ಶಾಸಕರ ಆರೋಪದಲ್ಲಿ ಹುರುಳಿಲ್ಲ: ಸುಪ್ರೀಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದ ಸ್ಪೀಕರ್

ರಾಜೀನಾಮೆ ನೀಡಿದ ಶಾಸಕರಿಗೆ ನಮ್ಮ ಕಚೇರಿಯಿಂದ ಸ್ವೀಕೃತಿ ಪತ್ರವನ್ನು ನೀಡಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸುಪ್ರೀಂಕೋರ್ಟ್ ಗೆ ತಿಳಿಸಿದ್ದಾರೆ
ಸಾಂದರ್ಭಿಕ ಚಿತ್ರಗಳು
ಸಾಂದರ್ಭಿಕ ಚಿತ್ರಗಳು
ಬೆಂಗಳೂರು: ಅತೃಪ್ತ ಶಾಸಕರು ದುರುದ್ದೇಶದಿಂದ ತಮ್ಮ ವಿರುದ್ಧ ದೂರು ನೀಡಿದ್ದು, ಅದರಲ್ಲಿ ಯಾವುದೇ ಹುರುಳಿಲ್ಲ. ಜುಲೈ 6 ರಂದು ಮಾಹಿತಿ ನೀಡದೆ ಕಚೇರಿಗೆ ಬಂದು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಶಾಸಕರಿಗೆ ನಮ್ಮ ಕಚೇರಿಯಿಂದ ಸ್ವೀಕೃತಿ ಪತ್ರವನ್ನು ನೀಡಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸುಪ್ರೀಂಕೋರ್ಟ್ ಗೆ  ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಗೆ 18 ಪುಟಗಳ ಮತ್ತೊಂದು ಪ್ರಮಾಣ ಪತ್ರ ಸಲ್ಲಿಸಿರುವ ರಮೇಶ್ ಕುಮಾರ್, ರಾಜೀನಾಮೆ ಸಲ್ಲಿಸಿದ 8 ಮಂದಿ  ಶಾಸಕರ ವಿರುದ್ಧವೂ ಅನರ್ಹತೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.
ಜುಲೈ 6 ರಂದು ನೀಡಿದ 13 ರಾಜೀನಾಮೆ ಪತ್ರಗಳನ್ನು ಪರಿಶೀಲಿಸಲಾಗಿದೆ. ಅವುಗಳಲ್ಲಿ 5 ರಾಜೀನಾಮೆಗಳು ಕ್ರಮಬದ್ಧವಾಗಿದ್ದು, ಉಳಿದ 8 ರಾಜೀನಾಮೆಗಳು ಕ್ರಮಬದ್ಧವಾಗಿಲ್ಲ. ಈ ಬೆಳವಣಿಗೆಯನ್ನು ರಾಜ್ಯಪಾಲರ ಗಮನಕ್ಕೂ ತರಲಾಗಿದೆ. ಜುಲೈ 10 ರಂದು ಮತ್ತೆ 11 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ.ಇಡೀ ಪ್ರಕ್ರಿಯೆಯ ವಿಡಿಯೋ ದಾಖಲೆಗಳನ್ನು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್  ಜನರಲ್ ಅವರಿಗೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜುಲೈ 10 ರಂದು ಈ ಶಾಸಕರ ವಿರುದ್ಧ ಕಾಂಗ್ರೆಸ್ ಅನರ್ಹತೆ ಅರ್ಜಿ ಸಲ್ಲಿಸಿದೆ. ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಹಳ್ಳಿ ವಿರುದ್ಧ ಈ ಮೊದಲೇ ಅನರ್ಹತೆ ದೂರು ದಾಖಲಾಗಿತ್ತು. ಇದರ ಬಗ್ಗೆ ಈಗಾಗಲೇ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಲಾಗಿದೆ.
 ಈಗ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿರುವ 8 ಶಾಸಕರ ವಿರುದ್ಧವೂ ಅನರ್ಹತೆ ದೂರು ದಾಖಲಾಗಿದೆ. ಇದನ್ನೆಲ್ಲಾ ಪರಿಶೀಲನೆ ನಡೆಸಬೇಕಾಗಿರುವುದರಿಂದ ತಡವಾಗುತ್ತಿದೆ. ಶಾಸಕರು ವಾಸ್ತವಾಂಶ ಮುಚ್ಚಿಟ್ಟು ನ್ಯಾಯಾಲಯದ ದಾರಿ ತಪ್ಪಿಸುತ್ತಿದ್ದಾರೆ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ ಎನ್ನಲಾಗಿದೆ.
ಜುಲೈ 6 ರಂದು ರಾಜೀನಾಮೆ  ಸಲ್ಲಿಸಿದ 10 ಶಾಸಕರು , ಸ್ಪೀಕರ್ ರಾಜೀನಾಮೆ ಅಂಗೀಕರಿಸಲು ತಡ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದರು. 
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಜುಲೈ 10 ರಂದು ಶಾಸಕರು ಸ್ಪೀಕರ್ ಅವರನ್ನು ಖುದ್ದಾಗಿ ಭೇಟಿಯಾಗಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಬೇಕು ಮತ್ತು ಆ ರಾಜೀನಾಮೆಗಳ ಬಗ್ಗೆ ಅಂದೇ ಸ್ಪೀಕರ್  ತೀರ್ಮಾನಿಸಬೇಕೆಂದು ಸೂಚನೆ ನೀಡಿತ್ತು. ಆದರೆ, ರಾಜೀನಾಮೆಗಳನ್ನು ಅಧ್ಯಯನ ಮಾಡಲು ಸಮಯಾವಕಾಶದ ಅಗತ್ಯತೆ ಇದೆ ಎಂದು ಸ್ಪೀಕರ್ ಪರ ವಕೀಲರು ಜುಲೈ 11ರ ವಿಚಾರಣೆ ವೇಳೆ ತಿಳಿಸಿದ್ದರು.
ನ್ಯಾಯಾಲಯ ಶಾಸಕರ ರಾಜೀನಾಮೆಯಲ್ಲಿ ಅಂಗೀಕರಿಸುವುದು, ಅರ್ನಹತೆ ಮಾಡುವುದು ಸೇರಿದಂತೆ ಮುಂದಿನ ಪ್ರಕ್ರಿಯೆ ನಡೆಸದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com