ವಿಶ್ವಾಸಮತ ಯಾಚನೆ ಪ್ರಕ್ರಿಯೆ ಇಂದೇ ಪೂರ್ಣ: ಸ್ಪೀಕರ್ ರಮೇಶ್ ಕುಮಾರ್ ವಿಶ್ವಾಸ

ವಿಧಾನಸಭೆಯಲ್ಲಿ ಸೋಮವಾರವೇ ಸರ್ಕಾರ ವಿಶ್ವಾಸಮತ ಯಾಚಿಸಲು ಆಡಳಿತ ...
ಸ್ಪೀಕರ್ ರಮೇಶ್ ಕುಮಾರ್
ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು: ವಿಧಾನಸಭೆಯಲ್ಲಿ ಸೋಮವಾರವೇ ಸರ್ಕಾರ ವಿಶ್ವಾಸಮತ ಯಾಚಿಸಲು ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಒಪ್ಪಿರುವುದರಿಂದ ಈ ಪ್ರಕ್ರಿಯೆ ಇಂದೇ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಸ್ಪೀಕರ್ ಕೆ ಆರ್​ ರಮೇಶ್ ಕುಮಾರ್ ತಿಳಿಸಿದ್ದಾರೆ.
ದೊಮ್ಮಲೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆ ನಡೆದದ್ದು ಕೇವಲ 2 ದಿನ ಮಾತ್ರ. ಆದರೆ, ವರ್ಷಾನುಗಟ್ಟಲೆ ಕಾಲಹರಣ ಮಾಡಿ ಚರ್ಚೆ ನಡೆದಂತೆ ಬಿಂಬಿಸಲಾಗುತ್ತಿದೆ. ಇಂದು ಸಹ ಚರ್ಚೆ ನಡೆಯಲಿದೆ. ಆದರೆ, ಚರ್ಚೆಗೆ ಸಮಯ ನಿಗದಿ ಮಾಡಿಲ್ಲ, ಆ ಸರ್ವಾಧಿಕಾರ ನನಗಿಲ್ಲ. ಇಂದು ಕುಮಾರಸ್ವಾಮಿ ಸಹ ವಿಶ್ವಾಸ ಮತ ಸಾಬೀತುಪಡಿಸಲು ಒಪ್ಪಿದ್ದಾರೆ. ಹೀಗಾಗಿ ಇಂದು ಬಹುಮತ ಯಾಚನೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಅತೃಪ್ತ ಶಾಸಕರ ರಾಜೀನಾಮೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕ್ರಮಬದ್ಧವಾಗಿ ರಾಜೀನಾಮೆ ನೀಡಿರುವ ಶಾಸಕರಿಗೆ ನೋಟೀಸ್ ನೀಡಿ ವಿಚಾರಣೆಗೆ ಕರೆದಿದ್ದೇನೆ. ವಿಚಾರಣೆಗಾಗಿ ವಿವಿಧ ದಿನಾಂಕಗಳನ್ನು ನಿಗದಿ ಮಾಡಿ ಈಗಾಗಲೇ ನೋಟೀಸ್ ನೀಡಲಾಗಿದೆ. ಆದರೆ, ಈವರೆಗೆ ನೋಟಿಸ್ ಪಡೆದ ಯಾವ ಶಾಸಕರೂ ವಿಚಾರಣೆಗೆ ಹಾಜರಾಗಿಲ್ಲ. ಅವರು ರಾಜೀನಾಮೆ ನೀಡಲು ಕೊಟ್ಟ ಕಾರಣ ತಮಗೆ ತೃಪ್ತಿಯಾಗಬೇಕಲ್ಲವೇ ಎಂದು ಪ್ರಶ್ನಿಸಿದರು.
ಶಾಸನ ನಿಯಮ 10ರ ಅಡಿಯಲ್ಲಿ ಶಾಸಕರು ವಿಶ್ವಾಸಮತ ಯಾಚನೆಯ ವೇಳೆ ಕಡ್ಡಾಯ ಹಾಜರಿರಬೇಕು ಎಂದು ಕಾನೂನು ಇದೆ. ಆದರೆ, ಸುಪ್ರೀಂ ಕೋರ್ಟ್ ಶಾಸಕರ ಕಡ್ಡಾಯ ಹಾಜರಾತಿ ಅವಶ್ಯಕತೆ ಇಲ್ಲ ಎಂದು ತೀರ್ಪು ನೀಡಿದೆ. ಹೀಗಾಗಿ ಕಾನೂನು ಗೊಂದಲ ಬಗೆಹರಿಸಲು ಅಡ್ವೋಕೇಟ್ ಜನರಲ್ ಸಲಹೆ ಪಡೆದಿದ್ದೇನೆ. ಇಂದಿನ ಸದನದಲ್ಲಿ ಈ ಎಲ್ಲಾ ಗೊಂದಲ ಬಗೆಹರಿಯುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. 
ಅಡ್ವೊಕೇಟ್ ಆನಂದ್ ಮೂರ್ತಿ ಎಂಬುವವರು ಹೈಕೋರ್ಟ್ ನಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೇಕೆಂದೇ ವಿಳಂಬ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com