ಛಲ ಎಂದರೆ ಯಡಿಯೂರಪ್ಪ, ಯಡಿಯೂರಪ್ಪ ಎಂದರೆ ಛಲ

ಛಲ ಎಂದರೆ ಯಡಿಯೂರಪ್ಪ, ಯಡಿಯೂರಪ್ಪ ಎಂದರೆ ಛಲ ಎಂಬದು ರಾಜ್ಯದ ಬಹಳಷ್ಟು ಜನರಿಗೆ ಗೊತ್ತಿದೆ.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
ಬೆಂಗಳೂರು: ಛಲ ಎಂದರೆ ಯಡಿಯೂರಪ್ಪ, ಯಡಿಯೂರಪ್ಪ ಎಂದರೆ ಛಲ ಎಂಬದು ರಾಜ್ಯದ ಬಹಳಷ್ಟು ಜನರಿಗೆ ಗೊತ್ತಿದೆ. 
ರಾಜ್ಯದ ರಾಜಕೀಯ ಚಿತ್ರ ವಿಚಿತ್ರ ತಿರುವುಗಳತ್ತ ಸಾಗಿ ನಿರೀಕ್ಷೆ ಮಾಡಲಾಗದ ಘಟನಾವಳಿಗಳು ಜರುಗುತ್ತಿರುವಾಗ ಅವರು ನಾಲ್ಕನೇ ಭಾರಿಗೆ ನೂತನ ಮುಖ್ಯಮಂತ್ರಿಯಾಗಿ ಮತ್ತೆ ಪ್ರಮಾಣ ವಚನ ಸ್ವೀಕರಿಸಿ, ಹೊಸ ಸವಾಲು ಎದುರಿಸಲು ಹೊರಟಿರುವುದು ನಿಜಕ್ಕೂ ಮೆಚ್ಚಬೇಕಾದ ವಿಷಯವೇ ಆಗಿದೆ. 
ಕಳದೆ ವಿಧಾನಸಭೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರಲಿಲ್ಲ ನಿಜ. ಆದರೆ ನಾನೇ ಮುಂದಿನ ಮುಖ್ಯಮಂತ್ರಿ ಎಂದೂ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದರು. ಪ್ರಧಾನಿ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡುವುದಾಗಿ ಹೇಳಿದ್ದರು. ಆಗ ಅವರ ಮಾತನ್ನು ಕೇಳಿ ಎಲ್ಲರು ಇವರಿಗೆ ಏನಾಗಿದೆ? ಇದು ಸಾಧ್ಯವೆ ? ಏಕೆ ಹೀಗೆ ಹೇಳುತ್ತಿದ್ದಾರೆ? ಎಂಬ ಪ್ರಶ್ನೆಗಳು ರಾಜಕೀಯ ಪಡಸಾಲೆಯಲ್ಲಿ ತೂರಿ ಬಂದವು. ಯಡಿಯೂರಪ್ಪನವರು ನಗೆಪಾಟಲಿಗೆ ಗುರಿಯಾದರು. 
ಆದರೆ ಮುಂದೆ ನಡೆದಿದ್ದೆ ಬೇರೆ. ಫಲಿತಾಂಶ ಪ್ರಕಟವಾಗಿ ಅವರು ಹೇಳಿದ ದಿನವೇ ಕರಾರುವಕ್ಕಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ದೇಶದ ರಾಜಕೀಯ ಚರಿತ್ರೆಯಲ್ಲಿ ಒಬ್ಬ ನಾಯಕ ಅದೂ ಫಲಿತಾಂಶ ಪ್ರಕಟವಾಗುವ ಮೊದಲೇ ನಾನೇ ಮುಂದಿನ ಸಿಎಂ ಎಂದು ಹೇಳಿ, ಅದೂ ಹೇಳಿದ ದಿನವೇ ಕರಾರುವಕ್ಕಾಗಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದು ದೇಶದ ರಾಜಕೀಯ ಬಹಳ, ಬಹಳ ವಿರಳ ಚರಿತ್ರೆ ಇತಿಹಾಸ ಅಂತಹ ಕೀರ್ತಿ ಯಡಿಯೂರಪ್ಪ ನವರ ರಾಜಕೀಯ ಜೀವನದಲ್ಲಿ ಹಾಸುಹೊಕ್ಕಾಗಿತ್ತು ಎಂಬುದನ್ನೂ ಸುಲಭವಾಗಿ ಮರೆಯುವಂತಿಲ್ಲ.
ಭ್ರಷ್ಟಾಚಾರದ ಆರೋಪ ಕೇಳಿ ಬಂದ ನಂತರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ, ನಂತರ ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಿದ್ದರು. ಆಗ ರಾಜ್ಯ ಬಿಜೆಪಿಯಲ್ಲಿ , ಯಡಿಯೂರಪ್ಪ ಹೇಳಿದ್ದೇ ವೇದವಾಕ್ಯ. ಅದನ್ನು ಮೀರಿ ನಡೆಯುವ ಸಾಹಸ ರಾಜ್ಯದ ನಾಯಕರಿಗೂ ಇರಲಿಲ್ಲ. ಕೇಂದ್ರದ ನಾಯಕರಿಗೂ ಇರಲಿಲ್ಲ ಎಂಬುದು ಸ್ಪಷ್ಟ. 
ಮುಂದೆ ಅವರು ಬಿಜೆಪಿಯನ್ನು ತೊರೆದು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಕಟ್ಟಿಕೊಂಡರು. ಆಗ ರಾಜ್ಯದ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ರಾಜ್ಯಭಾರ ಮಾಡುತ್ತಿದ್ದರು. ಯಾವುದೇ ಕಾರಣಕ್ಕೂ ಶೆಟ್ಟರ್, ಹೊಸ ಬಜೆಟ್ ಮಂಡಿಸಲು ಬಿಡುವುದಿಲ್ಲ ಎಂದು ಯಡಿಯೂರಪ್ಪ ಅಬ್ಬರಿಸಿದ್ದರು. ಅಷ್ಟೇ ಅಲ್ಲ, ಈ ಜನ್ಮದಲ್ಲಿ ಮತ್ತೆ ಎಂದೂ ಬಿಜೆಪಿಗೆ ಮರಳುವುದಿಲ್ಲ. ಪಕ್ಷದ ನಾಯಕರನ್ನು ಸಮರ್ಥನೆ ಮಾಡಿಕೊಳ್ಳುವಲ್ಲಿ ಬಿಜೆಪಿ ನಾಯಕರು ಸೋನಿಯಾ ಗಾಂಧಿ ಅವರನ್ನು ನೋಡಿ ಕಲಿಯಬೇಕು ಎಂದು ಅವರನ್ನು ಹಾಡಿ ಹೊಗಳಿ ಬಿಜೆಪಿನಾಯಕರನ್ನು ಚಕಿತಗೊಳಿಸಿದ್ದರು. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಬಿಟ್ಟರೆ ಬೇರೆ ನಾಯಕರೇ ಇಲ್ಲ ಎಂಬುದು ಅನುಮಾನಕ್ಕೆ ಎಡೆ ಇಲ್ಲದಂತೆ ಸಾಬೀತಾಗಿದೆ. 
ಪಕ್ಷವನ್ನೇ ಮುಳುಗಿಸುತ್ತೇನೆ, ಈಜನ್ಮದಲ್ಲಿ ಎಂದೂ ಬಿಜೆಪಿಗೆ ಮರಳುವುದಿಲ್ಲ ಎಂದು ಸಾರಿ ಸಾರಿ ಹೇಳಿದ್ದ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬಂದಿದ್ದು ಅಚ್ಚರಿಯಲ್ಲ. ಅವರೇ ಮೂರು ವರ್ಷಗಳ ಕಾಲ ರಾಜ್ಯದ ಅಧ್ಯಕ್ಷರಾಗಿ ಈಗ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಹೊಸ ತಿವಿಕ್ರಮ ಬರೆಯಲು ಹೊರಟಿರುವುದೇ ಅಚ್ಚರಿ ಪಡಬೇಕಾದ ಸಂಗತಿಯೇ ಆಗಿದೆ. 
ಇದುವರೆಗೆ ಮೂರು ಬಾರಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿ ಈಗ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗುತ್ತಿದ್ದಾರೆ. ಮೊದಲ ಬಾರಿ ಮೂರೂವರೆ ವರ್ಷಗಳ ಕಾಲ ಅಧಿಕಾರ ಮಾಡಿದ್ದರು. ಎರಡು ಮತ್ತು ಮೂರನೇ ಸಲ ಕೇವಲ 9 ದಿನ, 3 ದಿನಕ್ಕೆ ಅಧಿಕಾರ ಕಳೆದುಕೊಂಡಿದ್ದರು. 
ಅವರು 2007 ರಲ್ಲಿ ತಮ್ಮ ಹೆಸರನ್ನು ಬದಲಾವಣೆಮಾಡಿಕೊಂಡರು ಅದೂ ಜ್ಯೋತಿಷಿಯ ಸಲಹೆ ಮೇರೆಗೆ ಎಂಬುದು ಗುಟ್ಟಾಗಿ ಉಳಿದಿಲ್ಲ.
ಶಿಕಾರಿಪುರ ಎಂದಾಕ್ಷಣ ನಮ್ಮೆಲ್ಲರಿಗೂ ನೆನಪಾಗುವ ಒಂದು ಹೆಸರು ಎಂದರೆ ರಾಜ್ಯ ಕಂಡ ಧೀಮಂತ ನಾಯಕ, ಹುಟ್ಟು ಹೋರಾಟಗಾರ ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ.
ಸಿದ್ದಲಿಂಗಯ್ಯ ಪುಟ್ಟ ತಾಯಮ್ಮನವರಿಗೆ 1943ರ ಫೆಬ್ರವರಿ 27ರಂದು ಜನಿಸಿದ ಅವರು ರಾಜಕೀಯದಲ್ಲಿ ಈ ಮಟ್ಟಕ್ಕೆ ಬೆಳೆದು ನಿಲ್ಲುತ್ತಾರೆ ಎಂದೂ ಯಾರೊಬ್ಬರೂ ಉಹಿಸಿರಲಿಲ್ಲ. 
ಅವರು ಮುಖ್ಯಮಂತ್ರಿಯಾಗುತ್ತಿರುವುದು ಯಾರಿಗೂ ಈಗ ಅಚ್ಚರಿ ಸಂಗತಿಯಾಗಿ ಕಾಣುತ್ತಿಲ್ಲ. ಆದರೆ, ಅಧಿಕಾರವನ್ನು ಈಗಿನ ವಿಚಿತ್ರ ರಾಜಕೀಯ ಸನ್ನಿವೇಶದಲ್ಲಿ ಎಷ್ಟು ದಿನ ಉಳಿಸಿಕೊಳ್ಳುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಎಲ್ಲಾ ಅಡೆತಡೆಗಳನ್ನು ಮೀರಿ ಉಳಿದ ಮೂರೂವರೆ ವರ್ಷಗಳ ಆಡಳಿತವನ್ನು ಅವರು ಪೂರ್ಣಗೊಳಿಸಿದರೆ ರಾಜಕೀಯ ಚರಿತ್ರೆಯಲ್ಲಿ ಮತ್ತೊಮ್ಮೆ ಅವರ ಹೆಸರು ಆಗಸದ ಧ್ರುವತಾರೆಯಂತೆ ಮಿನುಗಲಿದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com