ಬಿಜೆಪಿ ಸರ್ಕಾರಕ್ಕೆ ವಿಷಯಾಧಾರಿತ ಬೆಂಬಲ: ಎಚ್ ಡಿ ದೇವೇಗೌಡ

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ತಂದೆಯಾಗಿ ಹೇಳುತ್ತಿದ್ದೇನೆ ಬಿಜೆಪಿಗೆ ವಿಷಯಾಧಾರಿತ ಬೆಂಬಲ ನೀಡಲು ಸಿದ್ದ ....
ಎಚ್ ಡಿ ದೇವೇಗೌಡ
ಎಚ್ ಡಿ ದೇವೇಗೌಡ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ತಂದೆಯಾಗಿ ಹೇಳುತ್ತಿದ್ದೇನೆ ಬಿಜೆಪಿಗೆ ವಿಷಯಾಧಾರಿತ ಬೆಂಬಲ ನೀಡಲು ಸಿದ್ದ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಶನಿವಾರ ತಿಳಿಸಿದ್ದಾರೆ. ಆದರೆ ಬಿಜೆಪಿಗೆ ಅಧಿಕೃತವಾಗಿ ಬಾಹ್ಯ ಬೆಂಬಲ ನೀಡುವ ಕುರಿತಂತೆ ಸ್ಪಷ್ಟವಾಗಿ ಏನನ್ನೂ ಹೇಳದೆ ನುಣುಚಿಕೊಂಡಿದ್ದಾರೆ. ಈ ಮೂಲಕ ಜೆಡಿಎಸ್ ದ್ವಂದ್ವ ನಿಲುವು ತಳೆದಿರುವುದು ಸ್ಪಷ್ಟವಾಗಿದೆ.
ಪಕ್ಷದ ಕಚೇರಿಯಲ್ಲಿ ನಗರದ ಎರಡು ವಿಧಾನ ಸಭಾ ಕ್ಷೇತ್ರಗಳ ಮುಖಂಡರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧನ ವಿನಿಯೋಗ ವಿಧೇಯಕಕ್ಕೆ ನಮ್ಮ ಬೆಂಬಲ ಇರುತ್ತದೆ. ಪ್ರಾದೇಶಿಕ ಪಕ್ಷವಾಗಿ ನಮ್ಮ ಕೆಲಸ ನಾವು ಮಾಡುತ್ತೇವೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಪ್ಪನಾಗಿ ನಾನು ಹೇಳುತ್ತಿದ್ದೇನೆ ಬಿಜೆಪಿಗೆ ವಿಷಯಾಧಾರಿತ ಬೆಂಬಲ ನೀಡಲು ಸಿದ್ಧ ಎಂದರು.
ಆಮೂಲಕ ಜೆಡಿಎಸ್ ಶಾಸಕರ ಒತ್ತಾಯಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಮಣಿದಂತೆ ಕಂಡು ಬರುತ್ತಿದೆ. ಶುಕ್ರವಾರ ರಾತ್ರಿ ಖಾಸಗಿ ಹೋಟೆಲ್ ನಲ್ಲಿ ಶಾಸಕರ ಸಭೆ ನಡೆಸಿದ ಕುಮಾರಸ್ವಾಮಿಗೆ ಬಹುತೇಕ ಶಾಸಕರು ಬಿಜೆಪಿಗೆ ಬಾಹ್ಯ ಅಥವಾ ನೇರ ಬೆಂಬಲ ವ್ಯಕ್ತಪಡಿಸಲು ಸಮ್ಮತಿಸುವಂತೆ ಒತ್ತಡ ಹೇರಿದ್ದರು.ಆದರೆ ಕುಮಾರಸ್ವಾಮಿ ಈ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸದೆ ಮಾಜಿ ಪ್ರಧಾನಿ ಅವರನ್ನು ಭೇಟಿ ಮಾಡಿ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದರು.
ಯಾರೂ ಏನೇ ಮಾಡಿದರೂ ಜೆಡಿಎಸ್ ಅನ್ನು ಮುಗಿಸಲು ಸಾಧ್ಯವಿಲ್ಲ. ಸರ್ಕಾರ ಹೋಗಿದ್ದಕ್ಕೆ ಚಿಂತಿಸುವ ಅಗತ್ಯವಿಲ್ಲ. ಆದರೆ ಪಕ್ಷ ಉಳಿಸುವ ಕೆಲಸ ಆಗಬೇಕು. ಶಾಸಕ ಗೋಪಾಲಯ್ಯ ತಮ್ಮ ಹಾಗೂ ಕುಮಾರ ಸ್ವಾಮಿ ಮೇಲಿನ ತಪ್ಪು ಅಭಿಪ್ರಾಯದಿಂದಾಗಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಮ್ಮಗಳ ವಿರುದ್ಧ ಇಲ್ಲಸಲ್ಲದ ತಪ್ಪು ಹೇಳಿಕೆ ನೀಡಿ ಮುಂಬೈಗೆ ಹೋಗಿದ್ದಾರೆ. ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್ ಅವರಿಗೆ ಈಗಾಗಲೇ ದೂರು ಸಲ್ಲಿಸಲಾಗಿದ್ದು, ಸ್ಪೀಕರ್ ರಮೇಶ್ ಕುಮಾರ್ ಅತಿಶೀಘ್ರದಲ್ಲಿ ತೀರ್ಪು ಪ್ರಕಟಿಸಲಿದ್ದಾರೆ. ಸ್ಪೀಕರ್ ತೀರ್ಪಿನ ಬಳಿಕ ಚುನಾವಣೆ ಎದುರಾಗಲಿದೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಲಿದೆ ಎಂದು ದೇವೇಗೌಡರು ಹೇಳಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರ ಚುನಾವಣೆ ಸೋಲಿನಿಂದಾಗಿ ನಾನೇ ಪಕ್ಷದ ಜವಾಬ್ದಾರಿ ಹೆಗಲಿಗೇರಿಸಿಕೊಂಡು ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಸಿದ್ಧನಾಗಿದ್ದೇನೆ. ಮಹಿಳಾ ಮೀಸಲಾತಿ ಕಾಯಿದೆ ಜಾರಿಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಒತ್ತಡ ತರುತ್ತಿದ್ದಾರೆ. ಆದರೆ ಈ ಬಗ್ಗೆ ಧ್ವನಿ ಎತ್ತಲು ತಾವು ಲೋಕಸಭೆಯಲ್ಲಿ ಇಲ್ಲ. ಹೀಗಾಗಿ ಈ ಸಂಬಂಧ ಮಹಿಳಾ ಸಮಾವೇಶ ನಡೆಸಿ ಕೇಂದ್ರಕ್ಕೆ ಹಕ್ಕೊತ್ತಾಯ ಮನವಿ ಸಲ್ಲಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಬಿಬಿಎಂಪಿ ಚುನಾವಣೆ ಕೂಡ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿಯೂ ಪಕ್ಷಕ್ಕೆ ಬಲನೀಡುವ ಅಗತ್ಯತೆಯಿದೆ. ರಾಜ್ಯದಲ್ಲಿ ಜೆಡಿಎಸ್ ಬೆಂಬಲಿಗರು ಇನ್ನೂ ಇದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ 14 ತಿಂಗಳು ಬಹಳ ಕಷ್ಟ ನೋವು ಅನುಭವಿಸಿದ್ದಾರೆ. ಜೆ.ಪಿ.ಭವನದಲ್ಲಿ ಹಲವು ಬಾರಿ ಅತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಶೇ.20 ರಷ್ಟು ಮತ ನೀಡಿದವರಿದ್ದಾರೆ. ವಿಪಕ್ಷವಾಗಿ ರಚನಾತ್ಮಕವಾಗಿ ಕೆಲಸ ಮಾಡುವಂತೆ ಪಕ್ಷದ ಶಾಸಕರು, ನಾಯಕರಿಗೆ ಹೇಳಿದ್ದೇನೆ.
ನೂತನ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಶುಭಕೋರಿದ್ದು, ಅವರು ಉತ್ತಮ ಆಡಳಿತ ನೀಡಿದರೆ ಅದನ್ನು ಮೆಚ್ಚುತ್ತೇವೆ. ತಪ್ಪನ್ನು ಖಂಡಿಸುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com