ನಾಲ್ಕನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಪ್ರಮಾಣ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಇಂದು ಸಂಜೆ 6.30ಕ್ಕೆ ರಾಜಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಬಿಎಸ್ ಯಡಿಯೂರಪ್ಪ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ದೇವರ ಹೆಸರಿನಲ್ಲಿ ನಾಲ್ಕನೇ ಬಾರಿ ರಾಜ್ಯದ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದರು.

ಯಡಿಯೂರಪ್ಪ ಅವರೊಬ್ಬರೇ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಸಚಿವರಾಗಿ ಯಾರೂ ಪ್ರಮಾಣ ವಚನ ಸ್ವೀಕರಿಸಲಿಲ್ಲ. ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ, ಜಗದೀಶ್ ಶೆಟ್ಟರ್‌, ಅರವಿಂದ ಲಿಂಬಾವಳಿ, ಸದಾನಂದಗೌಡ, ಸಂಸದರು, ಶಾಸಕರು ಸೇರಿದಂತೆ ಬಿಜೆಪಿಯ ಹಲವು ಹಿರಿಯ ನಾಯಕರು, ನೂರಾರು ಕಾರ್ಯಕರ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದ್ದ ಶಿವಾಜಿನಗರ ಶಾಸಕ ರೋಷನ್‌ ಬೇಗ್‌, ಕಾಂಗ್ರೆಸ್‌ ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಕೂಡ ಸಮಾರಂಭದಲ್ಲಿ ಹಾಜರಾಗಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿದೆ. 

ಈ ಹಿಂದೆ ಎಸ್‌. ನಿಜಲಿಂಗಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು. ಇದೀಗ ಬಿಎಸ್ ಯಡಿಯೂರಪ್ಪ ಅವರು ಸಹ ನಾಲ್ಕನೇ ಬಾರಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಒಂದು ವಾರದೊಳಗೆ ತಮಗಿರುವ ಬಹುಮತವನ್ನು ಸಾಬೀತುಪಡಿಸಬೇಕಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ  ಸ್ವೀಕರಿಸಿರುವ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಒಂದು ವಾರದಲ್ಲಿ ತಮ್ಮ  ಸರ್ಕಾರಕ್ಕಿರುವ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದಾರೆ. ಆದರೆ ಒಂದು ವಾರ ಕಾಯದೆ  ಸಾಧ್ಯವಾದಷ್ಟು ಬೇಗ ತಮ್ಮ ಸರ್ಕಾರಕ್ಕಿರುವ ಬಹುಮತ ಸಾಬೀತುಪಡಿಸಲು ಯಡಿಯೂರಪ್ಪ  ನಿರ್ಧರಿಸಿದ್ದಾರೆ. ಜತೆಗೆ ಈ ಮಾಸಾಂತ್ಯದ ವೇಳೆಗೆ ಧನವಿನಿಯೋಗ ಮಸೂದೆಗಳ ಅಂಗೀಕಾರ  ಪಡೆಯುವ ಜವಾಬ್ದಾರಿಯೂ ಸಹ ಯಡಿಯೂರಪ್ಪ ಅವರ ಹೆಗಲಿಗೆ ಬಿದ್ದಿದೆ. 

ಒಟ್ಟಾರೆ 225 ಸದಸ್ಯ ಬಲದ  ವಿಧಾನಸಭೆಯಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗದೆ ಇದ್ದರೆ ಯಡಿಯೂರಪ್ಪ  ಅವರು ಬಹುಮತ ಸಾಬೀತುಪಡಿಸುವ ವೇಳೆಗೆ ಹೆಚ್ಚು ಕಡಿಮೆ ಆಗಬಹುದು ಎಂಬ ಸಂಶಯ ದೆಹಲಿ ಬಿಜೆಪಿ ನಾಯಕರನ್ನು ಕಾಡುತ್ತಿದೆ.

ಒಂದು ವೇಳೆ  ಬಹುಮತ ಸಾಬೀತಿನ ವೇಳೆ ಅತೃಪ್ತ ಶಾಸಕರ ಪೈಕಿ ಹಲವರು ಏಕಾಏಕಿಯಾಗಿ ತಮ್ಮ ನಿರ್ಧಾರ  ಬದಲಿಸಿದರೆ ಮುಖಭಂಗ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಸ್ವಲ್ಪ ಕಾಲ ಕಾಯುವಂತೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿತ್ತು. ಆದರೆ  ಗುರುವಾರ ರಾತ್ರಿ ಸ್ಪೀಕರ್ ರಮೇಶ್ ಕುಮಾರ್ ಅವರು ರಾಜೀನಾಮೆ ನೀಡಿದ ಶಾಸಕರ ಪೈಕಿ  ಆರ್.ಶಂಕರ್, ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಮೇಲೆ ಬಿಜೆಪಿ ಹೈಕಮಾಂಡ್ ನಡೆ ಬೇರೆ ಆಯಿತು.

ಹೇಗಿದ್ದರೂ  ಅತೃಪ್ತ ಶಾಸಕರು ಬಹುಮತ ಸಾಬೀತಿನ ವೇಳೆ ಗೈರು ಹಾಜರಾಗುವುದರಿಂದ ಸದನದ ಸಂಖ್ಯಾಬಲದ  ಮೇಲೆ ಸರ್ಕಾರ ನಿರಾತಂಕವಾಗಿ ತನ್ನ ಉದ್ದೇಶ ಪೂರೈಸಿಕೊಳ್ಳುತ್ತದೆ. ಹೀಗಾಗಿ  ವಿಳಂಬ ಧೋರಣೆ ಅನುಸರಿಸಿದರೆ ರಾಜಕೀಯ ಲೆಕ್ಕಾಚಾರಗಳು ತಲೆ ಕೆಳಗಾಗಬಹುದು. ಹಾಗಾಗುವುದು  ಬೇಡ ಎಂಬ ಕಾರಣಕ್ಕಾಗಿ ಶುಕ್ರವಾರದಂದೇ ಮುಖ್ಯಮಂತ್ರಿಯಾಗಿ ಆಗಿ ಪ್ರಮಾಣ ವಚನ ಸ್ವೀಕರಿಸುವಂತೆ ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿತು.

2007ರಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಕೂಟ ಸರ್ಕಾರದ ಕಾಲದಲ್ಲಿ ಮುಖ್ಯಮಂತ್ರಿಯಾಗಿ ಮೊದಲ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ ಸಕಾಲಕ್ಕೆ ಜೆಡಿಎಸ್ ಬೆಂಬಲ ದೊರೆಯದ  ಕಾರಣ ರಾಜೀನಾಮೆ ನೀಡಿದ್ದರು.

ಆನಂತರ ರಾಜ್ಯದ ಮೇಲೆ  ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಗಿತ್ತಲ್ಲದೆ 2008 ರಲ್ಲಿ ವಿಧಾನಸಭೆಗೆ ಚುನಾವಣೆ  ನಡೆದಿತ್ತು. ಈ ಚುನಾವಣೆಯಲ್ಲಿ ಗೆದ್ದು ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚಿಸಿದ ಯಡಿಯೂರಪ್ಪ ಎರಡನೇ ಬಾರಿ ಮುಖ್ಯಮಂತ್ರಿಯಾದರು. 

ಇದಾದ  ಬಳಿಕ 2018ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ ಕಾರಣಕ್ಕಾಗಿ ಅತ್ಯಂತ  ದೊಡ್ಡ ಪಕ್ಷವಾಗಿದ್ದ ಬಿಜೆಪಿಯನ್ನು ರಾಜ್ಯಪಾಲ ವಜೂಭಾಯಿ ವಾಲಾ ಅವರು ಸರ್ಕಾರ ರಚಿಸಲು  ಆಹ್ವಾನ ನೀಡಿದ್ದರು. ಹದಿನಾಲ್ಕು ತಿಂಗಳ ಹಿಂದೆ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲಾಗದೆ  ಮೂರೇ ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com