ವಿವಿಧ ನಿಗಮ ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಪದಾಧಿಕಾರಿಗಳ ನೇಮಕಾತಿ ರದ್ದುಪಡಿಸಿದ ಬಿಎಸ್ ವೈ

ಬಿಜೆಪಿ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಿದ ಬೆನ್ನಲ್ಲೇ ಮೈತ್ರಿ ಸರ್ಕಾರದ ಅವಧಿಯಲ್ಲಿ ನೇಮಕ ಮಾಡಲಾಗಿದ್ದ ವಿವಿಧ ನಿಗಮ ಮಂಡಳಿಗಳು....
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
ಬೆಂಗಳೂರು: ಬಿಜೆಪಿ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಿದ ಬೆನ್ನಲ್ಲೇ ಮೈತ್ರಿ ಸರ್ಕಾರದ ಅವಧಿಯಲ್ಲಿ ನೇಮಕ ಮಾಡಲಾಗಿದ್ದ ವಿವಿಧ ನಿಗಮ ಮಂಡಳಿಗಳು, ಪ್ರಾಧಿಕಾರಗಳ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ನೇಮಕಾತಿಯನ್ನು ರದ್ದುಗೊಳಿಸಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ವಿಶ್ವಾಸ ಮತ ಯಾಚನೆ ವೇಳೆಯಲ್ಲಿ ದ್ವೇಷದ ರಾಜಕಾರಣ ಮಾಡುವುದಿಲ್ಲ. ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಹಾಗೂ ಎಚ್ ಡಿ ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡಿಲ್ಲ. ತಾವೂ ಆ ರೀತಿ ನಡೆದುಕೊಳ್ಳುತ್ತೇನೆ ಎಂದು ಹೇಳುತ್ತಲೇ ವಿಶ್ವಾಸಮತ ಗಳಿಸಿದ ಕೆಲವೇ ಗಂಟೆಗಳಲ್ಲಿ ರಾಜಕೀಯ ನೇಮಕಾತಿ ಎಂದೇ ಕರೆಯಲ್ಪಡುವ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಪ್ರಾಧಿಕಾರ ಹಾಗೂ ಪದಾಧಿಕಾರಿಗಳ ನೇಮಕಾತಿಯನ್ನು ರದ್ದುಗೊಳಿಸಿದ್ದಾರೆ.
ಮುಖ್ಯಮಂತ್ರಿ ಅವರ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ಸುತ್ತೋಲೆ ಹೊರಡಿಸಿ, ಹಿಂದಿನ ಎಲ್ಲಾ ರಾಜಕೀಯ ನೇಮಕಾತಿಗಳನ್ನು ತಕ್ಷಣದಿಂದಲೇ ರದ್ದುಪಡಿಸಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ನಿಗಮ ಮಂಡಳಿಗಳ ಅಧಿಕಾರವನ್ನು ವಹಿಸಿಕೊಳ್ಳುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಮೈತ್ರಿ ಸರ್ಕಾರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಶಾಸಕರು ಹಾಗೂ ಪಕ್ಷದ ಪ್ರಮುಖರಿಗೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ ಅಸಮಾಧಾನವನ್ನು ಸರಿಪಡಿಸುವ ಕೆಲಸ ಮಾಡಿದ್ದರು. ಆದರೂ ಜೆಡಿಎಸ್ ಮತ್ತು ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ಅಧ್ಯಕ್ಷರು, ಪದಾಧಿಕಾರಿಗಳ ನೇಮಕಾತಿಯನ್ನು ಮಾಡಿರಲಿಲ್ಲ. ಅಷ್ಟರೊಳಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಇತ್ತೀಚೆಗೆ ಅಧಿಕಾರಕ್ಕೇರಿದ ಶಾಸಕರು, ಮುಖಂಡರಿಗೆ ಭಾರೀ ನಿರಾಶೆಯಾಗಿದೆ.
ಈಗಾಗಲೇ ಕೆಲವು ನಿಗಮ ಮಂಡಳಿಗಳು, ಪ್ರಾಧಿಕಾರಗಳ ಅಧ್ಯಕ್ಷರು ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನು ಕೆಲವರು ತಮ್ಮನ್ನು ಬದಲಾಯಿಸಬಾರದು, ಒಂದು ವೇಳೆ ಬದಲಾಯಿಸಿದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com