ಅತೃಪ್ತ ಶಾಸಕರಿಗೆ ಝೀರೋ ಟ್ರಾಫಿಕ್: ಗೃಹ ಸಚಿವರಿಗೆ ಸ್ಪೀಕರ್ ತರಾಟೆ

ರಾಜೀನಾಮೆ ನೀಡಿದ ಅತೃಪ್ತ ಶಾಸಕರಿಗೆ ವಿಮಾನ ನಿಲ್ದಾಣಕ್ಕೆ ಹೋಗಲು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿರುವ ವಿಚಾರ ಸೋಮವಾರ...
ಸ್ಪೀಕರ್ ರಮೇಶ್ ಕುಮಾರ್
ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು: ರಾಜೀನಾಮೆ ನೀಡಿದ ಅತೃಪ್ತ ಶಾಸಕರಿಗೆ ವಿಮಾನ ನಿಲ್ದಾಣಕ್ಕೆ ಹೋಗಲು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿರುವ ವಿಚಾರ ಸೋಮವಾರ ವಿಧಾನಸಭೆಯಲ್ಲಿ ಭಾರಿ ಸದ್ದು ಮಾಡಿತು.
ಇಂದು ಮಧ್ಯಾಹ್ನ ವಿಶ್ವಾಸಮತ ನಿರ್ಣಯದ ಮೇಲಿನ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಬರಲು, ವಾಪಸ್ ಅಲ್ಲಿಗೆ ತೆರಳಲು ಝೀರೋ ಟ್ರಾಫಿಕ್ ಮಾಡಿಕೊಟ್ಟಿದ್ದ ಅಂಶವನ್ನು ಪ್ರಸ್ತಾಪಿಸಿದರು.
ಶಾಸಕರಿಗೆ ಝೀರೋ ಟ್ರಾಫಿಕ್ ನೀಡಲು ಶಿಷ್ಟಾಚಾರದಲ್ಲಿ ಅವಕಾಶವಿದೆಯೇ? ಅಂಗವಿಕಲರಿಗೆ, ಗರ್ಭಿಣಿಯರಿಗೆ ತುರ್ತು ಪರಿಸ್ಥಿತಿಯಲ್ಲಿದ್ದಾಗ ಝೀರೋ ಟ್ರಾಫಿಕ್ ನೀಡದ ಪೊಲೀಸ್ ಇಲಾಖೆ, ಅತೃಪ್ತ ಶಾಸಕರಿಗೆ ಏಕೆ ಝಿರೋ ಟ್ರಾಫಿಕ್ ನೀಡಿದರು ಎಂದು ಪ್ರಶ್ನಿಸಿದರು.
ಕಾನೂನಿಗಿಂತ, ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ. ಪೊಲೀಸ್ ಮಹಾನಿರ್ದೇಶಕರು ಕಾನೂನಿಗಿಂತ ದೊಡ್ಡವರಲ್ಲ. ಜನಸಾಮಾನ್ಯರಿಗೆ ಟ್ರಾಫಿಕ್ ವ್ಯವಸ್ಥೆ ಬಗ್ಗೆ ಒಪ್ಪಿಗೆ ಇಲ್ಲ. ಅರಾಜಕತೆ ಸೃಷ್ಟಿಸುವವರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿಕೊಟ್ಟಿರುವುದು ಸಣ್ಣ ಕೆಲಸವೇನಲ್ಲ ಎಂದು ಎ.ಟಿ.ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಸ್ಪಷ್ಟೀಕರಣ ನೀಡಿದ ಗೃಹ ಸಚಿವ ಎಂಬಿ ಪಾಟೀಲ್, ರಾಜೀನಾಮೆ ನೀಡಿದ ಶಾಸಕರಿಗೆ ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿಲ್ಲ ಎಂದು ಉತ್ತರಿಸಿದರು. 
ಗೃಹ ಸಚಿವರ ಈ ಉತ್ತರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್‌ ರಮೇಶ್‌ ಕುಮಾರ್, ನೀವು ಹೇಳಿದ ಉತ್ತರ ನಿಮಗೇ ಸರಿ ಕಾಣುತ್ತಿದೆಯೇ? ರಾಜಕಾರಣಿಯಾಗಿ ನೀವು ಮಾತನಾಡುತ್ತಿದ್ದೀರಲ್ಲ. ಅವರಿಗೆ ಝೀರೋ ಟ್ರಾಫಿಕ್‌ ಮಾಡಿಕೊಟ್ಟಿರುವುದನ್ನು ಇಡೀ ದೇಶವೇ ನೋಡಿದೆ. ನಿಮ್ಮ ಹೇಳಿಕೆ ಸತ್ಯ ಎಂದು ನೀವು ಒಪ್ಪುತ್ತೀರಾ ಎಂದು ಗದರಿದರು. 
ಸ್ಪೀಕರ್‌ ಮಾತಿನ ನಡುವೆಯೇ ಸ್ಪಷ್ಟೀಕರಣ ನೀಡಲು ಮುಂದಾದ ಎಂಬಿ ಪಾಟೀಲ್‌ ಅವರ ಮಾತನ್ನು ಕೇಳಲೂ ರಮೇಶ್‌ ಕುಮಾರ್‌ ಸಿದ್ಧವಿರಲಿಲ್ಲ. ಎತ್ತ ಸಾಗುತ್ತಿದೆ ನಮ್ಮ ಸಮಾಜ? ಅಪರಾಧಿಗಳಿಗೆ, ಕಳ್ಳರಿಗೆ ಎಲ್ಲರಿಗೂ ಝಿರೋ ಟ್ರಾಫಿಕ್‌ ಕೊಡಿ. ದೇಶ ಸೇವಕರಿಗೆ, ಜನ ಸೇವಕರಿಗೆ, ಸಾಮಾನ್ಯ ಜನರಿಗೆ ಏನೂ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು.
ಬಳಿಕ ಈ ವಿಚಾರಕ್ಕೆ ಸಂಬಂಧಿಸಿದಂತೆ ಎಂಬಿ ಪಾಟೀಲ್ ಅವರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಜತೆ ಸಭೆ ನಡೆಸಿದರು. ಈ ವೇಳೆ ಸಂಚಾರಿ ಪೊಲೀಸರು ಅತೃಪ್ತ ಶಾಸಕರಿಗೆ ಕೇವಲ ಭದ್ರತೆ ನೀಡಿದ್ದಾರೆ. ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಲ್ಲ ಎಂದು ಸಚಿವರಿಗೆ ಹೇಳಿದ್ದಾರೆ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಸಾಕ್ಷ್ಯಗಳನ್ನು ಸಹ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಸಂಪೂರ್ಣ ವಿವರ ಪಡೆದ ಗೃಹ ಸಚಿವ ಎಂಬಿ ಪಾಟೀಲ್ ಅವರು ಝೀರೋ ಟ್ರಾಫಿಕ್ ಗೆ ಸಂಬಂಧಿಸಿದಂತೆ ಸ್ಪೀಕರ್ ಗೆ ವರದಿ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com