ಎರಡ್ಮೂರು ದಿನಗಳಲ್ಲಿ ಸರ್ಕಾರ ಪತನದ ನಿರೀಕ್ಷೆ- ಯಡಿಯೂರಪ್ಪ

ಎರಡ್ಮೂರು ದಿನಗಳಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನಗೊಳ್ಳುವ ನಿರೀಕ್ಷೆಯಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಯಡಿಯೂರಪ್ಪ
ಯಡಿಯೂರಪ್ಪ
ಬೆಂಗಳೂರು: ಬಂಡಾಯ ಶಾಸಕರ ರಾಜೀನಾಮೆ ನಡುವೆಯೂ ಇಂದಿನಿಂದ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ಎರಡ್ಮೂರು ದಿನಗಳಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನಗೊಳ್ಳುವ ನಿರೀಕ್ಷೆಯಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
 ಮೈತ್ರಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ಬಿಜೆಪಿ ಚಿಂತಿಸಿಲ್ಲ. ಸುಪ್ರೀಂಕೋರ್ಟ್ ಆದೇಶದವರೆಗೂ ಕಾಯುತ್ತೇವೆ. ಗಣ್ಯರಿಗೆ ಶ್ರದ್ದಾಂಜಲಿ ಸಲ್ಲಿಸಿದ ನಂತರ ಅಧಿವೇಶನ ಸುಗಮವಾಗಿ ನಡೆಯುವ ಸಾಧ್ಯತೆ ಇಲ್ಲ. ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಸರ್ಕಾರ ಅಲ್ಪ ಮತಕ್ಕೆ ಕುಸಿದಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ರಾಜೀನಾಮೆಗೆ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
150 ಸದಸ್ಯ ಬಲದ ಬಿಜೆಪಿಗೆ ಇಬ್ಬರು ಪಕ್ಷೇತರ ಶಾಸಕರು ಬೆಂಬಲ ನೀಡಿರುವುದರಿಂದ ಇದೀಗ 107 ಕ್ಕೆ ತಲುಪಿದೆ. ಆದಾಗ್ಯೂ, ಈಗಲೂ ಸರ್ಕಾರ ರಚನೆಗೆ ಬಿಜೆಪಿಗೆ ಅವಕಾಶ ನೀಡುತ್ತಿಲ್ಲ. ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್ ಗೆ ನಿರ್ದೇಶಿಸುವಂತೆ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಸುಪ್ರೀಂಕೋರ್ಟ್ ಆದೇಶ ಬಾರದೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ. ಆದಾಗ್ಯೂ ಸರ್ಕಾರ ಹೆಚ್ಚಿನ ದಿನ ಉಳಿಯಲಾರದು, ಕೆಲ ದಿನಗಳಲ್ಲಿಯೇ ಪತನಗೊಳ್ಳಲಿದೆ ಎಂದು ಭವಿಷ್ಯ ಹೇಳಿದರು.
ರಾಜ್ಯದಲ್ಲಿ ಗೂಂಡಾಗಿರಿ ಹೆಚ್ಚಾಗಿದೆ. ಶಾಸಕ ಸುಧಾಕರ್  ಕಾಲರ್ ಹಿಡಿದು ಹೇಗೆಲ್ಲಾ ಎಳೆದಾಡಲಾಯಿತು ಎಂಬುದನ್ನು ಇಡೀ ರಾಜ್ಯದ ಜನತೆ ವೀಕ್ಷಿಸಿದ್ದಾರೆ. ಈ ಸಂಬಂಧ ದೆಹಲಿಗೆ ಭೇಟಿ ನೀಡಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರಮೋದಿ ಜೊತೆ ಮಾತುಕತೆ ನಡೆಸಲಾಗುವುದು ಎಂದು ಯಡಿಯೂರಪ್ಪ  ತಿಳಿಸಿದರು.
ಪ್ರಸ್ತುತ ರಾಜಕೀಯ ಬೆಳವಣಿಗೆಯನ್ನು ಧೀರ್ಘಾವಾಗಿ ಎಳೆದುಕೊಂಡು ಹೋಗಲು ಬಿಜೆಪಿ ಬಯಸುತ್ತಿಲ್ಲ ಎಂಬುದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಮುಂದಿನ ವಿದ್ಯಮಾನಗಳು ತೀವ್ರ ಕುತೂಹಲ ಹುಟ್ಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com