸಂಘಟಾನಾತ್ಮಕ ಕ್ರಮಗಳ ಮೂಲಕ ಶಾಸಕರನ್ನು ಮನವೊಲಿಸಲು ನಿರ್ಧರಿಸಲಾಗಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಬಗ್ಗೆ ಚರ್ಚಿಸಿಲ್ಲ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com