ಕಾಂಗ್ರೆಸ್ ಗೆ ಸಿಎಂ ಆಫರ್ ನೀಡಿದ ಜೆಡಿಎಸ್ :ಮೊದಲು ಪಕ್ಷ ಉಳಿಯಲಿ, ಸಿದ್ದರಾಮಯ್ಯ ಸಿಎಂ ಆಗೋದು ಆಮೇಲೆ: ಡಿಕೆಶಿ

ಹೇಗಾದರೂ ಮಾಡಿ ಮೈತ್ರಿ ಸರಕಾರವನ್ನು ಉಳಿಸಲೇ ಬೇಕು ಎಂದು ಪಣ ತೊಟ್ಟಿರುವ ಜೆಡಿಎಸ್‌ ನಾಯಕರು ಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್‌ ಗೆ ಬಿಟ್ಟುಕೊಡಲು ...
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
ಬೆಂಗಳೂರು: ಹೇಗಾದರೂ ಮಾಡಿ ಮೈತ್ರಿ ಸರಕಾರವನ್ನು ಉಳಿಸಲೇ ಬೇಕು ಎಂದು ಪಣ ತೊಟ್ಟಿರುವ ಜೆಡಿಎಸ್‌ ನಾಯಕರು ಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್‌ ಗೆ ಬಿಟ್ಟುಕೊಡಲು ಸಿದ್ದವಾಗಿದೆ  ಎಂದು ತಿಳಿದು ಬಂದಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಚಿವ ಡಿ.ಕೆ.ಶಿವಕುಮಾರ್‌ ಜೆಡಿಎಸ್‌ ವರಿಷ್ಠರು ಮುಕ್ತ ಕಂಠದಿಂದ ನಮಗೆ ಸಿಎಂ ಆಫರ್‌ ನೀಡಿರುವುದು ನಿಜ. ನಮಗೆ ವಿಶ್ವಾಸವಿದೆ. ನಾವು ಸರ್ಕಾರವನ್ನು ಉಳಿಸಿ ಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ ವರಿಷ್ಠರ ಜೊತೆ ಜೆಡಿಎಸ್‌ ನಾಯಕರು ಚರ್ಚೆ ನಡೆಸಿದ್ದಾರೆ. ನೀವು ಯಾರನ್ನು ಬೇಕಾದರೂ ಮುಖ್ಯಮಂತ್ರಿ ಮಾಡಿ ಎಂದಿದ್ದಾರೆ. ಸಿದ್ದರಾಮಯ್ಯ, ಪರಮೇಶ್ವರ್‌ ಮತ್ತು  ಖರ್ಗೆ ಹಾಗೂ ನನ್ನ ಹೆಸರನ್ನು ಜೆಡಿಎಸ್‌ ನಾಯಕರು ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಮುಂಬೈನಲ್ಲಿರುವ ಅತೃಪ್ತರು ವಾಪಾಸ್‌ ಬರುತ್ತಾರೆ. ಅವರನ್ನು ನಾವು ಕೂಡಿ ಹಾಕಲು ಸಾಧ್ಯವಿಲ್ಲ. ಕೂಡಿ ಹಾಕಲು ಅವರೇನು ಮಕ್ಕಳಲ್ಲ, ಒಂದು ವೇಳೆ ಶಾಸಕರನ್ನು ಕೂಡಿ ಹಾಕುವ ಹಾಗಿದ್ದರೇ ನಾವು ಸುಧಾಕರ್ ಮತ್ತು ಎಂಟಿಬಾ ನಾಗರಾಜ್ ಅವರನ್ನು ಬಿಡುತ್ತಿದ್ದೇವೆ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಸಿದ್ದರಾಮಯ್ಯ ಸಿಎಂ ಆಗುವ ಸಂಬಂಧ ಪ್ರತಿಕ್ರಿಯಿಸಿರುವ ಶಿವಕುಮಾರ್, ಮೊದಲು ಪಕ್ಷ ಉಳಿಯಲಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದು ನಂತರದ ವಿಷಯ ಎಂದು ತಿಳಿಸಿದ್ದಾರೆ, ಮತ್ತೊಮ್ಮೆ ವಿಡಿಯೋ ರಿಲೀಸ್ ಮಾಡಿರುವ ಅತೃಪ್ತ ಶಾಸಕರು, ವಿಶ್ವಾಸ ಮತ ಯಾಚನೆಗೆ ಹಾಜರಾಗುವುದಿಲ್ಲ, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ, ನಾವು ಯಾವುದೇ ಕಾರಣಕ್ಕೂ ರಾಜಿನಾಮೆ ವಾಪಸ್ ಪಡೆಯುವುದಿಲ್ಲ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com