ಕಾಂಗ್ರೆಸ್ ಜತೆ ಕೆಪಿಜೆಪಿ ವಿಲೀನ: ದಾಖಲೆ ಸಲ್ಲಿಸುವಂತೆ ಶಾಸಕ ಶಂಕರ್ ಗೆ ಸ್ಪೀಕರ್ ನೋಟೀಸ್

ಕಾಂಗ್ರೆಸ್ ನೊಂದಿಗೆ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ)ವನ್ನು ವಿಲೀನಗೊಳಿಸುವುದಾಗಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ...
ಆರ್ ಶಂಕರ್
ಆರ್ ಶಂಕರ್
ಬೆಂಗಳೂರು: ಕಾಂಗ್ರೆಸ್ ನೊಂದಿಗೆ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ)ವನ್ನು ವಿಲೀನಗೊಳಿಸುವುದಾಗಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಾವು ನೀಡಿರುವ ಪತ್ರದ ಬಗ್ಗೆ ಪಕ್ಷದ ಅಧಿಕೃತ ದಾಖಲೆಗಳನ್ನು ಸಲ್ಲಿಸಬೇಕೆಂದು ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕ ಆರ್.ಶಂಕರ್ ಅವರಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ಬುಧವಾರ ಕೆಪಿಜೆಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಗೌಡ ಹಾಗೂ ಗುರುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರ್.ಶಂಕರ್ ವಿರುದ್ಧ ಸ್ಪೀಕರ್ ಅವರಿಗೆ ದೂರು ನೀಡಿದ್ದರು. ದೂರನ್ನಾಧರಿಸಿ ಆರ್.ಶಂಕರ್ ಗೆ ನೋಟೀಸ್ ನೀಡಿರುವ ಸ್ಪೀಕರ್, ಜೂನ್ 16 ರಂದು ನಿಮ್ಮ ಕೈ ಬರಹದಲ್ಲಿ ಬರೆದಿರುವ ಪತ್ರದ ಪ್ರತಿ ನಮ್ಮ ಕೈ ಸೇರಿದೆ. ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಪಕ್ಷದ ಜೊತೆ ವಿಲೀನಗೊಳಿಸಲು ನಿರ್ಧರಿಸಿದ್ದಲ್ಲಿ ಅಂತಹ ವಿಲೀನ ನಿರ್ಣಯವನ್ನು ನಿಮ್ಮ ಪಕ್ಷದ ವತಿಯಿಂದ ನಮಗೆ ಸಲ್ಲಿಸಬೇಕೆಂದು ಸೂಚಿಸಿದ್ದಾರೆ.
ಸ್ಪೀಕರ್ ಅವರಿಗೆ ನೀಡಿರುವ ಆಂಗ್ಲ ಭಾಷೆಯ ಪತ್ರದಲ್ಲಿ ಅಂತಹ ಯಾವುದೇ ದಾಖಲೆಗಳು, ಮಾಹಿತಿ ಪತ್ರದಲ್ಲಿ ಉಲ್ಲೇಖಿಸಿಲ್ಲ. ಹೀಗಾಗಿ ತಾವು ಈ ಬಗ್ಗೆ ಸ್ಪಷ್ಟೀಕರಣ ನೀಡಬಯಸಿದರೆ ಅಗತ್ಯ ದಾಖಲೆಗಳನ್ನು ಸ್ಪೀಕರ್ ಕಚೇರಿಗೆ ಸಲ್ಲಿಸುವಂತೆ ತಿಳಿಸಿದ್ದಾರೆ.
2018ರಲ್ಲಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದಾಗಲೂ ಬಿಜೆಪಿಗೆ ಬೆಂಬಲಿಸಿರುವುದಾಗಿ ಶಂಕರ್ ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ದರು. ಬಳಿಕ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಯಾದಾಗ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆಯುವುದಾಗಿ ಭರವಸೆ ನೀಡಿ ಸಚಿವರಾದರು. ಆದರೆ ಸದಸ್ಯತ್ವ ಪಡೆಯಲು ಹಿಂದೇಟು ಹಾಕಿದ ಕಾರಣಕ್ಕಾಗಿ ಆರ್.ಶಂಕರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ಆದರೆ ಕಳೆದ ತಿಂಗಳು ಮತ್ತೊಮ್ಮೆ ಸಚಿವರಾಗುವ ಅವಕಾಶ ಸಿಕ್ಕಾಗ ಸಿದ್ದರಾಮಯ್ಯ ಅವರಿಗೆ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸುವುದಾಗಿ ಕೈ ಬರಹದಲ್ಲಿ ದೃಢೀಕರಣ ಪತ್ರ ನೀಡಿದ್ದರು. 
ಸಚಿವ ಸ್ಥಾನದ ಆಸೆಗಾಗಿ ಸಿದ್ದರಾಮಯ್ಯ ಅವರಿಗೆ ನೀಡಿದ ಪತ್ರದಿಂದಾಗಿ ಆರ್.ಶಂಕರ್ ಸಂಕಷ್ಟ ಎದುರಿಸುವಂತಾಗಿದೆ. ಕಾಂಗ್ರೆಸ್ ವಿಶ್ವಾಸ ಮತ ಯಾಚನೆ ಹಿನ್ನಲೆಯಲ್ಲಿ ಶಂಕರ್ ಗೂ ವಿಪ್ ಜಾರಿಗೊಳಿಸಿದ್ದು, ಅವರಿಗೆ ಅನರ್ಹತೆಯ ಭೀತಿ ಎದುರಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com