ಈಗ ನಿಂಬೆಹಣ್ಣು ಬೇಕಿಲ್ಲ, ದೇವರ ಆಶೀರ್ವಾದವಿರುವವರೆಗೆ ಸರ್ಕಾರ ಇರುತ್ತದೆ: ರೇವಣ್ಣ

ನಿಂಬೆಹಣ್ಣು ಎಂದರೆ, ಹೆಚ್.ಡಿ.ರೇವಣ್ಣ, ರೇವಣ್ಣ ಎಂದರೆ ನಿಂಬೆಹಣ್ಣು ಎನ್ನುವ ಮಾತು ರಾಜ್ಯದಲ್ಲಿ ಜನಜನಿತವಾಗಿದೆ. ಸಭೆ ಸಮಾರಂಭಗಳಲ್ಲಿ...
ಎಚ್ ಡಿ ರೇವಣ್ಣ
ಎಚ್ ಡಿ ರೇವಣ್ಣ
ಬೆಂಗಳೂರು: ನಿಂಬೆಹಣ್ಣು ಎಂದರೆ, ಹೆಚ್.ಡಿ.ರೇವಣ್ಣ, ರೇವಣ್ಣ ಎಂದರೆ ನಿಂಬೆಹಣ್ಣು ಎನ್ನುವ ಮಾತು ರಾಜ್ಯದಲ್ಲಿ ಜನಜನಿತವಾಗಿದೆ. ಸಭೆ ಸಮಾರಂಭಗಳಲ್ಲಿ ಅಥವಾ ವಿಧಾನಸೌಧ ಪ್ರವೇಶಿಸಲೀ, ಇನ್ನು ರಾಜಕೀಯ ಚಟುವಟಿಕೆಗಳೇ ಇರಲಿ, ರೇವಣ್ಣ ತಮ್ಮ ಕೈಯಲ್ಲಿ, ಜೇಬಿನಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಓಡಾಡುವುದು ಸಹಜ.
ರೇವಣ್ಣ ಅವರ ನಿಂಬೆಹಣ್ಣು ವಿಚಾರ ಮಾಧ್ಯಮಗಳಲ್ಲಿ ಬಹುಚರ್ಚಿತ ವಿಷಯವೂ ಹೌದು. ಸಂಕಷ್ಟ ಬಂದಾಗಲೆಲ್ಲ ದೇವರಲ್ಲಿ ಮೊರೆಹೋಗಿ ನಿಂಬೆಹಣ್ಣನ್ನು ಮಂತ್ರಿಸಿಕೊಂಡು ಬರುವುದು ಅವರ ನಂಬಿಕೆ. ದೈವಭಕ್ತ ಎನ್ನುವ ಕಾರಣಕ್ಕೆ ನಿಂಬೆಹಣ್ಣನ್ನು ಸದಾ ಇಟ್ಟುಕೊಂಡು ಓಡಾಡುವ ರೇವಣ್ಣ ಹಲವು ಬಾರಿ ಹಾಸ್ಯ, ಟೀಕೆ, ವ್ಯಂಗ್ಯಕ್ಕೂ ಗುರಿಯಾಗುತ್ತಿದ್ದಾರೆ.
ಇದೀಗ ಮೈತ್ರಿ ಸರ್ಕಾರಕ್ಕೆ ಅಸ್ಥಿರತೆ ಎದುರಾಗಿದ್ದು, ರೇವಣ್ಣ ಅವರ ನಿಂಬೆಹಣ್ಣು ಸರ್ಕಾರ ಉಳಿಸಲು ಮೋಡಿ ಮಾಡಬಲ್ಲದೇ.. ! ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಆದರೆ ಇಂತಹ ಸಂದರ್ಭದಲ್ಲಿ ತಮಗೆ ನಿಂಬೆಹಣ್ಣು ಇಟ್ಟುಕೊಳ್ಳುವ ಅವಶ್ಯಕತೆಯೇ ಇಲ್ಲ ಎಂದು ಹೆಚ್.ಡಿ.ರೇವಣ್ಣ ಖುದ್ದು ಮಾಧ್ಯಮದವರಿಗೆ ಸ್ಪಷ್ಟಪಡಿಸಿದ್ದಾರೆ. ನಿಂಬೆಹಣ್ಣಿನ ಅವಶ್ಯಕತೆಯೂ ತಮಗಿಲ್ಲ. ಅದನ್ನು ಇಟ್ಟುಕೊಳ್ಳುವುದೂ ಇಲ್ಲ. ತಾಯಿ ಮಹಾಲಕ್ಷ್ಮೀಯ ಅನುಗ್ರಹವಿರುವುದರಿಂದ ನಿಂಬೆಹಣ್ಣು ಬೇಕಿಲ್ಲ. ದೇವರ ಆಶೀರ್ವಾದವಿರುವವರೆಗೂ ಸರ್ಕಾರ ಇರುತ್ತದೆ ಎಂದರು.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂದೆತಾಯಿಯ ಆಶೀರ್ವಾದ, ಮನೆದೇವರುಗಳಾದ ಈಶ್ವರ, ರಂಗನಾಥ ಸ್ವಾಮಿ ಕೃಪೆಯೇ ತಾವು ಇಷ್ಟರಮಟ್ಟಿಗೆ ಬೆಳೆಯಲು ಕಾರಣ ಎಂದರು.
ಶೃಂಗೇರಿ ಗುರುಗಳ ಆಶೀರ್ವಾದ ತಮ್ಮ ಕುಟುಂಬದ ಮೇಲೆ ಸದಾ ಇದೆ. ಶ್ರೀ ಮಠಕ್ಕೆ ಸರ್ಕಾರದ ಹಣದ ಅವಶ್ಯಕತೆಯಿಲ್ಲ. ಮಠದ ಭಕ್ತಾದಿಗಳ ಸಹಾಯವೇ ಮಠದ ಉದ್ಧಾರಕ್ಕೆ ಸಾಕು ಎಂದರು.
ತಮಗೆ ಹೊಲಗದ್ದೆಗಳಲ್ಲಿ ದುಡಿಯುವುದು ಗೊತ್ತು. ಆಲೂಗಡ್ಡೆ ಚೀಲಗಳನ್ನು ಹೊತ್ತುಕೊಂಡು ಬದುಕು ಸಾಗಿಸಿದ ತಮಗೆ ಜೀವನದ ಸರಳತೆಯೂ ಗೊತ್ತು. ಫೈವ್ ಸ್ಟಾರ್ ಹೊಟೇಲ್ ಆಗಲೀ, ಐಷಾರಾಮಿ ಬದುಕಾಗಲಿ ಬೇಕಿಲ್ಲ. ಒಂದು ತುತ್ತು ಅನ್ನ ತಿನ್ನುವುದಕ್ಕೆ ಅಧಿಕಾರವೇ ಬೇಕೆಂದಿಲ್ಲ ಎಂದು ರೇವಣ್ಣ ವೇದಾಂತದ ಮಾತುಗಳನ್ನಾಡಿದರು.
ಇದು ದೇವರು ಕೊಟ್ಟ ಸರ್ಕಾರ. ದೇವರ ಆಶೀರ್ವಾದವಿರುವವರೆಗೂ ಇರುತ್ತದೆ ಎಂದು ರೇವಣ್ಣ ಮಾರ್ಮಿಕವಾಗಿ ನುಡಿದರು.
ಮಹಾಲಕ್ಷ್ಮೀ ತಾಯಿಯ ಮೇಲೆ ಆಣೆ .ಮಹಾಲಕ್ಷ್ಮೀ ತಾಯಿ ಸನ್ನಿಧಿಯಲ್ಲಿ ತಾವು ಒಬ್ಬರನ್ನು ಈ ಹಿಂದೆ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದು, ಅವರೇ ಈಗ ನಮ್ಮ ಬಗ್ಗೆ ಮಾತನಾಡುವಂತಾಗಿದ್ದಾರೆ. ಆ ತಾಯಿಯೇ ಅವರನ್ನು ನೋಡಿಕೊಳ್ಳಲಿ. ಎಂದು ರಾಜ್ಯಸಭಾ ಸದಸ್ಯರ ಹೆಸರನ್ನು ಹೇಳದೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. 
ಕುಮಾರಸ್ವಾಮಿ ಹಾಗೂ ರೇವಣ್ಣ ಕಚ್ಚಾಡುತ್ತಾರೆ ಎಂದು ಯಾರಾದರೂ ಭಾವಿಸಿದಲ್ಲಿ ಅದು ಅವರ ಮೂರ್ಖತನ. ತಂದೆ ದೇವೇಗೌಡ ಬದುಕಿರುವವರೆಗೂ ಒಗ್ಗಟ್ಟಾಗಿಯೇ ಇರುತ್ತೇವೆ ಎಂದು ರೇವಣ್ಣ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com