ಸರ್ಕಾರ ಅವಿಶ್ವಾಸ ನಿರ್ಣಯ ಎದುರಿಸಲು ಸಿದ್ಧ: ಸಿಎಂ ಕುಮಾರಸ್ವಾಮಿ

16 ಶಾಸಕರ ರಾಜೀನಾಮೆಯೊಂದಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಈ ಕೂಡಲೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು...
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: 16 ಶಾಸಕರ ರಾಜೀನಾಮೆಯೊಂದಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಈ ಕೂಡಲೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಒತ್ತಾಯಿಸುತ್ತಿದೆ. ಆದರೆ ಸಿಎಂ ಕುಮಾರಸ್ವಾಮಿ ಅವರು ಮಾತ್ರ ತಾವು ಅವಿಶ್ವಾಸ ನಿರ್ಣಯ ಎದುರಿಸಲು ಸಿದ್ಧ ಎಂದು ಗುರುವಾರ ಹೇಳಿದ್ದಾರೆ.
ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ಹೀಗಾಗಿ ಸರ್ಕಾರ ಬಹುಮತ ಕಳೆದುಕೊಂಡಿಲ್ಲ. ಒಂದು ವೇಳೆ ಬಿಜೆಪಿ ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಅದನ್ನು ಎದುರಿಸಲು ಸಿದ್ಧ ಎಂದು ಸಿಎಂ ಹೇಳಿದ್ದಾರೆ.
ಇಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜಕೀಯ ವಿಚಾರದ ಬಗ್ಗೆ ಗಂಭೀರ ಚರ್ಚೆಯಾಗಿದ್ದು, ತರಾತುರಿ ಇದ್ದರೆ ಬಿಜೆಪಿಯವರು ಅವಿಶ್ವಾಸ ನಿರ್ಣಯ ಮಂಡಿಸಲಿ ಎನ್ನುವ ನಿಲುವಿಗೆ ಬಂದಿದ್ದಾರೆ. ಅಲ್ಲದೆ ಅಲ್ಲದೇ ತಮಗಿರುವ ಬಹುಮತ ಸಾಬೀತುಪಡಿಸುವ ಬಗ್ಗೆ ಸಿಎಂ ವಿಶ್ವಾಸ ಹೊಂದಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಕೃಷ್ಣಭೈರೇಗೌಡ, ರಾಜ್ಯದ ಮೈತ್ರಿ ಸರ್ಕಾರ ಸಂದಿಗ್ಧ ಪರಿಸ್ಥಿಯಲ್ಲಿರುವುದು ಸತ್ಯ. ರಾಜಕೀಯ ಬಿಕ್ಕಟ್ಟುಗಳನ್ನು ವ್ಯವಸ್ಥಿತವಾಗಿ ಬಗೆಹರಿಸುತ್ತೇವೆ. ಸರ್ಕಾರ ಪತನಗೊಳಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನವನ್ನು ವಿಫಲಗೊಳಿಸುತ್ತೇವೆ ಎಂದರು.
ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಬಿಜೆಪಿ ಆರೋಪ ಮಾಡಿದೆ. ಅವರಿಗೆ ತರಾತುರಿ ಅಥವಾ ತುರ್ತು ಅಗತ್ಯವಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಲಿ ಎಂದು ಸವಾಲು ಹಾಕಿದ ಅವರು, ಹಾಗೊಂದು ವೇಳೆ ಬಿಜೆಪಿ ನಾಯಕರು ಅವಿಶ್ವಾಸ ನಿರ್ಣಯ ಮಂಡಿಸಿದ್ದೇ ಆದಲ್ಲಿ ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದರು. 
ವಿಧಾನಮಂಡಲ ಅಧಿವೇಶನ ನಮ್ಮ ಕಣ್ಣ ಮುಂದೆಯೇ ನಡೆಯುತ್ತದೆ. ಅದಕ್ಕೆ ಮಾಧ್ಯಮ ಪ್ರತಿನಿಧಿಗಳಾದ ನೀವು ಸಹ ಸಾಕ್ಷಿಯಾಗುತ್ತೀರಿ. ಹಣಕಾಸು ಮಸೂದೆಗಳಿಗೆ ಅನುಮೋದನೆ ಸಿಗಲೇಬೇಕಾಗಿದೆ. ಅನಮೋದನೆ ಸಂದರ್ಭದಲ್ಲಿ ಪ್ರತಿಪಕ್ಷ ಮುಖಂಡರು ಬೇಕಿದ್ದರೆ ಹಣಕಾಸು ಮಸೂದೆಗಳನ್ನು ಮತಕ್ಕೆ ಹಾಕುವಂತೆ ಸಭಾಧ್ಯಕ್ಷರನ್ನು ಒತ್ತಾಯ ಮಾಡಬಹುದು. ಆಗ ಅನಿವಾರ್ಯವಾಗಿ ಮತ ಏಣಿಕೆ ಮಾಡಬೇಕಾಗುತ್ತದೆ. ಬಹುಮತ ದೊರೆಯದಿದ್ದರೆ ಸಹಜವಾಗಿಯೇ ಸರ್ಕಾರ ಪತನಗೊಳ್ಳುತ್ತದೆ. ಸರ್ಕಾರದ ಬಗ್ಗೆ ವಿಶ್ವಾಸವಿಲ್ಲ ಎನ್ನುವುದಾದರೆ ಅದನ್ನು ಸದನದಲ್ಲಿ ನಾವು ಸಾಬೀತುಪಡಿಸುತ್ತೇವೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com