ವಿಪ್ ಜಾರಿ ಬಗ್ಗೆ ಗೊಂದಲ: ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಕಾಂಗ್ರೆಸ್ ಚಿಂತನೆ

ಸುಪ್ರೀಂ ಕೋರ್ಟ್ ತೀರ್ಪಿನಿಂದ ವಿಪ್ ಜಾರಿ ಬಗ್ಗೆ ಎದ್ದಿರುವ ಗೊಂದಲಗಳ ಸ್ಪಷ್ಟೀಕರಣ ಬಯಸಿ ಮತ್ತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಕಾಂಗ್ರೆಸ್...
ಕಾಂಗ್ರೆಸ್ ನಾಯಕರು
ಕಾಂಗ್ರೆಸ್ ನಾಯಕರು
ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪಿನಿಂದ ವಿಪ್ ಜಾರಿ ಬಗ್ಗೆ ಎದ್ದಿರುವ ಗೊಂದಲಗಳ ಸ್ಪಷ್ಟೀಕರಣ ಬಯಸಿ ಮತ್ತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ನಗರದ ಪ್ರಕೃತಿ ರೆಸಾರ್ಟ್ ನಲ್ಲಿ ಸಭೆ ಸೇರಿದ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ, ಹಿರಿಯ ಮುಖಂಡರಾದ ಕೆ.ಸಿ ವೇಣುಗೋಪಾಲ್, ದಿನೇಶ್ ಗುಂಡೂರಾವ್, ಕೆ.ಜೆ. ಜಾರ್ಜ್, ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್ ಅವರನ್ನೊಳಗೊಂಡ ಸಭೆಯಲ್ಲಿ ಈ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ. ಈ ಕುರಿತು ಕಾನೂನು ತಜ್ಞರನ್ನು ಸಂಪರ್ಕಿಸಿ ಅಭಿಪ್ರಾಯ ಪಡೆದು ಕಾನೂನು ಹೋರಾಟ ನಡೆಸುವ ಬಗ್ಗೆ ಒಲವು ವ್ಯಕ್ತವಾಗಿದೆ ಎನ್ನಲಾಗಿದೆ.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರವನ್ನು ಪ್ರಸ್ತಾಪಿಸಿ, ಸುಪ್ರೀಂ ಕೋರ್ಟ್ ತೀರ್ಪು ಶಾಸಕಾಂಗ ನಾಯಕರು ಮಹತ್ವದ ವಿಷಯಗಳ ಮೇಲೆ ಚರ್ಚೆ ನಡೆಸುವಾಗ, ಜ್ವಲಂತ ಸಮಸ್ಯೆಗಳ ಬಗ್ಗೆ ನಿಲುವಳಿ ಸೂಚನೆ ಮಂಡಿಸಿದಾಗ ಹಾಗೂ ಬಹುಮತ ಸಾಬೀತುಪಡಿಸುವಂತಹ ಸಂದರ್ಭದಲ್ಲಿ ಸದನದಲ್ಲಿ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು. ಕಡ್ಡಾಯ ಹಾಜರಾತಿಗಾಗಿ ನೀಡುವ ವಿಪ್ ಗೆ ಕಾನೂನಿನಲ್ಲಿ ಯಾವುದೇ ಮಾನ್ಯತೆ ಇಲ್ಲವೆಂಬ ಅರ್ಥ ಬರುವ ರೀತಿಯಲ್ಲಿ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. ಹೀಗಾಗಿ ಸ್ಪಷ್ಟ ನಿರ್ದೇಶನ ಪಡೆಯಲು ಮತ್ತೊಮ್ಮೆ ವಿಪ್ ಮಾನ್ಯತೆ ಪ್ರಶ್ನಿಸಿ ಕಾನೂನು ಹೋರಾಟ ನಡೆಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಶಾಸಕರು ಸದನಕ್ಕೆ ಹಾಜರಾಗುವುದು ಕಡ್ಡಾಯವೆಂಬ ಉದ್ದೇಶಕ್ಕೆ ಸುಪ್ರೀಂ ಕೋರ್ಟ್ ತೀರ್ಮಾನ ತದ್ವಿರುದ್ಧವಾಗಿದೆ. ಮಧ್ಯಂತರ ತೀರ್ಪಿನಲ್ಲಿ ಕಾಂಗ್ರೆಸ್ ವಾದಕ್ಕೆ ಯಾವುದೇ ಮನ್ನಣೆ ನೀಡಿಲ್ಲ. ಆ ಬಗ್ಗೆ ಅಸ್ಪಷ್ಟ ನಿಲುವು ಪ್ರಕಟಿಸಲಾಗಿದೆ. ಪಕ್ಷದಿಂದ ಆಯ್ಕೆಯಾಗಿ ಬಂದ ಶಾಸಕರ ಮೇಲೆ ಪಕ್ಷದ ನಾಯಕರಿಗೆ ಅಧಿಕಾರವಿಲ್ಲ ಎಂಬ ಸಂದೇಶ ನೀಡಿದಂತಾಗಿದೆ. ಇಂದಿನ ತೀರ್ಪಿನನಿಂದ  ಶಾಸಕಾಂಗ ಮತ್ತು ನ್ಯಾಯಾಂಗದ ಮಧ್ಯೆ ತಾಕಲಾಟಕ್ಕೆ ಕಾರಣವಾಗಿದೆ. ಹೀಗಾಗಿ ವಿಪ್ ಬಗ್ಗೆ  ಪರಾಮರ್ಶಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಸ್ಪಷ್ಟೀಕರಣ ಅರ್ಜಿ ಸಲ್ಲಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ವಿಪ್ ಜಾರಿಯ ಅಧಿಕಾರವನ್ನು ರಾಜಕೀಯ ಪಕ್ಷಗಳು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಅನ್ವಯಿಸದೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಆಘಾತವಾಗಲಿದೆ. ಪಕ್ಷಾಂತರ ಮಾಡುವ ಶಾಸಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ತೀರ್ಪಿನಿಂದ ಉಂಟಾಗಿರುವ ಗೊಂದಲಕ್ಕೆ ಸ್ಪಷ್ಟೀಕರಣ ಪಡೆಯಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಇದೆ.
ಗುರುವಾರ ವಿಶ್ವಾಸಮತ ಯಾಚನೆ ಹಿನ್ನಲೆಯಲ್ಲಿ ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಸಿ ವೇಣುಗೋಪಾಲ್ ಸದನದಲ್ಲಿ ಏನೆಲ್ಲಾ ವಿಚಾರಗಳ ಬಗ್ಗೆ ಚರ್ಚಿಸಬೇಕು. ಶಾಸಕರ ಹಾಜರಿ ಮತ್ತಿತರ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ.
ಈ ಮಧ್ಯೆ, ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಇಬ್ಬರು ಶಾಸಕರಿಗೆ ಶೀತ ಜ್ವರ ಕಾಣಿಸಿಕೊಂಡಿದೆ. ಪಾವಗಡ ಶಾಸಕ ವೆಂಕಟರಮಣಯ್ಯ ಹಾಗೂ ಭದ್ರಾವತಿ ಶಾಸಕ ಸಂಗಮೇಶ್ ಗೆ ಜ್ವರ ಇದ್ದು, ವೈದ್ಯರು ರೆಸಾರ್ಟ್ ಗೆ ಆಗಮಿಸಿ ತಪಾಸಣೆ ನಡೆಸಿದ್ದಾರೆ ಎನ್ನಲಾಗಿದೆ.
ಶಾಸಕರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು, ಸಂಗಮೇಶ್ ಗೆ ಆರೋಗ್ಯ ಸುಧಾರಣೆ ಕಂಡು ಬಂದಿದೆ. ವೆಂಕಟರಮಣಯ್ಯ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com