ರಾಜ್ಯದ ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಯಾರಿಗೂ ಸುಭದ್ರ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ: ಹೆಚ್ ಡಿ ಕುಮಾರಸ್ವಾಮಿ

ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಅವರ ನಿವಾಸಕ್ಕೆ ಗುರುವಾರ ಹಂಗಾಮಿ ಮುಖ್ಯಮಂತ್ರಿ ...
ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಭೇಟಿ ಮಾಡಿದ ಹೆಚ್ ಡಿ ಕುಮಾರಸ್ವಾಮಿ , ಶಾಸಕಿ ಸೌಮ್ಯ ರೆಡ್ಡಿ ಸಹ ಉಪಸ್ಥಿತರಿದ್ದರು.
ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಭೇಟಿ ಮಾಡಿದ ಹೆಚ್ ಡಿ ಕುಮಾರಸ್ವಾಮಿ , ಶಾಸಕಿ ಸೌಮ್ಯ ರೆಡ್ಡಿ ಸಹ ಉಪಸ್ಥಿತರಿದ್ದರು.
ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಅವರ ನಿವಾಸಕ್ಕೆ ಗುರುವಾರ ಹಂಗಾಮಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭೇಟಿ ನೀಡಿ ಮಾತುಕತೆ ನಡೆಸಿದರು
ಈ ವೇಳೆ ರೆಡ್ಡಿ ಅವರ ಪುತ್ರಿ ಹಾಗೂ ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಕೂಡ ಹಾಜರಿದ್ದರು.
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‍.ಡಿ.ಕುಮಾರಸ್ವಾಮಿ, ರಾಜ್ಯದ ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಯಾರಿಗೂ ಸುಭದ್ರ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ಮುಂದಿನ ಎರಡು ಮೂರು ವರ್ಷಗಳಲ್ಲಿ ಇದೇ ಪರಿಸ್ಥಿತಿ ಇರುವ ಸಾಧ್ಯತೆ ಇರುವುದರಿಂದ ಸುಭದ್ರ ಆಡಳಿತ ನೀಡಲು ಸಾಧ್ಯವಿಲ್ಲ. ಉಪ ಚುನಾವಣೆ ಕಡೆಗೆ ಗಮನ ಹರಿಸಬೇಕಾಗುತ್ತದೆ ಮತ್ತೊಂದೆಡೆ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕಾಗುತ್ತದೆ, ಹೀಗಾಗಿ ಸ್ಥಿರ ಸರ್ಕಾರ ಇರುವುದು ಅನುಮಾನ ಎಂದರು.
ರಾಮಲಿಂಗಾ ರೆಡ್ಡಿ ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಹೆಚ್ಚಾಗಿ ರಾಜ್ಯದಲ್ಲಿ ನಡೆದ 10-20 ದಿನಗಳ ರಾಜಕೀಯ ಬೆಳವಣಿಗೆಯ ಸಂದರ್ಭದಲ್ಲಿ ರಾಮಲಿಂಗಾ ರೆಡ್ಡಿ ಅವರಿಗೆ ತಾವು, ಎಚ್.ಡಿ.ದೇವೇಗೌಡರು ಹಾಗೂ ಕಾಂಗ್ರೆಸ್ ನಾಯಕರು ಮನವಿ ಮಾಡಿ ಅವರ ರಾಜೀನಾಮೆಯನ್ನು ಹಿಂದಕ್ಕೆ ಪಡೆಯುವಂತೆ ಕೋರಿದ್ದೆವು. ಅದರಂತೆ ಅವರು ನಮ್ಮ ಮೇಲೆ ವಿಶ್ವಾಸ ವಿಟ್ಟು ರಾಜೀನಾಮೆಯನ್ನು ವಾಪಸ್ ಪಡೆದು, ಮೈತ್ರಿ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದಾರೆ. ಈ ಮೂಲಕ ತಾವು ಒಬ್ಬ ನಿಷ್ಠಾವಂತ, ಪ್ರಾಮಾಣಿಕ ಕಾಂಗ್ರೆಸ್ ಕಾರ್ಯಕರ್ತ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದ್ದರಿಂದ ಅವರಿಗೆ ವೈಯಕ್ತಿಕ ನೆಲೆಯಲ್ಲಿ ಗೌರವ ಸಲ್ಲಿಸಲು ಅವರ ನಿವಾಸಕ್ಕೆ ಭೇಟಿ ನೀಡಿದ್ದೇನೆ ಎಂದರು.
ವಿಧಾನಸಭೆಯ ಅಧಿವೇಶನದಲ್ಲೇ ಅವರನ್ನು ನೆನಪಿಸಿಕೊಳ್ಳಬೇಕಿತ್ತು. ಆದರೆ ಅಲ್ಲಿ ಸಮಯಾವಕಾಶದ ಕೊರತೆಯಿಂದ ಅದು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಂದು ಅವರ ಮನೆಗೆ ಬಂದಿದ್ದೇನೆ ಎಂದು ಹೇಳಿದರು.
ಬಿಜೆಪಿ ನಾಯಕರು ಇನ್ನೂ ಸರ್ಕಾರ ರಚನೆಗೆ ಮುಂದಾಗದ ಬಗ್ಗೆ ಪ್ರಶ್ನಿಸಿದಾಗ, ಅದು ಆ ಪಕ್ಷಕ್ಕೆ ಸೇರಿದ ವಿಚಾರ ಎಂದಷ್ಟೇ ಉತ್ತರಿಸಿದರು.
ರಾಮಲಿಂಗಾ ರೆಡ್ಡಿ ಮಾತನಾಡಿ, ಇಲ್ಲಿ ಯಾವುದೇ ರಾಜಕೀಯ ಮಾತುಕತೆ ನಡೆದಿಲ್ಲ. ಅವರು ಜೆಡಿಎಸ್‍ನಲ್ಲಿದ್ದಾರೆ, ನಾನು ಕಾಂಗ್ರೆಸ್‍ನಲ್ಲಿದ್ದೇನೆ, ನಾನು ರಾಜೀನಾಮೆ ಕೊಟ್ಟಿದ್ದು ಪಕ್ಷದ ಆಂತರಿಕ ವಿಚಾರಗಳಿಗಾಗಿ. ಎಲ್ಲಾ ಮುಖಂಡರು ರಾಜೀನಾಮೆ ವಾಪಸ್ ಪಡೆಯಲು ಹೇಳಿದ್ದರು. ಈಗ ವಾಪಸ್ ಪಡೆದಿದ್ದಕ್ಕೆ ಕೃತಜ್ಞತೆ ಸಲ್ಲಿಸಲು ಅವರು ಬಂದಿದ್ದರು ಎಂದು ಹೇಳಿದರು.
ಸರ್ಕಾರ ಈಗ ಬಿದ್ದು ಹೋಗಿದೆ. ಮುಂಬೈಯಲ್ಲಿರುವ ಬೆಂಗಳೂರು ಶಾಸಕರು ನನ್ನ ಕರೆ ಸ್ವೀಕರಿಸಿಲ್ಲ. ಬೇರೆ ವಿಷಯದ ಬಗ್ಗೆ ತಮಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿ ಅವರು ರಾಜಕೀಯ ಅನುಭವದ ಮೇಲೆ ಅಸ್ಥಿರತೆಯ ಬಗ್ಗೆ ಮಾತನಾಡಿದ್ದಾರೆ. ಮಧ್ಯಂತರ ಚುನಾವಣೆಯ ಬಗ್ಗೆ ತಮಗೆ ಮಾಹಿತಿ ಇಲ್ಲ. ಮೈತ್ರಿ ಮುಂದುವರಿಸುವುದರ ಬಗ್ಗೆ ಪಕ್ಷದ ನಾಯಕರು ತೀರ್ಮಾನಿಸುತ್ತಾರೆ. ಇದು ಕಾರ್ಪೋರೇಷನ್ ಚುನಾವಣೆ ಅಲ್ಲ, ರಾಜ್ಯದ ವಿಚಾರವಾಗಿರುವುದರಿಂದ ಅದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com