ವಿಧಾನಸಭೆಯಲ್ಲಿ ಇಂದು ವಿಶ್ವಾಸ ಮತ ಯಾಚನೆ: ಗೆಲುವಿನ ನಗೆ ಬೀರುವ 'ವಿಶ್ವಾಸ'ದಲ್ಲಿ ಬಿಜೆಪಿ

ಕಾಂಗ್ರೆಸ್ -ಜೆಡಿಎಸ್ ನ ಅತೃಪ್ತ ಶಾಸಕರ ಪರವಾಗಿ ಸುಪ್ರೀಂ ಕೋರ್ಟ್ ನಿಂದ ತೀರ್ಪು ಹೊರಬರುತ್ತಿದ್ದಂತೆ ಇತ್ತ ಬಿಜೆಪಿ ...
ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಿ ಎಸ್ ಯಡಿಯೂರಪ್ಪ
ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಿ ಎಸ್ ಯಡಿಯೂರಪ್ಪ
ಬೆಂಗಳೂರು: ಕಾಂಗ್ರೆಸ್ -ಜೆಡಿಎಸ್ ನ ಅತೃಪ್ತ ಶಾಸಕರ ಪರವಾಗಿ ಸುಪ್ರೀಂ ಕೋರ್ಟ್ ನಿಂದ ತೀರ್ಪು ಹೊರಬರುತ್ತಿದ್ದಂತೆ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಗೆಲುವಿನ ವಾಸನೆಯನ್ನು ಸವಿಯಲು ಹೊರಟಿದ್ದಾರೆ. 
ನಿನ್ನೆ ಬೆಂಗಳೂರಿನ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಯಡಿಯೂರಪ್ಪನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಇನ್ನು ಬಿಜೆಪಿ ಶಾಸಕರು ತಂಗಿರುವ ರೆಸಾರ್ಟ್ ನಲ್ಲಿ ಸಹ ಶಾಸಕರ ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು. ರಾತ್ರಿಯಿಡೀ ಭಜನೆ, ಹಾಡು, ಕುಣಿತದಲ್ಲಿ ತೊಡಗಿದ್ದರು.
ಆದರೆ ಗೆಲುವು ಸಿಗುವ ಮುನ್ನ ಮಾಡಬೇಕಾದ ಕೆಲಸ ಹಲವು ಇದೆ ಎನ್ನುತ್ತಾರೆ ಬಿಜೆಪಿಯ ಮುಖ್ಯ ಸಚೇತಕ ವಿ ಸುನಿಲ್ ಕುಮಾರ್. ಬಿಜೆಪಿಯ ಎಲ್ಲಾ 105 ಶಾಸಕರಿಗೆ ಪಕ್ಷ ವಿಪ್ ಜಾರಿಗೊಳಿಸಿದೆ. ಇಂದಿನ ವಿಶ್ವಾಸಮತ ಯಾಚನೆ ವೇಳೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಮತ ಹಾಕುವಂತೆ ವಿಪ್ ನಲ್ಲಿ ಸೂಚಿಸಲಾಗಿದೆ.
ಪ್ರಸ್ತುತ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟದಲ್ಲಿ 101 ಶಾಸಕರಿದ್ದಾರೆ. ರಾಮಲಿಂಗಾ ರೆಡ್ಡಿ ಸರ್ಕಾರದ ಪರ ಮತ ಚಲಾಯಿಸಿದರೆ ಅವರ ಸಂಖ್ಯೆ 102 ಆಗುತ್ತದೆ. ಇದೀಗ ಸರ್ಕಾರ ಉಳಿಸಲು ಅವರಿಗಿರುವ ಮಾರ್ಗ ಒಂದೇ ಅದು ನಮ್ಮ ಶಾಸಕರನ್ನು ಸೆಳೆದುಕೊಳ್ಳುವುದು, ಅದಕ್ಕಾಗಿ ನಾವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಈ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಯಾರು ಬೆಂಬಲ ನೀಡುತ್ತಾರೆ, ಈ ಸರ್ಕಾರ ಕೊನೆಗೆ ದಿನಗಳನ್ನು ಎಣಿಸುತ್ತಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದರು.
ಇಂದು ಸದನಕ್ಕೆ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬಿಜೆಪಿಯ ಎಲ್ಲಾ 105 ಶಾಸಕರನ್ನು ಸಣ್ಣ ಸಣ್ಣ ಗುಂಪುಗಳಾಗಿ ಪ್ರತಿ ಗುಂಪಿಗೆ ಒಬ್ಬ ನಾಯಕರ ನೇತೃತ್ವದಲ್ಲಿ ವಿಧಾನಸಭೆಗೆ ವಿಶೇಷ ವಾಹನದಲ್ಲಿ ಭದ್ರತೆ ನಡುವೆ ಕರೆತರಲಾಗುತ್ತದೆ. ವಿಶ್ವಾಸಮತ ಮುಗಿಯುವವರೆಗೂ ಎಲ್ಲಿಗೂ ಹೋಗದಿರಲು ಆಯಾ ಗುಂಪಿನ ನಾಯಕರಿಗೆ ಸೂಚಿಸಲಾಗಿದೆ. 
ಒಂದು ಸಮಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿದ್ದ ಶಾಸಕರ ಮೇಲೆ ಬಿಜೆಪಿ ಒಂದು ಕಣ್ಣಿಟ್ಟಿದೆ. ಅವರಿಗೆ ತೀವ್ರ ಭದ್ರತೆ ಒದಗಿಸಲಾಗಿದೆ. ಇನ್ನೊಂದೆಡೆ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಇಬ್ಬರು ಸ್ವತಂತ್ರ ಶಾಸಕರಾದ ಹೆಚ್ ನಾಗೇಶ್ ಮತ್ತು ಆರ್ ಶಂಕರ್ ಮೇಲೆ ಸಹ ಬಿಜೆಪಿ ತಮ್ಮ ಪಕ್ಷ ಸೇರಿಕೊಳ್ಳುವಂತೆ ಒತ್ತಡ ಹೇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com