ಬಿಜೆಪಿ ಸದಸ್ಯರ ಪ್ರತಿಭಟನೆ: ಮೇಲ್ಮನೆ ಕಲಾಪ ನಾಳೆಗೆ ಮುಂದೂಡಿಕೆ

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸದಸ್ಯರ ಧರಣಿ ಸೋಮವಾರವೂ ಮುಂದುವರೆದ ಪರಿಣಾಮ....

Published: 22nd July 2019 12:00 PM  |   Last Updated: 22nd July 2019 04:09 AM   |  A+A-


Karnataka legislative council adjourns to tomorrow

ವಿಧಾನ ಪರಿಷತ್

Posted By : LSB LSB
Source : UNI
ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸದಸ್ಯರ ಧರಣಿ ಸೋಮವಾರವೂ ಮುಂದುವರೆದ ಪರಿಣಾಮ ಮೇಲ್ಮನೆ ಕಲಾಪ ದಿನದ ಮಟ್ಟಿಗೆ ಮುಂದೂಡಲಾಯಿತು‌.

ಇಂದು ಬೆಳಿಗ್ಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಮುಂಭಾಗ ಧರಣಿಗೆ ಮುಂದಾದರು. ಅಲ್ಪ ಮತಕ್ಕೆ ಕುಸಿದಿರುವ ಸರ್ಕಾರ ಅಧಿಕಾರದಿಂದ ನಿರ್ಗಮಿಸಬೇಕು ಇಲ್ಲವೇ ಬಹುಮತ ಸಾಬೀತುಪಡಿಸಬೇಕು ಎಂದು ಪ್ರತಿಭಟನಾನಿರತ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು‌. 

ಈ ವೇಳೆ ಪ್ರತಿಪಕ್ಷ‌ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಸೋಮವಾರವೇ ಬಹುಮತ ಸಾಬೀತು ಪಡಿಸುವುದಾಗಿ ಸ್ಪೀಕರ್ ಕೆಳಮನೆಯಲ್ಲಿ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರು ಸೇರಿದಂತೆ ಸಭಾನಾಯಕರು ಒಪ್ಪಿದ್ದಾರೆ. ವಿಳಂಬ ನೀತಿ ಧೋರಣೆ ಅನುಸರಿಸದೇ ಕುಮಾರಸ್ವಾಮಿ ವಿಶ್ವಾಸಮತ ನಿರ್ಣಯಕ್ಕೆ ಮುಂದಾಗಬೇಕು. ಈಗಾಗಲೇ ಬಹುತಮವಿಲ್ಲದ ಸರ್ಕಾರ ಎಂದು ಸಾಬೀತಾಗಿದ್ದರಿಂದ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಸದಸ್ಯರ ನಡುವೆ ಗದ್ದಲವುಂಟಾಯಿತು. ಸದ್ದುಗದ್ದಲದ ನಡುವೆಯೇ ಸಭಾನಾಯಕಿ ಜಯಮಾಲಾ ಸದನದಲ್ಲಿ ಪೂರಕ ಕಾರ್ಯಕಲಾಪ ಪಟ್ಟಿಯನ್ನು ಸೇರಿಸುವ ಪ್ರಸ್ತಾಪ ಮಂಡಿಸಿದರು.

ಸರ್ಕಾರಿ ಭರವಸೆಗಳ ಸಮಿತಿಗೆ 9 ಸದಸ್ಯರು, ಹಕ್ಕುಬಾದ್ಯತಾ ಸಮಿತಿಗೆ 7, ವಸತಿ ಸಮಿತಿಗೆ 5, ಸದಸ್ಯರ ಖಾಸಗಿ ವಿದೇಯಕಗಳು ಮತ್ತು ನಿರ್ಣಯಗಳ ಸಮಿತಿಗೆ 8, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ 5, ಸಾರ್ವಜನಿಕ ಉದ್ಯಮಗಳ ಸಮಿತಿಗೆ 5, ಅಧೀನ ಶಾಸನ ರಚನಾ ಸಮಿತಿಗೆ 5, ಅನುಸೂಚಿತ ಜಾತಿ ಮತ್ತು ಪಂಗಡ ಕಲ್ಯಾಣ ಸಮಿತಿಗೆ 5, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗೆ 5 ಸದಸ್ಯರನ್ನು ದಾಮಾಷಾ ಪ್ರಾತಿನಿಧ್ಯದ ತತ್ವಕ್ಕನುಸಾರವಾಗಿ ವರ್ಗಾಯಿಸಬಹುದಾದ ಏಕಮತದ ಮೂಲಕ ಚುನಾಯಿಸಬೇಕು ಎನ್ನುವ ಚುನಾವಣಾ ಪ್ರಸ್ತಾವನೆಗಳನ್ನೊಳಗೊಂಡ ಸೂಚನೆಯನ್ನು ಸದನದಲ್ಲಿ ಮಂಡಿಸಲಾಯಿತು. 

ಗದ್ದಲ, ಕೋಲಾಹಲದ ನಡುವೆಯೇ ಪೂರಕ ಪಟ್ಟಿಯಲ್ಲಿ ಇದ್ದ ಚುನಾವಣಾ ಪ್ರಸ್ತಾಪಗಳು ಸದನಕ್ಕೆ ಮಂಡಿಸಿದ ನಂತರ ಸದನವನ್ನು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪವನ್ನು ಮಂಗಳವಾರ ಬೆಳಗ್ಗೆ 11.30 ಕ್ಕೆ ಮುಂದೂಡಿದರು.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp