ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ: 'ರಾಜಾಹುಲಿ'ಯ ರಾಜಕೀಯ ಜೀವನದ ಹಿನ್ನೋಟ

ನಾಲ್ಕನೇ ಬಾರಿಗೆ ಕರ್ನಾಟಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಫೆ. 27, 1943ರಂದು ..
ಬಿ.ಎಸ್ ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪ
ಬೆಂಗಳೂರು:  ನಾಲ್ಕನೇ ಬಾರಿಗೆ ಕರ್ನಾಟಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ಫೆ. 27, 1943ರಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಪ್ಪ ಮತ್ತು ತಾಯಿ ಪುಟ್ಟತಾಯಮ್ಮ. 
ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ ಯಡಿಯೂರಪ್ಪ, 1965ರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆಯ ಗುಮಾಸ್ತರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಶಿಕಾರಿಪುರಕ್ಕೆ ತೆರಳಿ, ವೀರಭದ್ರ ಶಾಸ್ತ್ರಿಯವರ ಶಂಕರ ಅಕ್ಕಿ ಗಿರಣಿಯಲ್ಲಿ ಗುಮಾಸ್ತರಾಗಿ ಸೇರಿದರು. 1967ರಲ್ಲಿ ಮೈತ್ರಾದೇವಿಯವರನ್ನು ವಿವಾಹವಾದರು.
ಬಿ.ಎಸ್.ಯಡಿಯೂರಪ್ಪನವರು ಕಾಲೇಜು ದಿನಗಳಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದರು. 1970ರಲ್ಲಿ ಆರ್‍ಎಸ್‍ಎಸ್‍ನ ಶಿಕಾರಿಪುರ ಘಟಕದ ಕಾರ್ಯವಾಹರಾಗಿ ನೇಮಕಗೊಳ್ಳುವ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದರು. 
ಜನಸಂಘದ ಶಿಕಾರಿಪುರ ತಾಲೂಕು ಅಧ್ಯಕರಾಗಿಯೂ ನೇಮಕಗೊಂಡರು. ನಂತರ 1972ರಲ್ಲಿ ಶಿಕಾರಿಪುರ ನಗರ ಪಾಲಿಕೆಗೆ ಚುನಾಯಿತರಾದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧಿತರಾದ ಯಡಿಯೂರಪ್ಪನವರು ಬಳ್ಳಾರಿ ಮತ್ತು ಶಿವಮೊಗ್ಗ ಜೈಲಿನಲ್ಲಿದ್ದರು. 
1985ರಲ್ಲಿ ಬಿಜೆಪಿಯ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು. 1988ರಲ್ಲಿ ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು. 1983ರಲ್ಲಿ ಶಿಕಾರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. 
1994ರ ವಿಧಾನಸಭೆ ಚುನಾವಣೆ ನಂತರ ವಿಧಾನಸಭೆಯ ಪ್ರತಿಪಕ್ಷ ನಾಯಕರಾದರು. 1999ರ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನನುಭವಿಸಿದ ಇವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. 2004ರ ಚುನಾವಣೆಯಲ್ಲಿ ಪುನಃ ವಿಧಾನಸಭೆಗೆ ಆಯ್ಕೆಯಾಗಿ ಪ್ರತಿಪಕ್ಷ ನಾಯಕರಾದರು.
2008ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರು ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲದೊಂದಿಗೆ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರನ್ನು ಆಗ ಯಡಿಯೂರಪ್ಪನವರು 45,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. 
ಆಗ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ದೊರೆತು, ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರಕಾರ ಕರ್ನಾಟಕದಲ್ಲಿ ರಚನೆಗೊಂಡಿತು. ಮೇ 30, 2008ರಂದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಎರಡನೇ ಬಾರಿ ಅಧಿಕಾರ ಸ್ವೀಕರಿಸಿದರು.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಕರ್ನಾಟಕದ ಲೋಕಾಯುಕ್ತ ನೀಡಿದ ತನಿಖಾ ವರದಿಯಲ್ಲಿ ಯಡಿಯೂರಪ್ಪನವರ ಹೆಸರಿತ್ತು. ಆದ್ದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿಯ ಹೈಕಮಾಂಡ್ ಯಡಿಯೂರಪ್ಪನವರಿಗೆ ಸೂಚಿಸಿತು. ಜುಲೈ 31, 2011ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪನವರು ರಾಜೀನಾಮೆ ನೀಡಿದರು.
ನಂತರ ನವೆಂಬರ್ 30, 2011ರಂದು ಶಾಸಕ ಸ್ಥಾನ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ಯಡಿಯೂರಪ್ಪ ರಾಜೀನಾಮೆ ನೀಡಿದರು. 2011ರ ಏಪ್ರಿಲ್‍ನಲ್ಲಿ ಕರ್ನಾಟಕ ಜನತಾ ಪಕ್ಷ ಎಂಬ ನೂತನ ಪಕ್ಷವನ್ನು ನೋಂದಾಯಿಸಿದರು. 2012ರಲ್ಲಿ ಕರ್ನಾಟಕ ಜನತಾ ಪಕ್ಷಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. 2013ರ ಮೇನಲ್ಲಿ ಕರ್ನಾಟಕ ಜನತಾ ಪಕ್ಷದಿಂದ ಶಿಕಾರಿಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದರು.
ನವೆಂಬರ್ 2013ರಲ್ಲಿ ಯಾವುದೇ ಷರತ್ತಿಲ್ಲದೇ ಬಿಜೆಪಿಗೆ ಹಿಂದಿರುಗುವುದಾಗಿ ಯಡಿಯೂರಪ್ಪ ಘೋಷಿಸಿದರು. ಜನವರಿ 2, 2014ರಂದು ಬಿಜೆಪಿಯಲ್ಲಿ ಕೆಜೆಪಿಯನ್ನು ವಿಲೀನಗೊಳಿಸಿದರು. ನಂತರ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 3,63,305 ಅಂತರದಿಂದ ಜಯಗಳಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ನವೆಂಬರ್ ೧೨, ೨೦೦೭ ರಂದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು. ಈ ಮೂಲಕ ದಕ್ಷಿಣ ಭಾರತ ರಾಜ್ಯಗಳಲ್ಲಿ, ಬಿಜೆಪಿಯ ಮೊದಲ ಮುಖ್ಯಮಂತ್ರಿಯೆನಿಸಿದರು
ಧರಂಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು 2006ರಲ್ಲಿ ಜೆಡಿಎಸ್ ವಾಪಸ್ ಪಡೆಯಿತು. ನಂತರ ರಚನೆಗೊಂಡ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಯಡಿಯೂರಪ್ಪನವರು ಉಪ ಮುಖ್ಯಮಂತ್ರಿಯಾದರು.
 ಮೊದಲ 20 ತಿಂಗಳು ಕುಮಾರಸ್ವಾಮಿಯವರು ಮುಖ್ಯಮಂತ್ರಿ ಮತ್ತು ನಂತರದ 20 ತಿಂಗಳು ಯಡಿಯೂರಪ್ಪನವರು ಮುಖ್ಯಮಂತ್ರಿ ಎಂದು ಸರಕಾರ ರಚನೆ ಸಂದರ್ಭದಲ್ಲಿ ಉಭಯ ಪಕ್ಷಗಳ ನಡುವೆ ಒಪ್ಪಂದವಾಗಿತ್ತು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಉಪಮುಖ್ಯಮಂತ್ರಿ ಯಡಿಯೂರಪ್ಪನವರು ಹಣಕಾಸು ಖಾತೆಗೂ ಸಚಿವರಾಗಿದ್ದರು.
ಒಪ್ಪಂದದಂತೆ 2007ರ ಅಕ್ಟೋಬರ್‍ನಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕಾದಾಗ, ಕುಮಾರಸ್ವಾಮಿಯವರು ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲು ನಿರಾಕರಿಸಿದರು. ಜೆಡಿಎಸ್ ನಡೆ ವಿರೋಧಿಸಿ ಯಡಿಯೂರಪ್ಪ ಮತ್ತು ಬಿಜೆಪಿಯ ಎಲ್ಲ ಸಚಿವರು ರಾಜೀನಾಮೆ ನೀಡಿದರು. ಸಮ್ಮಿಶ್ರ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಅಕ್ಟೋಬರ್ 5ರಂದು ಬಿಜೆಪಿ ಹಿಂಪಡೆಯಿತು. 
ನಂತರ ರಾಷ್ಟ್ರಪತಿ ಆಡಳಿತ ಶುರುವಾಯಿತು. ನವೆಂಬರ್ 7ರಂದು ಬಿಜೆಪಿ ಮತ್ತು ಜೆಡಿಎಸ್ ನಡುವಿನ ಭಿನ್ನಮತ ಶಮನಗೊಂಡು ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಂಡಿತು. ನ. 12, 2007ರಂದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಪ್ರಮಾಣವಚನ ಸ್ವೀಕರಿಸಿದರು. ಆದರೆ ಸಚಿವರಿಗೆ ಖಾತೆ ಹಂಚಿಕೆ ವೇಳೆ ಭಿನ್ನಮತ ಉಲ್ಬಣಗೊಂಡಿತು. ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸಮ್ಮಿಶ್ರ ಸರಕಾರ ಅಂತ್ಯಗೊಂಡು, ಯಡಿಯೂರಪ್ಪನವರು ನವೆಂಬರ್ 19, 2007ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು.
ಮತ್ತೆ 2014 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.  ಮೇ 17 ರಂದು 3ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು,  ಹಾಗೂ ಮೇ 19 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ಈಗ ಮತ್ತೆ ನಾಲ್ಕನೇ ಬಾರಿಗೆ ಸಿಎಂ ಹುದ್ದೆ ಅಲಂಕರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com