ವಿಪ್ ಜಾರಿ ವಿಚಾರದಲ್ಲಿ ಗೊಂದಲ: ಸುಪ್ರೀಂ ಮೊರೆ ಹೋದ ಕಾಂಗ್ರೆಸ್

ಜುಲೈ 17ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ವಿಪ್ ಜಾರಿ ಬಗ್ಗೆ ಎದ್ದಿರುವ ಗೊಂದಲಗಳ ಬಗ್ಗೆ ಸ್ಪಷ್ಟೀಕರಣ ಕೋರಿ ಕರ್ನಾಟಕ ಪ್ರದೇಶ ಕಾಂಗ್ರೆಸ್....
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ಬೆಂಗಳೂರು: ಜುಲೈ 17ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ವಿಪ್ ಜಾರಿ ಬಗ್ಗೆ ಎದ್ದಿರುವ ಗೊಂದಲಗಳ ಬಗ್ಗೆ ಸ್ಪಷ್ಟೀಕರಣ ಕೋರಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪರ ವಕೀಲರು ಇಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಶಾಸಕರಿಗೆ ವಿಪ್ ಜಾರಿ ವಿಚಾರದಲ್ಲಿ ಗೊಂದಲವಿದ್ದು ಅದನ್ನು ಬಗೆಹರಿಸಿ ಎಂದು ಮನವಿ ಮಾಡಿದ್ದಾರೆ.
ಶಾಸಕರು ಸದನಕ್ಕೆ ಹಾಜರಾಗುವುದು ಕಡ್ಡಾಯವೆಂಬ ಉದ್ದೇಶಕ್ಕೆ ಸುಪ್ರೀಂ ಕೋರ್ಟ್ ತೀರ್ಮಾನ ತದ್ವಿರುದ್ಧವಾಗಿದೆ. ಮಧ್ಯಂತರ ತೀರ್ಪಿನಲ್ಲಿ ಕಾಂಗ್ರೆಸ್ ವಾದಕ್ಕೆ ಯಾವುದೇ ಮನ್ನಣೆ ನೀಡಿಲ್ಲ. ಆ ಬಗ್ಗೆ ಅಸ್ಪಷ್ಟ ನಿಲುವು ಪ್ರಕಟಿಸಲಾಗಿದೆ. ಪಕ್ಷದಿಂದ ಆಯ್ಕೆಯಾಗಿ ಬಂದ ಶಾಸಕರ ಮೇಲೆ ಪಕ್ಷದ ನಾಯಕರಿಗೆ ಅಧಿಕಾರವಿಲ್ಲ ಎಂಬ ಸಂದೇಶ ನೀಡಿದಂತಾಗಿದೆ. ಈ ತೀರ್ಪಿನನಿಂದ  ಶಾಸಕಾಂಗ ಮತ್ತು ನ್ಯಾಯಾಂಗದ ಮಧ್ಯೆ ತಾಕಲಾಟಕ್ಕೆ ಕಾರಣವಾಗಿದೆ. ಹೀಗಾಗಿ ವಿಪ್ ಬಗ್ಗೆ  ಪರಾಮರ್ಶಿಸುವಂತೆ ಕೋರಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿದೆ.
ನಿನ್ನೆ ವಿಧಾನಸಭೆಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಮೊದಲು ವಿಪ್ ಬಗ್ಗೆ ನಿರ್ಧಾರವಾಗಬೇಕು, ಅಲ್ಲಿಯವರೆಗೆ ವಿಶ್ವಾಸಮತ ಯಾಚನೆ ಪ್ರಸ್ತಾಪವನ್ನು ಮುಂದೂಡಬೇಕು ಒತ್ತಾಯಿಸಿದ್ದರು.
ಶಾಸಕಾಂಗ ಪಕ್ಷದ ನಾಯಕನಿಗೆ ವಿಪ್ ನೀಡಲು ಅವಕಾಶವಿಲ್ಲ ಎಂದು ನ್ಯಾಯಾಲಯದ ತೀರ್ಪಿನಲ್ಲಿ  ಉಲ್ಲೇಖಿಸಲಾಗಿದೆ. ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪಿನಿಂದ ನನ್ನ ವಿಪ್ ಅಧಿಕಾರಕ್ಕೆ  ಚ್ಯುತಿ ಉಂಟಾಗಿದೆ ಎಂದು ಮಾಜಿ ಸಿಎಂ ಹೇಳಿದ್ದರು.
ಪಕ್ಷಾಂತರ  ನಿಷೇಧಿಸುವ 10ನೇ ಶೆಡ್ಯೂಲ್ ಸಂವಿಧಾನದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ. ಆದರೆ  ಶಾಸಕಾಂಗ ಪಕ್ಷದ ನಾಯಕನಿಗೆ ವಿಪ್ ನೀಡಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ  ಆದೇಶ ನನ್ನ ಹಕ್ಕಿನ ಚ್ಯುತಿಯಾಗಿದೆ. ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿರುವುದು ಒಂದು ಕುಟಿಲ ತಂತ್ರ ಎಂದು ಸಿದ್ದರಾಮಯ್ಯ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com