ಅತೃಪ್ತ ಶಾಸಕರ ಅನರ್ಹತೆ ಕುರಿತು ಕಾಂಗ್ರೆಸ್ ಮುಖಂಡರ ನಡುವೆ ಬಿರುಕು

ಕಾಂಗ್ರೆಸ್ ಮತ್ತು ಜೆಡಿಎಸ್ ನ ಅತೃಪ್ತ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ 13 ತಿಂಗಳ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಉಳಿಸಲು ಶತಾಯಗತಾಯ...
ಕಾಂಗ್ರೆಸ್ ನಾಯಕರು
ಕಾಂಗ್ರೆಸ್ ನಾಯಕರು
ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ನ ಅತೃಪ್ತ ಶಾಸಕರ  ರಾಜೀನಾಮೆ ಹಿನ್ನೆಲೆಯಲ್ಲಿ 13 ತಿಂಗಳ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಉಳಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಅತೃಪ್ತ ಶಾಸಕರ ಅನರ್ಹತೆ ವಿಷಯವಾಗಿ ಇಬ್ಭಾಗವಾಗಿದ್ದಾರೆ.
ಪಕ್ಷದ  ಉನ್ನತ ಮೂಲಗಳಂತೆ, ಸರ್ಕಾರದಲ್ಲಿ ಅಸ್ಥಿರತೆ ಬಿಕ್ಕಟ್ಟನ್ನು ಸೃಷ್ಟಿಸಿದ ಹಾಗೂ ಜುಲೈ 18 ರಂದು ವಿಶ್ವಾಸ ಮತ ಕೋರಿಕೆಗೆ ಕಾರಣವಾದ ಶಾಸಕರಿಗೆ ಶಿಕ್ಷೆಯಾಗುವಂತೆ ಕಾಂಗ್ರೆಸ್ ಕೆಲ ಹಿರಿಯ ನಾಯಕರು ಇಚ್ಛಿಸಿದ್ದರೆ, ಕೆಲ ನಾಯಕರು ಪಕ್ಷಾಂತರ ನಿಷೇಧ ಕಾನೂನು ಜಾರಿಗೊಳಿಸುವ ಈ ಕ್ರಮವನ್ನು ವಿರೋಧಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ ಪರಮೇಶ್ವರ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು ಅತೃಪ್ತ ಶಾಸಕರ ಮನವೊಲಿಸುವ ಕೊನೆ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. ಅನರ್ಹಗೊಂಡರೆ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ ಮತ್ತು ಸರ್ಕಾರಿ ಹುದ್ದೆಗಳನ್ನು ಅಲಂಕರಿಸುವಂತಿಲ್ಲ ಎಂದು ಅತೃಪ್ತ ಶಾಸಕರಿಗೆ ಕಿವಿಮಾತು ಹೇಳುತ್ತಿದ್ದಾರೆ.
ಆದರೆ, ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಿಜ್ವಾನ್  ಅರ್ಷದ್ ಮತ್ತಿತರರು ಅತೃಪ್ತ ಶಾಸಕರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ವಾದಿಸುತ್ತಿದ್ದಾರೆ.
ತಮ್ಮ ರಾಜೀನಾಮೆ  ಸ್ವೀಕರಿಸುವಂತೆ ಅತೃಪ್ತ ಶಾಸಕರು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಒತ್ತಾಯಿಸುತ್ತಿದ್ದರೆ, ಕಾಂಗ್ರೆಸ್ ನ ಕೆಲ ನಾಯಕರು ಪಕ್ಷವನ್ನು ಹಾಳು ಮಾಡಲೆತ್ನಿಸಿರುವ  ಶಾಸಕರನ್ನು  ಅನರ್ಹಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಇಂತಹ ನಿರ್ಧಾರಗಳಿಂದ ಪಕ್ಷ ಮತ್ತಷ್ಟು ದುರ್ಬಲಗೊಳ್ಳಲು ಕಾರಣವಾಗಬಹುದು ಎಂಬ ಆತಂಕವನ್ನು ಮತ್ತೊಂದು ಗುಂಪು ವ್ಯಕ್ತಪಡಿಸುತ್ತಿದೆ.  
' ಕೆಲವೊಂದು ಸನ್ನಿವೇಶಗಳಲ್ಲಿ ಯಾವುದೋ ಕಾರಣಕ್ಕೆ ಕೆಲ ನಾಯಕರು ಪಕ್ಷ ತೊರೆದಿರಬಹುದು. ಆದರೆ ಮತ್ತೆ ಪಕ್ಷದ ತೆಕ್ಕೆಗೆ ಬಂದು ಪಕ್ಷವನ್ನು ಬಲಪಡಿಸಬಹುದು' ಎಂದು ಹಿರಿಯ ನಾಯಕರೊಬ್ಬರು ಯುಎನ್‌ಐಗೆ ತಿಳಿಸಿದ್ದಾರೆ. 
ಈ ಮಧ್ಯೆ, ತಮ್ಮ  ರಾಜೀನಾಮೆಯನ್ನು ಅಂಗೀಕರಿಸುವಂತೆ ಕರ್ನಾಟಕ ವಿಧಾನಸಭಾಧ್ಯಕ್ಷರಿಗೆ ಸೂಚಿಸುವಂತೆ ಕೋರಿ 15 ಅತೃಪ್ತ ಶಾಸಕರು ಸಲ್ಲಿಸಿದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ಸುಪ್ರೀಂಕೋರ್ಟ್, ತೀರ್ಪನ್ನು ಕಾಯ್ದಿರಿಸಿ, ನಾಳೆ ಬೆಳಿಗ್ಗೆ ಪ್ರಕಟಿಸುವುದಾಗಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com