ಅತೃಪ್ತ ಶಾಸಕರಿಗೆ ವಿಪ್ ಜಾರಿಗೊಳಿಸುವ ಅಧಿಕಾರ ಶಾಸಕಾಂಗ ನಾಯಕರಿಗಿದೆ: ಸ್ಪೀಕರ್ ರೂಲಿಂಗ್

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ತಮ್ಮ ಪಕ್ಷದ ಸದಸ್ಯರಿಗೆ ಸಂವಿಧಾನದ ಶೆಡ್ಯೂಲ್ 10ರಡಿಯಲ್ಲಿ ವಿಪ್ ಜಾರಿಗೊಳಿಸುವ ಸಂಪೂರ್ಣ ಅಧಿಕಾರ ...
ಅತೃಪ್ತ ಶಾಸಕರಿಗೆ ವಿಪ್ ಜಾರಿಗೊಳಿಸುವ ಅಧಿಕಾರ ಶಾಸಕಾಂಗ ನಾಯಕರಿಗಿದೆ: ಸ್ಪೀಕರ್ ರೂಲಿಂಗ್
ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕರು ತಮ್ಮ ಪಕ್ಷದ ಸದಸ್ಯರಿಗೆ ಸಂವಿಧಾನದ ಶೆಡ್ಯೂಲ್ 10ರಡಿಯಲ್ಲಿ ವಿಪ್ ಜಾರಿಗೊಳಿಸುವ ಸಂಪೂರ್ಣ ಅಧಿಕಾರ ಹೊಂದಿರುತ್ತಾರೆ ಎಂದು ಸ್ಪೀಕರ್ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಸೋಮವಾರ ರೂಲಿಂಗ್ ಹೊರಡಿಸಿದ್ದಾರೆ. 
ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ತಡವಾಗಿ ಸದನ ಆರಂಭವಾಗುತ್ತಿರುವುದಕ್ಕೆ ಸದನ ಸದಸ್ಯರಲ್ಲಿ ಕ್ಷಮೆ ಕೋರುತ್ತೇನೆ ಎಂದು ಮಾತು ಆರಂಭಿಸಿದ ಸ್ಪೀಕರ್ ರಮೇಶ್ ಕುಮಾರ್, ಶಾಸಕಾಂಗ ಪಕ್ಷದ ನಾಯಕನಿಗೆ ತಮ್ಮ ಪಕ್ಷದ ಶಾಸಕರು ಸದನಕ್ಕೆ ಹಾಜರಾಗುವಂತೆ ಸೂಚಿಸುವ ಅಧಿಕಾರವಿದೆ. ಸಂವಿಧಾನದ ಶೆಡ್ಯೂಲ್ 10ರಲ್ಲಿ ಇರುವ ಈ ಜವಾಬ್ದಾರಿಯನ್ನು ಮೊಟಕುಗೊಳಿಸುವುದಿಲ್ಲ ಎಂದು ಆದೇಶ ನೀಡಿದರು.
ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ್ದ ಆದೇಶದಲ್ಲಿ ಗೊಂದಲಗಳಿವೆ, ಶಾಸಕಾಂಗ ಪಕ್ಷದ ನಾಯಕನ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕ್ರಿಯಾಲೋಪವೆತ್ತಿದ್ದರು. ಈ ಬಗ್ಗೆ ತಾವು ಅಡ್ವೊಕೇಟ್ ಜನರಲ್ ಅವರನ್ನು ಕಚೇರಿಗೆ ಕರೆಸಿ ಚರ್ಚೆ ನಡೆಸಿದ್ದೇನೆ, ಇದೊಂದು ವಿಚಿತ್ರ ಸನ್ನಿವೇಶ, ಪ್ರತಿವಾದಿಗಳಾಗಿ ಶಾಸಕಾಂಗ ಪಕ್ಷದ ನಾಯಕರು ಇರಲಿಲ್ಲ ಎಂದು ಹೇಳಿದರು.

ಸದನದಲ್ಲಿ ಭಾಗವಹಿಸುವಂತೆ ತಮ್ಮ ಪಕ್ಷದ ಶಾಸಕರಿಗೆ ವಿಪ್ ಜಾರಿಗೊಳಿಸುವ ಅಧಿಕಾರ ಶಾಸಕಾಂಗ ಪಕ್ಷದ ನಾಯಕರಿಗಿದೆ. ಇದನ್ನು ಸಂವಿಧಾನದ ಶೆಡ್ಯೂಲ್ 10ರಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಜವಾಬ್ದಾರಿಯನ್ನು ಮೊಟಕುಗೊಳಿಸುವುದಿಲ್ಲ ಎಂದು ಹೇಳುವ ಮೂಲಕ ಎಲ್ಲಾ ಶಾಸಕರಿಗೂ ವಿಪ್ ಜಾರಿಗೊಳಿಸಬಹುದು ಎಂದು ಪರೋಕ್ಷವಾಗಿ ಹೇಳಿದರು.

ಸುಪ್ರೀಂ ಕೋರ್ಟ್ ಸ್ಪೀಕರ್ ಅಧಿಕಾರ ವ್ಯಾಪ್ತಿಯ ಬಗ್ಗೆ ನೇರವಾಗಿ ಮತ್ತು ಅಷ್ಟೇ ಸ್ಪಷ್ಟವಾಗಿ ತೀರ್ಪು ಹೊರಡಿಸಿದೆ, ಅದರಲ್ಲಿ ಯಾವುದೇ ಅನುಮಾನವಿಲ್ಲ, ಸುಪ್ರೀಂ ಕೋರ್ಟ್ ನ ಆದೇಶವನ್ನು ಪರಿಶೀಲಿಸಿ ನಾನು ಇವತ್ತು ಆದೇಶ ಹೊರಡಿಸುತ್ತಿದ್ದೇನೆ ಎಂದರು.

ಸದನದ ಕಲಾಪವನ್ನು ಇದೇ ರೀತಿ ಮುಂದೂಡುತ್ತಾ ಕಾಲಹರಣ ಮಾಡುವುದರಲ್ಲಿ
ಅರ್ಥವಿಲ್ಲ. ಹೊರಗೆ ಜನ ನಮ್ಮನ್ನು ಗಮನಿಸುತ್ತಿದ್ದಾರೆ, ಇಲ್ಲಿಂದ ತಪ್ಪು ಸಂದೇಶ ಹೋಗಬಾರದು, ಈ ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಬೇಡಿ, ನಿಮ್ಮ ವ್ಯಕ್ತಿತ್ವಕ್ಕೂ ಧಕ್ಕೆ ತಂದುಕೊಳ್ಳಬೇಡಿ, ಸದನದ ಗೌರವಕ್ಕೆ ಚ್ಯುತಿ ತರಬೇಡಿ ಎಂದು ಕಾಂಗ್ರೆಸ್-ಜೆಡಿಎಸ್ ಸದಸ್ಯರಿಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಹೇಳಿದರು.

ಅತೃಪ್ತ ಶಾಸಕರು ತಮಗೆ ಬೆದರಿಕೆಯಿದೆ, ಅಪಾಯವಿದೆ ಎಂದು ಹೇಳಿದರೆ ಅವರಿಗೆ ಭದ್ರತೆ ಒದಗಿಸುವುದು ನನ್ನ ಜವಾಬ್ದಾರಿ ಎಂದು ಕೂಡ ಸ್ಪೀಕರ್ ಸ್ಪಷ್ಟಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com