ಸರ್ಕಾರ ರಚನೆಗೆ ಸಿಗದ ಗ್ರೀನ್ ಸಿಗ್ನಲ್: ದೆಹಲಿಗೆ ತೆರಳಿದ ಯಡಿಯೂರಪ್ಪ ಆಪ್ತ ನಿಯೋಗ

ಎಷ್ಟು ಸಾಧ್ಯವೋ ಅಷ್ಟು ಬೇಗನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕೆಂದು ತುದಿಗಾಲಲ್ಲಿ ನಿಂತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಸೆಗೆ ...
ಯಡಿಯೂರಪ್ಪ
ಯಡಿಯೂರಪ್ಪ
ಬೆಂಗಳೂರು: ಎಷ್ಟು ಸಾಧ್ಯವೋ ಅಷ್ಟು ಬೇಗನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕೆಂದು ತುದಿಗಾಲಲ್ಲಿ ನಿಂತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಸೆಗೆ ಬಿಜೆಪಿ ಹೈಕಮಾಂಡ್ ತಣ್ಣೇರೆರಚಿದೆ.  ಹೀಗಾಗಿ ವರಿಷ್ಠರ ಮನವೊಲಿಕೆಗೆ ಹಾಗೂ ರಾಜ್ಯ ರಾಜಕಾರಣದ ಪ್ರಚಲಿತ ಬೆಳವಣಿಗೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಬಿಎಸ್‍ವೈ ತಮ್ಮ ಆಪ್ತ ಬಳಗವನ್ನು ದೆಹಲಿಗೆ ಕಳುಹಿಸಿದ್ದಾರೆ.
ಸ್ಪೀಕರ್ ಹಾಗೂ ಸುಪ್ರೀಂಕೋರ್ಟ್ ಎದುರು ಬಾಕಿ ಇರುವ ಕಾಂಗ್ರೆಸ್ ಜೆಡಿಎಸ್‍ನ 15 ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಅರ್ಜಿಗಳು ಇತ್ಯರ್ಥ ಆಗುವವರೆಗೆ ಸರ್ಕಾರ ರಚನೆಗೆ ಅವಸರ ಮಾಡಬೇಡಿ ಎಂದು ಬಿಜೆಪಿ ಹೈಕಮಾಂಡ್ ನಿರ್ದೇಶನ ನೀಡಿದೆ ಎಂದು ಹೇಳಲಾಗುತ್ತಿದೆ.
ಎಚ್ಚರಿಕೆಯ ಹೆಜ್ಜೆ ಇಡಲು ಬಿಜೆಪಿ ಮುಂದಾಗಿದ್ದು, ಅತೃಪ್ತ ಶಾಸಕರ ರಾಜೀನಾಮೆ ಅಂಗಿಕಾರ ಬಳಿಕ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಇತ್ತ ಅತೃಪ್ತ ಮೇಲೆ ಬಿಜೆಪಿ ವರಿಷ್ಠರಿಗೆ ನಂಬಿಕೆ ಮೂಡಿಲ್ಲವಂತೆ. ಹೀಗಾಗಿ ಮೈತ್ರಿ ಸರ್ಕಾರ ಬಿದ್ದರೂ ಸರ್ಕಾರ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡಲಿಲ್ಲ. ಸ್ಪೀಕರ್ ನಡೆ ಗಮನಿಸಿಕೊಂಡು ರಾಜ್ಯ ನಾಯಕರಿಗೆ ಸೂಚಿಸಲು ಬಿಜೆಪಿ ಹೈಕಮಾಂಡ್ ನಿರ್ಧಾರಿಸಿದೆ.
ದೋಸ್ತಿ ಸರ್ಕಾರ ಪತನಗೊಂಡಾಗಿನಿಂದ ಹೊಸ ಸರ್ಕಾರ ರಚನೆಗೆ ಬಿ.ಎಸ್ ಯಡಿಯೂರಪ್ಪ ಕಾಯುತ್ತಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳಿತುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ನಾಯಕರು ಮಾತ್ರ ಇಲ್ಲಿಯವರೆಗೂ ಬಿಎಸ್‍ವೈಗೆ ಯಾವುದೇ ಸಂದೇಶ ರವಾನಿಸಿಲ್ಲ. ಇದು ಬಿಎಸ್‍ವೈ ಆತಂಕಕ್ಕೆ ಕಾರಣವಾಗಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಮಾಧುಸ್ವಾಮಿ, ಕೆ.ಜಿ ಬೋಪಯ್ಯ, ಬಿ.ವೈ ವಿಜಯೇಂದ್ರ ತಡರಾತ್ರಿಯೇ ದೆಹಲಿಗೆ ಆಗಮಿದ್ದಾರೆ.. ಈ ಬಿಜೆಪಿ ನಿಯೋಗ ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿ ಮಾಡಿ ಸರ್ಕಾರ ರಚನೆ ಸಂಬಂಧ ಚರ್ಚೆ ನಡೆಸಲಿದೆ. ಒಂದು ವೇಳೆ ಅಮಿತ್ ಶಾ ಭೇಟಿ ಸಾಧ್ಯವಾಗದಿದ್ದರೆ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com