ನನ್ನ ಸಾಲ ತೀರಿಸಲು ರಿಯಲ್ ಎಸ್ಟೇಟ್ ಸಾರಾ ಮಹೇಶ್ ಗೆ ಸಾಧ‍್ಯವೇ?: ಹೆಚ್.ವಿಶ‍್ವನಾಥ್

ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಹೆಚ್ ವಿಶ್ವನಾಥ್ ಸಾಲ ತೀರಿಸಲು ಪಕ್ಷ ತೊರೆದು ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂದು ತಮ್ಮ ವಿರುದ್ಧ ಸಚಿವ...

Published: 19th July 2019 12:00 PM  |   Last Updated: 19th July 2019 04:46 AM   |  A+A-


H.Vishwanath slams Sa.Ra.Mahesh over allegations of accepting money to join BJP

ಹೆಚ್ ವಿಶ್ವನಾಥ್

Posted By : LSB LSB
Source : UNI
ಬೆಂಗಳೂರು: ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಹೆಚ್ ವಿಶ್ವನಾಥ್ ಸಾಲ ತೀರಿಸಲು ಪಕ್ಷ ತೊರೆದು ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂದು ತಮ್ಮ ವಿರುದ್ಧ ಸಚಿವ ಸಾ.ರಾ.ಮಹೇಶ್ ಸದನದಲ್ಲಿ ಮಾಡಿರುವ ಆರೋಪ ಗಾಳಿಯಲ್ಲಿ ಗುಂಡು ಹಾರಿಸಿದಂತಿದೆ. ಅವರಿಗೆ ನಿಜಕ್ಕೂ ಧೈರ್ಯವಿದ್ದರೆ ಸದನದ ಹೊರಗಡೆಯೂ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಲಿ ಎಂದು ವಿಶ್ವನಾಥ್ ಸವಾಲು ಹಾಕಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ನನ್ನ ಅನುಪಸ್ಥಿತಿಯ್ಲಲಿ ಸದನದಲ್ಲಿ ಸಾ.ರಾ.ಮಹೇಶ್ ಮಾಡಿರುವ ಆರೋಪ ಸರಿಯಲ್ಲ. ಸದನದ ಸದಸ್ಯರ ಹಕ್ಕುಬಾಧ್ಯತೆಗಳನ್ನು ರಕ್ಷಿಸಬೇಕಾದ ಹಾಗೂ ತಾವು ಪಾರದರ್ಶಕ ಎಂದು ಹೇಳಿಕೊಳ್ಳುವ ಸ್ಪೀಕರ್ ರಮೇಶ್ ಕುಮಾರ್, ತಮ್ಮ ಮೇಲೆ ಆರೋಪ ಮಾಡಲು ಸಾ.ರಾ.ಮಹೇಶ್ ಅವರಿಗೆ ಅವಕಾಶ ನೀಡಿದ್ದಾದರೂ ಏಕೆ ಎಂದು ಪ್ರಶ್ನಿಸಿದರು.

ಎಲ್ಲರೂ ಸಾಲ ಮಾಡಿಯೇ ಚುನಾವಣೆ ನಡೆಸುವಂತೆ ನಾನು ಸಹ ಇತಿಮಿತಿ ಅರಿತು ಸಾಲಮಾಡಿದ್ದೇನೆ. ಆದರೆ ಸಾಲ ತೀರಿಸಲು ಮಹೇಶ್ ಬಳಿ ಭಿಕ್ಷೆ ಬೇಡುವ ಪರಿಸ್ಥಿತಿ ನನಗೆ ಬಂದಿಲ್ಲ. ನನಗೆ 28 ಕೋಟಿ ರೂಪಾಯಿ ಸಾಲವಿದ್ದು, ಅಷ್ಟನ್ನು ತೀರಿಸುವಂತೆ ಸಾ.ರಾ.ಮಹೇಶ್ ಬಳಿ ಕೇಳಲು ಸಾಧ್ಯವೇ? ರಿಯಲ್ ಎಸ್ಟೇಟ್ ಮಹೇಶ್ ಅದನ್ನು ತೀರಿಸಲು ಮುಂದಾಗುತ್ತಾನೆ ಎಂದು ನಂಬಲು ಸಾಧ‍್ಯವೇ ಎಂದು ಅವರು ವ್ಯಂಗ್ಯವಾಡಿದರು.

ನನ್ನ ಸಾಲಕ್ಕೆ ಕುಟುಂಬದ ಸದಸ್ಯರು ಜವಾಬ್ದಾರರಾಗಿದ್ದು, ಬೆಂಬಲ ನೀಡಲು ಸ್ನೇಹಿತರಿದ್ದಾರೆ. ಇದಕ್ಕಾಗಿ ರಿಯಲ್ ಎಸ್ಟೇಟ್ ಮಹೇಶ್ ನ ಅವಶ್ಯಕತೆಯಿಲ್ಲ ಎಂದರು.

ಒಂದುವೇಳೆ ಸದನದಲ್ಲಿ ಸಾ.ರಾ.ಮಹೇಶ್ ಸತ್ಯ ಹೇಳಿದ್ದೇ ಆದಲ್ಲಿ ಅದನ್ನು ಸದನದ ಹೊರಗೂ ಮಾತನಾಡಬೇಕು. ಕಾಲ ಕೂಡಿಬಂದಾಗ ಮಹೇಶ್ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವುದಾಗಿ ವಿಶ್ವನಾಥ್ ಹೇಳಿದರು.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp